ನವದೆಹಲಿ: ಸ್ವದೇಶಿ ವಸ್ತುಗಳ ಮೇಲೆ ಅವಲಂಬನೆ ಹೆಚ್ಚಿಸಿ ವಿದೇಶಿ ವಸ್ತುಗಳಿಗೆ ಗುಡ್ಬೈ ಹೇಳಿ ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ‘ಆತ್ಮನಿರ್ಭರ್ ಭಾರತ್’ ಎಂಬ ಸ್ವಾವಲಂಬನೆ ಎಂದು ಅರ್ಥಕೊಡುವ ಈ ಶಬ್ದವೀಗ 2020ನೇ ಸಾಲಿನ ಹಿಂದಿ ಪದ ಎಂಬುದಾಗಿ ‘ಆಕ್ಸ್‌ಫರ್ಡ್ ಘೋಷಿಸಿದೆ.’
ಆತ್ಮನಿರ್ಭರತಾಕ್ಕೆ ಇಂಗ್ಲೀಷಿನಲ್ಲಿ Self-Reliant, Self-Sufficient ಎಂಬ ಅರ್ಥವಿದೆ. ಕನ್ನಡದಲ್ಲಿ ಹೇಳುವುದಾದರೆ ಸ್ವಾಭಿಮಾನ, ಸ್ವಾವಲಂಬನೆ. ‘ನನ್ನ ಆತ್ಮಕ್ಕೂ ಹೊರೆ ಎನಿಸದಂತೆ’ ಮತ್ತು ‘ನಮಗೇ ನಾವು ಹೊರೆ ಆಗದಂತೆ’ ಎಂಬ ಅರ್ಥವೂ ಇದೆ ಎಂದು ವ್ಯಾಖ್ಯಾನಿಸಲಾಗಿದೆ.
ಪ್ರಧಾನಮಂತ್ರಿಯವರ ಭಾಷಣವನ್ನು ಅನುಸರಿಸಿ ‘ಆತ್ಮನಿರ್ಭರತಾ’ ಬಳಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಆದ್ದರಿಂದ ಪದವನ್ನು ಭಾರತದ ಸಾರ್ವಜನಿಕ ನಿಘಂಟಿನಲ್ಲಿ ಒಂದು ನುಡಿಗಟ್ಟು ಮತ್ತು ಪರಿಕಲ್ಪನೆಯಾಗಿ ಬಳಸುವ ಮೂಲಕ ಈ ಪದದ ಪ್ರಾಮುಖ್ಯವನ್ನು ಇನ್ನಷ್ಟು ಎತ್ತಿಹಿಡಿಯಲಾಗುವುದು ಎಂದು ಅದು ಹೇಳಿದೆ.
ಭಾಷಾತಜ್ಞರಾದ ಕೃತ್ತಿಕಾ ಅಗರ್‌ವಾಲ್, ಪೂನಂ ನಿಗಮ್ ಸಹಾಯ್ ಹಾಗೂ ಇಮೋಜೆನ್ ಫಾಕ್ಸ್‌ವೆಲ್ ಅವರನ್ನೊಳಗೊಂಡ ಸಲಹಾ ಸಮಿತಿ ಈ ಪದವನ್ನು ಆಯ್ಕೆ ಮಾಡಿದೆ.
ಆಧಾರ್ (2017), ನಾರಿಶಕ್ತಿ (2018) ಹಾಗೂ ಸಂವಿಧಾನ (2019) ಪದಗಳನ್ನು ಈ ಸಂಸ್ಥೆ ವರ್ಷದ ಹಿಂದಿ ಪದಗಳು ಎಂದು ಗುರುತಿಸಿತ್ತು.