Sunday, 15th December 2024

2014ರಲ್ಲಿ ಇಂದಿನ ಬೆಲೆಗೆ ಎರಡು ಸಿಲಿಂಡರ್‌ ಲಭ್ಯವಿತ್ತು: ರಾಗಾ ಗೇಲಿ

ನವದೆಹಲಿ: ಇಂದಿನ ಬೆಲೆಗೆ 2014ರಲ್ಲಿ ಎರಡು ಗ್ಯಾಸ್‌ ಸಿಲಿಂಡರ್‌ಗಳು ಬರುತ್ತಿದ್ದವು ಎಂದು ರಾಹುಲ್‌ ಗಾಂಧಿ ಭಾನುವಾರ ಕೇಂದ್ರ ಸರ್ಕಾರವನ್ನು ಗೇಲಿ ಮಾಡಿದ್ದಾರೆ.

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಶನಿವಾರ ₹50 ಹೆಚ್ಚಳ ಮಾಡಲಾಗಿತ್ತು. ಹೀಗಾಗಿ, 14.2 ಕೆ.ಜಿ ತೂಕದ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ₹1002.50ಕ್ಕೆ ತಲುಪಿತ್ತು.

ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ ಅವರು, 2014ಕ್ಕೂ ಹಿಂದಿನ ಬೆಲೆ ಮತ್ತು ಈಗಿನ ಬೆಲೆ ಯನ್ನು ತುಲನೆ ಮಾಡಿದ್ದಾರೆ.

‘ಎಲ್‌ಪಿಜಿ ಸಿಲಿಂಡರ್‌ 2014ರಲ್ಲಿ ₹410 ಇತ್ತು. ₹827 ಸಬ್ಸಿಡಿ ದೊರೆಯುತ್ತಿತ್ತು. ಈಗ ಎಲ್‌ಪಿಜಿ ₹999 ದಾಟಿದೆ. ಶೂನ್ಯ ಸಬ್ಸಿಡಿ ದೊರೆಯುತ್ತಿದೆ. ಭಾರತೀಯ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಆಡಳಿತವೇ ಸೂಕ್ತ. ಇದು ನಮ್ಮ ಆರ್ಥಿಕ ನೀತಿಯೂ ಆಗಿದೆ’ ಎಂದು ಬರೆದುಕೊಂಡಿದ್ದಾರೆ.