Friday, 22nd November 2024

508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನಾಳೆ

ವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 6ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ಉದ್ದಗಲಕ್ಕೂ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅತ್ಯಾಧುನಿಕ ಸಾರ್ವಜನಿಕ ಸಾರಿಗೆಯನ್ನು ಒದಗಿಸಲು ಪ್ರಧಾನಿ ಆಗಾಗ್ಗೆ ಒತ್ತು ನೀಡಿದ್ದಾರೆ. ರೈಲ್ವೆ ದೇಶಾದ್ಯಂತ ಜನರ ಆದ್ಯತೆಯ ಸಾರಿಗೆ ವಿಧಾನವಾಗಿದೆ ಎಂದು ಗಮನಿಸಿದ ಅವರು, ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಮಹತ್ವವನ್ನು ಒತ್ತಿ ಹೇಳಿದರು. ಈ ದೃಷ್ಟಿಕೋನದಿಂದ ಮಾರ್ಗದರ್ಶನ ಪಡೆದ ಅಮೃತ್ ಭಾರತ್ ಸ್ಟೇಷನ್ ಯೋಜನೆಯನ್ನು ದೇಶಾದ್ಯಂತ 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಾರಂಭಿಸಲಾಯಿತು.

ಈ ಯೋಜನೆಯ ಭಾಗವಾಗಿ, 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಈ ನಿಲ್ದಾಣಗಳನ್ನು 24,470 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ನಗರದ ಎರಡೂ ಬದಿಗಳ ಸರಿಯಾದ ಏಕೀಕರಣದೊಂದಿಗೆ ಈ ನಿಲ್ದಾಣಗಳನ್ನು ‘ನಗರ ಕೇಂದ್ರಗಳಾಗಿ’ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಈ 508 ನಿಲ್ದಾಣಗಳು ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶ ದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18 ನಿಲ್ದಾಣಗಳು ಸೇರಿವೆ. ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿವೆ.