Thursday, 12th December 2024

ಸೆಂಚೂರಿಯನ್‌ನಲ್ಲಿ ಸೋತ ಶ್ರೀಲಂಕಾ

ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 45 ರನ್‌ಗಳಿಂದ ಕೆಡವಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಯಿಂದ ಮುನ್ನಡೆ ಸಾಧಿಸಿತು.

ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಮಂಗಳವಾರ 2 ವಿಕೆಟ್‌ಗೆ 65 ರನ್‌ಗಳಿಂದ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡ 46.1 ಓವರ್‌ಗಳಲ್ಲಿ 180 ರನ್‌ಗಳಿಗೆ ಆಟ ಮುಗಿಸಿ, ಸೋಲೊಪ್ಪಿಕೊಂಡಿತು. 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 3 ರಿಂದ ಜೋಹಾನ್ಸ್‌ಬರ್ಗ್‌ನಲ್ಲಿ ಆರಂಭಗೊಳ್ಳಲಿದೆ.

ಶ್ರೀಲಂಕಾ ತಂಡ ಪರ ಕುಸಾಲ್ ಪೆರೇರಾ (64) ಹಾಗೂ ವನಿಂದು ಹಸರಂಗ (59) ಜೋಡಿ ಕೆಲಕಾಲ ಪ್ರತಿಹೋರಾಟ ನೀಡಿದರೂ ದಕ್ಷಿಣ ಆಫ್ರಿಕಾ ಬೌಲರ್‌ಗಳು ಅವಕಾಶ ನೀಡಿಲಿಲ್ಲ. ಭೋಜನ ವಿರಾಮದ ಬಳಿಕ ಕೆಲಹೊತ್ತಿನಲ್ಲೇ ದಕ್ಷಿಣ ಆಫ್ರಿಕಾ ಜಯದ ನಗೆ ಬೀರಿತು. ಲುಂಗಿ ಎನ್‌ಗಿಡಿ, ಅನ್ರಿಚ್ ನೋರ್ಜೆ, ವಿಯಾನ್ ಮುಲ್ಡೆರ್ ಹಾಗೂ ಲುಥೋ ಸಿಪಾಂಮ್ಲ ತಲಾ ಎರಡು ವಿಕೆಟ್ ಕಬಳಿಸಿದರು.

ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ, ಶತಕವೀರ ಫಾಫ್ ಡು ಪ್ಲೆಸಿಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.