ಚಿಕ್ಕಬಳ್ಳಾಪುರ: ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದಂತಹ ಯಾವುದೇ ಪ್ರಕರಣಗಳು ಶಿಕ್ಷಾರ್ಹ ಅಪರಾಧವಾಗಿದ್ದು, ಈಬಗ್ಗೆ ನಾಗರೀಕರು ಎಚ್ಚರಗೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಭಿಪ್ರಾಯಪಟ್ಟರು.
ನಗರದ ಡ್ರೀಮ್ ಸಿಟಿ ಲೇಔಟ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೂತನವಾಗಿ ನಿರ್ಮಿಸಿರುವ ಸರಕಾರಿ ಬಾಲಕಿಯರ ಬಾಲಮಂದಿರ ಲೋಕಾ ರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಂಕಷ್ಟ ಪರಿಸ್ಥಿತಿಯಲ್ಲಿರುವ ಅನಾಥ, ನಿರ್ಗತಿಕ, ದೌರ್ಜನ್ಯಕ್ಕೊಳಗಾದ ಮಕ್ಕಳು, ಬಾಲಕಾರ್ಮಿಕ ರಿಗೆ, ಸಂಘರ್ಷಕ್ಕೊಳಪಟ್ಟ ಹೆಣ್ಣು ಮಕ್ಕಳಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲು ಇರುವ ಕೇಂದ್ರವೇ ಬಾಲಕಿಯರ ಬಾಲಮಂದಿರವಾಗಿದೆ.ಕಾನೂನಿನಲ್ಲಿ ಬಾಲಾಪರಾಧಗಳಿಗೆ ಕಠಿಣ ಶಿಕ್ಷೆಯಿದ್ದರೂ ಕೂಡ ಕೆಲವು ದುರುಳರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಇದು ನಿಲ್ಲಬೇಕು.
ಇತ್ತೀಚಿಗೆ ಇಂತಹ ಪ್ರಕರಣದಲ್ಲಿ ಭಾಗಿಯಾದವರಿಗೆ ಕೋರ್ಟು ೨೦ ವರ್ಷಗಳ ಕಠಿಣ ಶಿಕ್ಷೆ ಜಾರಿ ಗೊಳಿಸಿದೆ. ಬಾಲವಿವಾಹಗಳಿಗೂ ಕೂಡ ಇದೇ ತೆರನಾದ ಶಿಕ್ಷೆಯಿದ್ದು ಪ್ರಕರಣ ಬೆಳಕಿಗೆ ಬಂದರೆ ಶಿಕ್ಷೆ ಖಾಯಂ ಆಗಲಿದೆ.ಯುವಸಮುದಾಯ, ಹಿರಿಯ ನಾಗರೀಕರು ಇತ್ತ ಒಮ್ಮೆ ಆಲೋಚಿಸಬೇಕಿದೆ ಎಂದು ತಿಳಿಸಿದರು.
ಸರಕಾರ ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.ಎಲ್ಲಕ್ಕೂ ಕಳಶಪ್ರಾಯವಾಗಿರುವ ಶಿಕ್ಷಣ ಪಡೆದರೆ ಏನಾದರೂ ಸಾಧಿಸಲು ಸಾಧ್ಯ.ಬಾಲಮಂದಿರದ ಮಕ್ಕಳು ಆಗಿಹೋಗಿರುವ ಬಗ್ಗೆ ಚಿಂತೆ ಮಾಡದೆ ಚಿಂತನೆ ಮಾಡಿದರೆ ಸಾಧಕರ ಸಾಲಿನಲ್ಲಿ ನಿಲ್ಲಲು ಸಾಧ್ಯ ಎಂದರು.
ಒAದು ಕಾಲದಲ್ಲಿ ಅಂಗನವಾಡಿ ಕೆಲಸಕ್ಕೆ ಸೇರಲು ಮೀನಾ ಮೇಷ ಎಣಿಸುತ್ತಿದ್ದರು. ಈಗ ಡಬಲ್ ಡಿಗ್ರಿ ಮಾಡಿದವರೂ ಕೂಡ ಅರ್ಜಿ ಸಲ್ಲಿಸುತ್ತಿದ್ದು ಅರ್ಹತೆಯಾಗಿ ಪಿಯುಸಿ ನಿಗಧಿ ಮಾಡಿದ್ದಾರೆ.ಅಂದರೆ ಕಾಲ ಎಲ್ಲದಕ್ಕೂ ಎಲ್ಲರಿಗೂ ಬುದ್ಧಿ ಕಲಿಸಲಿದೆ ಎನ್ನುವು ದಕ್ಕೆ ಇದು ಉದಾಹರಣೆಯಾಗಿದೆ. ೧೯೮೪ರಲ್ಲಿ ಐಸಿಡಿಎಸ್ ಯೋಜನೆ ಜಾರಿಯಾದಾಗ ಸಾಕ್ಷರತೆ ಪ್ರಮಾಣ ರಾಜ್ಯದಲ್ಲಿ ಶೇ ೩೦ ರಷ್ಟಿತ್ತು, ಸಾಕ್ಷರತೆ ಯೋಜನೆಯಿಂದಾಗಿ ಈಗ ಶೇ ೮೫ರಷ್ಟಿದೆ.ಸುಶಿಕ್ಷಿತರ ಪ್ರಮಾಣ ಏರಿಕೆಯಾಗಿದ್ದರೂ ಮಕ್ಕಳ ಮೇಲಿನ ದಾಳಿಗಳು ನಿಂತಿಲ್ಲದಿರುವುದು ಕಳವಳಕಾರಿ ಸಂಗತಿ.ಬಾಲ್ಯವಿವಾಹ ತಡೆಗಟ್ಟುವುದು ನಾಗರೀಕರ ಕರ್ತವ್ಯವಾಗಬೇಕಿದೆ ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಅಶ್ವತ್ಥಮ್ಮ ಮಾತನಾಡಿ ಬಾಲ್ಯವಿವಾಹ,ಮಕ್ಕಳ ಮೇಲಿನ ದೌರ್ಜನ್ಯ ತಡೆ,ಅವರಿಗೆ ಕಾನೂನಿನ ಅಡಿ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ನಾವು ಬದ್ಧತೆಯಿಂದ ಕರ್ತವ್ಯನಿರ್ವಹಿಸುತ್ತಿದ್ದೇವೆ.ಅಂಗನವಾಡಿ ಕಾರ್ಯಕರ್ತೆಯರು ಕೂಡ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದಾರೆ.ಇದುವರೆಗೆ ಸರಕಾರಿ ಬಾಲಮಂದಿರ ಮುಸ್ಲಿಂ ವಿದ್ಯಾರ್ಥಿನಿಲಯದಲ್ಲಿ ಕರ್ತತ್ಯ ನಿರ್ವಹಿಸುತ್ತಿದ್ದು ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಕಾರಣವಾಗಿ ಇಂದು ನೂತನ ಕಟ್ಟಡ ಲೋಕಾರ್ಪಣೆ ಆಗಿದೆ.ನಮ್ಮಲ್ಲಿ ಹಾಲಿ ೨೧ ಮಕ್ಕಳು ಆಶ್ರಯ ಪಡೆದಿದ್ದು ಇವರ ಯೋಗಕ್ಷೇಮವನ್ನು ಇಲಾಖೆ ನಿಯಮಾವಳಿಗಳಂತೆ ಮಾಡಲಾಗಿದೆ.ಅದರಂತೆ ಸಖೀ ಒನ್ ಸ್ಟಾಪ್ ಕೇಂದ್ರವು ಸಹ ಲೋಕಾರ್ಪಣೆ ಗೊಂಡಿದ್ದು ಇಲ್ಲೂ ಸಹ ನೊಂದ ಮಹಿಳೆಯರು ಅನುಕೂಲ ಪಡೆದುಕೊಳ್ಳಬಹುದು ಎಂದರು.
ಈ ವೇಳೆ ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಯ ವೆಂಕಟೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಲಗಂಗಾಧರ್, ನಾರಾಯಣಪ್ಪ, ಗಂಗಾಧರ್, ಮಹೇಶ್, ವೆಂಕಟೇಗೌಡ, ರಾಮಚಂದ್ರ, ಮಂಜುನಾಥ್, ನಾಗಮಣಿ, ರಮೇಶ್, ಮತ್ತಿತರರು ಇದ್ದರು.