Friday, 13th December 2024

ಬಿಜೆಪಿಯವರು ಯಾರೇ ಸತ್ತರೂ 1 ಕೋಟಿ ಪರಿಹಾರ

– ಮಾಜಿ ಸಚಿವ ಅಮರೇಗೌಡ ಬಯ್ಯಾಪುರ
– ರೈತರ ಮೇಲೆ ಕಾರು ಹಾಯ್ಸಿ ಕೊಲೆ ಪ್ರಕರಣ
– ಕುಷ್ಟಗಿಯಲ್ಲಿ ನಡೆದ ಪ್ರತಿಭನೆಯಲ್ಲಿ ಹೇಳಿಕೆ

ಕೊಪ್ಪಳ: ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲು ವಾಹನಗಳು ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿ ರೈತರನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಸರ್ಕಾರ 45 ಲಕ್ಷ ಪರಿಹಾರ ಮಾತ್ರ ನೀಡಿದೆ. ಬಿಜೆಪಿ ಮುಖಂಡರಲ್ಲಿ ಯಾರಾದರು ಸಾಯಲಿ ಕಾಂಗ್ರೆಸ್ ಪಕ್ಷದಿಂದ 1 ಕೋಟಿ ಪರಿಹಾರ ಕೊಡುವುದಾಗಿ ಮಾಜಿ ಸಚಿವ, ಕುಷ್ಟಗಿ ಶಾಸಕ ಅಮರೇ ಗೌಡ ಬಯ್ಯಾಪುರ ಬಿಜೆಪಿ ವಿರುದ್ಧ ಹರಿಹಾಯ್ದರು.

ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್‌ಕುಮಾರ ಮಿಶ್ರಾ ಪುತ್ರನ ಕಾರು ಹರಿದು ೮ ಜನ ರೈತರು ದುರ್ಮರಣ ಹೊಂದಿ ದ್ದನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್‌ ನಿಂದ ನಡೆದ ಪಂಜಿನ ಮೆರವಣಿಗೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿರುವ ಬಿಜೆಪಿಯದು ಅತ್ಯಂತ ಕೆಟ್ಟ ಸರ್ಕಾರ ಎಂದು ನಿರೂಪಿಸಿದೆ. ಚಳಿ, ಹಿಮ, ಮಳೆ ಲೆಕ್ಕಿಸದೇ ಹರ್ಯಾಣ, ಪಂಜಾಬ್, ಛತ್ತೀಸಗಢದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವರ ಪುತ್ರನ ಕಾರು ರೈತರ ಮೇಲೆ ಹರಿದು, ೮ ಜನ ರೈತರು ಮೃತಪಟ್ಟಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸದೇ 45 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ದೇಶದಲ್ಲಿ ಬಿಜೆಪಿ ತೊಲಗುವವರೆಗೂ ಈ ಹೋರಾಟ ನಡೆಯಲಿದೆ ಎಂದರು.

ಈ ಪ್ರಕರಣದಲ್ಲಿ ಇದುವರೆಗೂ ಮಂತ್ರಿ ಮಗನನ್ನು ಬಂಧಿಸಿಲ್ಲ. ಅಲ್ಲದೆ ಪ್ರತಿಭಟನಾನಿರತರಾದ ಕಾಂಗ್ರೆಸ್‌ನ ಪ್ರಿಯಾಂಕ ಗಾಂಧಿ ಅವರನ್ನು ಕೂಡಿ ಹಾಕಿದ್ದು, ಪೊಲೀಸರು ಅವರ ಮೈ-ಕೈ ಮುಟ್ಟಿದ್ದಾರೆ. ಪೊಲೀಸರು ಬಿಜೆಪಿ ಚೇಲಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಲ್ಲಯ್ಯ ವೃತ್ತದಿಂದ ಪಂಜಿನ ಮೆರವಣಿಗೆ ಆರಂಭಿಸಿ, ಮಾರುತಿ ವೃತ್ತದ ಮೂಲಕ ಬಸವೇಶ್ವರ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಲಾಯಿತು.

ಇದೇ ವೇಳೆ, ಮೃತ ರೈತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚಣೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಯುವಕರು, ಪದಾಧಿ ಕಾರಿಗಳು ಪ್ರತಿಭಟನೆಯಲ್ಲಿ ಇದ್ದರು.