Monday, 25th November 2024

School Problem: ಟೀಕೆಗೆ ಗುರಿಯಾಗಿದ್ದ ಆದರ್ಶ ಶಾಲೆಗೆ ಭೇಟಿ ನೀಡಿದ ಬಿಇಒ, ತಹಶೀಲ್ದಾರ್ ಮತ್ತು ತಂಡ ಪರಿಶೀಲನೆ

ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಆದರ್ಶ ಶಾಲೆಯಲ್ಲಿನ ಅವ್ಯವಸ್ಥೆ ಹಾಗೂ ಸಮಸ್ಯೆಗಳ ಕುರಿತು ಇತ್ತೀಚಿಗೆ ದಿನಪತ್ರಿಕೆಗಳಲ್ಲಿ ವರದಿಯಾಗಿ, ಶಾಲಾ ಮಕ್ಕಳ ಪೋಷಕರು, ಸಾರ್ವಜನಿಕರಿಂದ ಬಾರಿ ಚರ್ಚೆ ಮತ್ತು ಟೀಕೆಗೆ ಗುರಿಯಾಗಿತು.

ಸುಮಾರು 480 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಆದರ್ಶ ಶಾಲೆಯಲ್ಲಿನ ಸಮಸ್ಯೆಗಳ ಗಂಭೀರತೆ ಅರಿತ ತಹಶಿಲ್ದಾರ್ ಮಹೇಶ್ ಎಸ್ ಪತ್ರಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಅಕ್ಷರಾ ದಾಸೋಹ ಅಧಿಕಾರಿ ನರಸಿಂಹಯ್ಯ ಆರ್.ಐ ಅಮರ ನಾರಾಯಣ ಅವರೊಡನೆ ಮಂಗಳವಾರ ಆದರ್ಶ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ದೂರುಗಳ ಮಹಾಪೂರವೇ ಹರಿದು ಬಂದವು. ಇದರಿಂದಾಗಿ ಒಂದು ಕ್ಷಣ ವಿಚಲಿತರಾದ ತಹಶಿಲ್ದಾರ್ ಶಾಲೆಯಲ್ಲಿನ ಶೌಚಾಲಯ ದತ್ತ ಧಾವಿಸಿ ಪರಿಶೀಲನೆ ನಡೆಸಿದಾಗ, ಮುರಿದು ಹೋದ ಚಿಲಕ ವಿಲ್ಲದ ಕಿಟಕಿ ಬಾಗಿಲುಗಳು, ನೀರು ಬಾರದೆ ಕೆಟ್ಟು ನಿಂತ ನಲ್ಲಿಗಳು, ಸ್ವಚ್ಚತೆ ಕಾಣದ ಶೌಚಾಲಯಗಳನ್ನು ಕಂಡ ಸ್ಥಳದಲ್ಲಿಯೇ ಶಾಲೆಯ ಪ್ರಾಂಶುಪಾಲೆ ವಿನುತ ಅವರನ್ನು ತರಾಟೆಗೆ ತೆಗೆದುಕೊಂಡ ರಲ್ಲದೆ ಶೀಘ್ರವಾಗಿ ರಿಪೇರಿ ಮಾಡಿಸಿ ಸ್ವಚ್ಚತೆಯನ್ನು ಕಾಪಾಡುವಂತೆ ಸೂಚಿಸಿದರು.

ಅಡುಗೆ ಮನೆಗೆ ತೆರಳಿದ ತಹಶೀಲ್ದಾರ್ ಅವರು ಅಹಾರ ಸಾಮಾಗ್ರಿಗಳನ್ನು ಪರಿಶೀಲನೆ ನಡೆಸಿ,ಅಡಿಗೆ ತಯಾರು ಮಾಡುವ ಸಿಬ್ಬಂದಿಗಳಿಗೆ ಅಹಾರದ ಗುಣಮಟ್ಟ ಹಾಗೂ ಸ್ವಚ್ಚತೆ ಕಾಪಾಡಿಕೊಂಡು ಯಾವುದೇ ರೀತಿಯ ದೂರು ಗಳು ಬಾರದಂತೆ ಕೆಲಸ ಮಾಡಬೇಕೆಂದು ತಿಳಿಸಿದರು. ಐದು ಮಂದಿ ಅಡುಗೆ ಸಿಬ್ಬಂದಿಗಳು ಇರಬೇಕಾದ ಸ್ಥಳದಲ್ಲಿ ಕೇವಲ ಇಬ್ಬರು ಮಾತ್ರ ಕೆಲಸ ಮಾಡುತ್ತಿರುವುದನ್ನು ತಹಶೀಲ್ದಾರ್ ಅವರ ಗಮನಕ್ಕೆ ತರಲಾಯಿತು.

ನಂತರ ತಹಶಿಲ್ದಾರ್ ವಿದ್ಯಾರ್ಥಿಗಳ ಕೊಠಡಿಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯದ ಸ್ಚಚ್ಚತೆ,ಕಳಪೆ ಗುಣಮಟ್ಟದ ಅಹಾರ, ಅನ್ನವನ್ನು ಸರಿಯಾಗಿ ಬೇಯಿಸದೆ ಇರುವುದು,ಸರ್ಕಾರದ ನಿಯಮಾವಳಿಯಂತೆ ಬಾಳೆ ಹಣ್ಣು,ಮೊಟ್ಟೆಗಳನ್ನು ನೀಡದೆ ಇರುವುದರ ಕುರಿತು ದೂರುಗಳು ಕೇಳಿ ಬಂದವು.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ವ್ಯವಸ್ಥೆ ಇದ್ದರೂ ಕೂಡ ಇದುವರೆಗೂ ವಿದ್ಯಾರ್ಥಿ ಗಳಿಗೆ ಕಂಪ್ಯೂಟರ್ ಶಿಕ್ಷಣದ ಕುರಿತು ಕನಿಷ್ಠ ತಿಳುವಳಿಕೆಯನ್ನು ನೀಡದೆ, ಕಂಪ್ಯೂಟರುಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿ ಇಟ್ಟಿರುವಂತೆ ಕಂಡು ಬಂದವು.

ವಿದ್ಯಾರ್ಥಿಗಳಿಗೆ ಮೊದಲ ವಾರ್ಷಿಕ ಪರೀಕ್ಷೆಗೆ ಕೇವಲ ಹದಿನೈದು ದಿನಗಳು ಮಾತ್ರ ಬಾಕಿ ಇದೆ. ಆದರೆ ವಿದ್ಯಾರ್ಥಿ ಗಳಿಗೆ ಇಂಗ್ಲೀಷ್ ಭಾಷೆ ಬೋಧಿಸುವ ಶಿಕ್ಷಕರೆ ಇಲ್ಲದಿರುವುದನ್ನು ಕೇಳಿ ಕೆಂಡಾಮಂಡಲರಾದ ತಹಶೀಲ್ದಾರ್ ಅವರು ಬಿಇಒ ಮತ್ತು ಪ್ರಾಂಶುಪಾಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಮುಂದಿನ ಶುಕ್ರವಾರದೊಳಗೆ ಶಾಲೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕ.ಇಂಗ್ಲಿಷ್ ಬೋಧಿಸುವ ಶಿಕ್ಷಕರನ್ನು ನೇಮಕ, ಅವಶ್ಯವಿರುವ ಅಡುಗೆ ಸಿಬ್ಬಂದಿಗಳನ್ನು ನೇಮಿಸಿಕೊಂಡು ಆದರ್ಶ ಶಾಲೆಯನ್ನು ಎಲ್ಲಾ ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಬೇಕೆಂದು ಆದೇಶಿಸಿದರು.