ಚೆನ್ನೈ: ಭಾರತ ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಬಾಂಗ್ಲಾದೇಶ(IND vs BAN) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬರೋಬ್ಬರಿ ಮೂರು ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಭಾರತ-ಬಾಂಗ್ಲಾ ನಡುವಣ ಮೊದಲ ಟೆಸ್ಟ್ ಗುರುವಾರ(ಸೆ.19) ರಿಂದ ಆರಂಭಗೊಳ್ಳಲಿದೆ.
ಜಡೇಜಾ ಬಾಂಗ್ಲಾ ವಿರುದ್ಧ 6 ವಿಕೆಟ್ ಉರುಳಿಸಿದರೆ 300 ವಿಕೆಟ್ ಕೆಡವಿದ ಭಾರತದ 6ನೇ ಬೌಲರ್ ಎಂಬ ದಾಖಲೆ ಬರೆಯಲಿದ್ದಾರೆ. ಸದ್ಯ ಜಡೇಜಾ 72 ಟೆಸ್ಟ್ ಪಂದ್ಯವನ್ನಾಡಿ 294* ವಿಕೆಟ್ ಕಿತ್ತಿದ್ದಾರೆ. 300 ವಿಕೆಟ್ ಕೀಳುತ್ತಿದ್ದಂತೆ ಮತ್ತೊಂದು ದಾಖಲೆಯನ್ನು ಕೂಡ ಜಡೇಜಾ ತಮ್ಮ ಹೆಸರಿಗೆ ಸೇರಿಕೊಳ್ಳಲಿದ್ದಾರೆ. 300 ಪ್ಲಸ್ ವಿಕೆಟ್ ಮತ್ತು 3 ಸಾವಿರ ರನ್ ಪೂರ್ತಿಗೊಳಿಸಿದ ವಿಶ್ವದ 11ನೇ, ಭಾರತದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಉಳಿದಿಬ್ಬರೆಂದರೆ ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ನಾಯಕ ಕಪಿಲ್‌ದೇವ್ ಮತ್ತು ಆರ್. ಅಶ್ವಿನ್.
ಭಾರತ ಪರ 300 ಪ್ಲಸ್ ಟೆಸ್ಟ್ ವಿಕೆಟ್ ಕಿತ್ತ ಬೌಲರ್‌ಗಳು
ಅನಿಲ್ ಕುಂಬ್ಳೆ-619 ವಿಕೆಟ್
ಆರ್. ಅಶ್ವಿನ್-516
ಕಪಿಲ್ ದೇವ್-434
ಹರ್ಭಜನ್ ಸಿಂಗ್-417
ಜಹೀರ್ ಖಾನ್-311
ಇಶಾಂತ್ ಶರ್ಮ-311
ಸಿಕ್ಸರ್ ದಾಖಲೆ ಮೇಲೂ ಕಣ್ಣು
ವಿಕೆಟ್ ಮಾತ್ರವಲ್ಲದೆ ಸಿಕ್ಸರ್ ದಾಖಲೆ ಮೇಲೂ ಜಡೇಜಾ ಕಣ್ಣಿಟ್ಟಿದ್ದಾರೆ. 6 ಸಿಕ್ಸರ್ ಬಾರಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ. ಆಗ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ದಾಖಲೆ ಪತನಗೊಳ್ಳಲಿದೆ. ಸಚಿನ್ 69 ಸಿಕ್ಸರ್ ಬಾರಿಸಿದ್ದಾರೆ. ಸದ್ಯ ಜಡೇಜಾ 64* ಸಿಕ್ಸರ್ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ R Ashwin: ಆಸೀಸ್ ಬೌಲರ್‌ಗಳ ದಾಖಲೆ ಮುರಿಯುವ ಸನಿಹದಲ್ಲಿ ಆರ್. ಅಶ್ವಿನ್
ಇತ್ತೀಚೆಗೆ ಮುಕ್ತಾಯ ಕಂಡ ಟಿ20 ವಿಶ್ವಕಪ್ ಗೆಲುವಿನ ಬಳಿಕ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿಧಾಯ ಹೇಳಿದ್ದರು. ಸದ್ಯ ಜಡೇಜಾ ಭಾರತ ಪರ ಏಕದಿನ ಮತ್ತು ಟೆಸ್ಟ್ ಮಾತ್ರ ಆಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜಡೇಜಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈಗಾಗಲೇ ಅವರ ಪತ್ನಿ ರಿವಾಬ ಬಿಜೆಪಿಯಲ್ಲಿ ಸಕ್ರೀಯ ರಾಜಕಾರಣಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಿವಾಬ ಗುಜರಾತ್‌ನ ಜಾಮ್‌ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ.
9 ಸಾವಿರ ರನ್ ಸನಿಹ ಕೊಹ್ಲಿ
ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಕ್ಲಬ್ ಸೇರಲು ಅವರಿಗೆ ಇನ್ನು ಕೇವಲ 152 ರನ್ ಅಗತ್ಯವಿದೆ. ಈ ಮೈಲುಗಲ್ಲು ತಲುಪಿದರೆ ಈ ಸಾಧನೆಗೈದ ಭಾರತದ 4ನೇ ಕ್ರಿಕೆಟಿಗನಾಗಿ ಮೂಡಿಬರಲಿದ್ದಾರೆ. ಉಳಿದವರೆಂದರೆ ಸಚಿನ್ ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,265) ಮತ್ತು ಸುನೀಲ್ ಗಾವಸ್ಕರ್ (10,122).