Friday, 22nd November 2024

Sexual Harresment: ಲೈಂಗಿಕ ಕಿರುಕುಳ ವಿರೋಧಿಸಿದಕ್ಕೆ 6 ವರ್ಷದ ಬಾಲೆಯ ಜೀವ ತೆಗೆದ ಪ್ರಿನ್ಸಿಪಾಲ್!

Sexual Harresment

ಗುಜರಾತ್: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ (Sexual Harresment) ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಪುಟಾಣಿ ಮಕ್ಕಳ ಮೇಲಿನ ದೌರ್ಜನ್ಯ ಇನ್ನಷ್ಟು ಆಘಾತಕಾರಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಕೂಡ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗುತ್ತಿದೆ. ಅಂತಹದೊಂದು ಘಟನೆ ಇತ್ತೀಚೆಗೆ ಗುಜರಾತ್‍ನಲ್ಲಿ ನಡೆದಿದರುವುದು ಬೆಳಕಿಗೆ ಬಂದಿದೆ. ಗುಜರಾತ್‍ನ ದಾಹೋಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರು ವರ್ಷದ ಬಾಲಕಿಗೆ ಶಾಲೆಯ ಪ್ರಿನ್ಸಿಪಾಲ್ ಲೈಂಗಿಕ ಕಿರುಕುಳ ನೀಡಿದ್ದು, ಇದನ್ನು ಆಕೆ ವಿರೋಧಿಸಿದ್ದಕ್ಕಾಗಿ ಆತ ಆಕೆಯನ್ನು ಕೊಂದ ಕಾರಣ ಪೊಲೀಸರು ಪ್ರಿನ್ಸಿಪಾಲ್‌ನನ್ನು ಬಂಧಿಸಿದ್ದಾರೆ.

ಸಿಂಗ್ವಾಡ್ ತಾಲೂಕಿನ ಗ್ರಾಮವೊಂದರಲ್ಲಿ ಗುರುವಾರ ಶಾಲೆಯ ಕಾಂಪೌಂಡ್ ಒಳಗೆ ಬಾಲಕಿಯ ಶವ ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಶುರುಮಾಡಿದ್ದಾರೆ. ಈ ವೇಳೆ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಮೇಲೆ ಶಾಲೆಯ ಪ್ರಿನ್ಸಿಪಾಲ್ ಗೋವಿಂದ್ ನಾಟ್ ಎಂಬಾತ ಲೈಂಗಿಕ ದೌರ್ಜನ್ಯ ಎಸಗುವ ಪ್ರಯತ್ನಮಾಡಿದ್ದಾನೆ. ಬಾಲಕಿ ವಿರೋಧಿಸಿದಾಗ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್ದೀಪ್ ಸಿಂಗ್ ಝಾಲಾ ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ 10.20 ರ ಸುಮಾರಿಗೆ ಕಾರಿನಲ್ಲಿ ಹೋಗುತ್ತಿದ್ದ ಶಾಲೆಯ ಪ್ರಿನ್ಸಿಪಾಲ್ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಆತ ಕೊಲೆ ಮಾಡಿದ್ದಾನೆ. ಆ ದಿನ ಬಾಲಕಿ ಶಾಲೆಗೆ ಹೋಗಲಿಲ್ಲ ಎಂದು ಪೊಲೀಸರಿಗೆ ತನಿಖೆಯ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿಸಿದ್ದಾರೆ. ಇದರಿಂದ ಪ್ರಾಂಶುಪಾಲರ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ಪ್ರಶ್ನಿಸಿದಾಗ, ಆರಂಭದಲ್ಲಿ ಶಾಲೆಯಲ್ಲಿ ಬಿಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ನಂತರ, ಬಾಲಕಿಯನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಆ ದಿನ ಶಾಲೆಗೆ ಹೋಗುವ ದಾರಿಯಲ್ಲಿ, ಪ್ರಾಂಶುಪಾಲರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ಅವಳು ಅದನ್ನು ಪ್ರತಿರೋಧಿಸಿ ಕಿರುಚಲು ಶುರುಮಾಡಿದಾಗ ಅದನ್ನು ತಡೆಯಲು ಅವನು ಅವಳ ಬಾಯಿ ಮತ್ತು ಮೂಗನ್ನು ಮುಚ್ಚಿದ್ದಾನೆ. ಇದರಿಂದಾಗಿ ಅವಳು ಉಸಿರುಗಟ್ಟಿ ಸಾವನಪ್ಪಿದ್ದಾಳೆ. ಆರೋಪಿ ಶಾಲೆಗೆ ಬಂದು ಬಾಲಕಿಯ ಶವದೊಂದಿಗೆ ತನ್ನ ಕಾರನ್ನು ಪಾರ್ಕ್ ಮಾಡಿದ್ದಾನೆ.

ಸಂಜೆ 5 ಗಂಟೆಗೆ ಶವವನ್ನು ಹೊರತೆಗೆದು ಶಾಲಾ ಕಟ್ಟಡದ ಹಿಂಭಾಗದಲ್ಲಿ ಎಸೆದಿದ್ದಾನೆ. ನಂತರ ಅವನು ಅವಳ ಶಾಲಾ ಚೀಲ ಮತ್ತು ಚಪ್ಪಲಿಗಳನ್ನು ಅವಳ ತರಗತಿಯಲ್ಲಿ ಇಟ್ಟಿದ್ದಾನೆ. ಶಾಲೆ ಮುಗಿದ ನಂತರವೂ ಬಾಲಕಿ ಮನೆಗೆ ಬರದಿದ್ದಾಗ, ಆಕೆಯ ಪೋಷಕರು ಮತ್ತು ಸಂಬಂಧಿಕರು ಅವಳನ್ನು ಹುಡುಕಾಡಲು ಶುರು ಮಾಡಿದ್ದಾರೆ. ಆಗ ಶಾಲಾ ಕಟ್ಟಡದ ಹಿಂಭಾಗದ ಕಾಂಪೌಂಡ್‍ನಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಅವಳನ್ನು ಲಿಮ್ಖೇಡಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ವೈದ್ಯರು ಅವಳು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗರ್ಭಧಾರಣೆ ಮತ್ತು ಹೆರಿಗೆ ನಂತರ ಸೇವಿಸುವ ಆಹಾರದ ಬಗ್ಗೆ ಇರುವ ಈ ವಿಚಾರ ನಿಜವೇ? ಸುಳ್ಳೆ?

ಆರೋಪಿ ಸಂಜೆ ಶಾಲೆಯಿಂದ ಹೊರಟ ಸಮಯ ತುಂಬಾ ತಡವಾಗಿದ್ದ ಕಾರಣ ಈ ಪ್ರಕರಣದಲ್ಲಿ ಆತನು ತಪಿತಸ್ಥನೆಂದು ಪೊಲೀಸರಿಗೆ ಅನುಮಾನ ಬಂದಿದೆ. ವಿಚಾರಣೆಯ ನಂತರ ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯ ಶವ ಪತ್ತೆಯಾದ ಒಂದು ದಿನದ ನಂತರ, ಆಕೆಯ ಮರಣೋತ್ತರ ವರದಿಯಲ್ಲಿ ಅವಳು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.