Thursday, 12th December 2024

ಶ್ರೀಕೃಷ್ಣ ದೇವರಾಯನ ಪ್ರತಿಮೆ ವಿಜಯನಗರಕ್ಕೆ ಭೂಷಣ

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡ

1336hampiexpress1509@gmail.com

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆ ತಾಲೂಕನ್ನು ಕೇಂದ್ರೀಕೃತವಾಗಿಸಿ ವಿಜಯ ನಗರ ಜಿಲ್ಲೆಯನ್ನು ಸೃಷ್ಟಿಸಲಾಗುತ್ತಿದೆ. ನೂತನ ಜಿಲ್ಲೆಗೆ ಅದರದೇ ಆದ ವೈಶಿಷ್ಟ್ಯತೆಗಳಿಂದ ಮೆರಗು ನೀಡುವ ಉದ್ದೇಶದಿಂದ ಹೊಸಪೇಟೆ ವ್ಯಾಪ್ತಿಯ ಜೋಳದ ರಾಶಿ ಗುಡ್ಡದಲ್ಲಿ ವಿಜಯನಗರ ಸಾಮ್ರಾಜ್ಯದ ಅಭೂತ ಪೂರ್ವ ಅರಸ ಶ್ರೀಕೃಷ್ಣ ದೇವರಾಯನ 45 ಅಡಿ ಎತ್ತರದ ಕಂಚಿನ ಪ್ರತಿಮೆಯ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

ಗುಡ್ಡದ ಅಭ್ಯುದಯದಲ್ಲಿ ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಜತೆಗೆ ಕೆಳಪ್ರದೇಶದಲ್ಲಿ ಧ್ಯಾನಕೇಂದ್ರ ಹಾಗೂ ಕೃಷ್ಣದೇವರಾಯನ ಇತಿಹಾಸ ಸಾರುವ ದಾಖಲೆಗಳ ಮಾಹಿತಿಗಳನ್ನೊಳಗೊಂಡ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಿದ್ದು ಅದಕ್ಕಾಗಿ
ಮೂಲ ಸೌಕರ್ಯಗಳ ಕಾಮಗಾರಿಗೆ ಭೂಮಿಪೂಜೆಯೂ ನಡೆದಿದ್ದು, ನಿರ್ಮಾಣ ಪ್ರಕ್ರಿಯೆಗೆ ಚಾಲನೆಯೂ ದೊರೆತಿದೆ. ರಸ್ತೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಕಾಮಗಾರಿಗಾಗಿ 24 ಕೋಟಿ ರುಪಾಯಗಳ ವೆಚ್ಚದಲ್ಲಿ 10 ಕೋಟಿ ಅನುದಾನದ ಅಡಿಯಲ್ಲಿ ಯೋಜನೆ ರೂಪುಗೊಂಡಿದೆ.

ಆ ಮೂಲಕ ದಶಕಗಳಿಂದ ವಿಜಯ ನಗರ ಸಾಮ್ರಾಜ್ಯದ ಕೇಂದ್ರ ಬಿಂದುವಾಗಿ ಶ್ರೀಕೃಷ್ಣ ದೇವರಾಯರ ಪ್ರತಿಮೆ ಇಲ್ಲವೆಂದು ಕೊರಗುತ್ತಿದ್ದ ಸಾರ್ವಜನಿಕರ ಕನಸು ನೆರವೇರಲಿದೆ. ಪ್ರಾಕೃತಿಕ ತಾಣವಾಗಿ ಪರಿಸರ ಪ್ರಿಯರಿಗೆ ಜೋಳದರಾಶಿ ಗುಡ್ಡವು ಸ್ಥಳೀಯರ ಪ್ರವಾಸಿಗರ ಮನಸೂರೆ ಗೊಳ್ಳುವುದು ಖರೆ. ಆದರೆ ಈ ಮಧ್ಯೆ ಅದೇ ಗುಡ್ಡದಲ್ಲಿ ಸ್ವಾಮಿವಿವೇಕಾನಂದರ ಪ್ರತಿಮೆ ಯನ್ನು ಸ್ಥಾಪಿಸಲು ಉದ್ದೇಶಿಸಿರುವುದು ಕೊಂಚ ಮಟ್ಟಿಗೆ ಸಾಂಸ್ಕೃತಿಕ ಮನಗಳಿಗೆ ಗೊಂದಲವಾಗಿರುವುದು ಸಹಜ.

ಸ್ವಾಮಿವಿವೇಕಾನಂದರ ಪ್ರತಿಮೆಯನ್ನು ರಾಜ್ಯದ ಅಥವಾ ದೇಶದ ಯಾವುದೇ ಭಾಗದಲ್ಲಿದ್ದದರೂ ಸ್ಥಾಪಿಸಬಹುದು. ಆದರೆ ಶ್ರೀಕೃಷ್ಣ ದೇವರಾಯನ ಪ್ರತಿಮೆಯನ್ನು ಹಂಪಿಯ ಸುತ್ತಲಿನ ವ್ಯಾಪ್ತಿಯ ಸ್ಥಾಪಿಸುವುದು ಹೆಚ್ಚು ಅರ್ಥಪೂರ್ಣ ವಾಗುತ್ತದೆ. ಮೇಲಾಗಿ ರಾಯ ತನ್ನ ತಾಯಿ ನಾಗಲಾಂಬಿಕೆಯ ಹೆಸರಿನಲ್ಲಿ ನಾಗಲಾಪುರ ಎಂಬ ಊರನ್ನು ನಿರ್ಮಿಸುತ್ತಾನೆ. ಅದುವೆ ಇಂದಿನ
ಹೊಸಪೇಟೆ.

ಎರಡು ದಶಕಗಳ ಹಿಂದೆ ಹಂಪಿಯಲ್ಲಿ ಅನೇಕ ಸ್ಥಳಗಳಲ್ಲಿ ಹಸಿರು ಬಟ್ಟೆ ಹೊದಿಸಿ ಹಿಂದೂ ಸ್ಮಾರಕಗಳನ್ನೇ ಮತಾಂತರ ಮಾಡುವ ಆಧುನಿಕ ಇಸ್ಲಾಂ ಆಕ್ರಮಣಗಳು ಆರಂಭಗೊಂಡಿದ್ದವು. ಆ ಕಾಲಕ್ಕೆ ಹಿರಿಯ ಸಂಶೋಧಕ ರಾದ ನಾಡೋಜ ಡಾ.ಎಂ. ಚಿದಾನಂದ ಮೂರ್ತಿಗಳು ಮತ್ತು ಇತಿಹಾಸಕಾರರಾದ ಡಾ.ಸೂರ್ಯನಾಥ ಕಾಮತರು ಎಚ್ಚೆತ್ತು ಸ್ಥಳೀಯ ಯುವಕರು ಸಂಘ
ಪರಿವಾರ ದವರು ಮತ್ತು ರಾಜವಂಶಸ್ಥರಾದ ರಾಜಾ ಅಚ್ಯುತ ದೇವರಾಯ ಮತ್ತು ಮಗ ರಾಜಾ ಕೃಷ್ಣ ದೇವರಾಯರನ್ನು ಒಳಗೊಂಡ ಹಂಪಿ ಉಳಿಸಿ ಆಂದೋಲನ ಸಮಿತಿ ಸ್ಥಾಪಿಸಿ ಇಸ್ಲಾಂ ಆಕ್ರಮಣಗಳನ್ನು ತಡೆಯುವಲ್ಲಿ ಯಶಸ್ಸು ಗಳಿಸಿದ್ದರು.

ಹೀಗಾಗಿ ಇಂದಿಗೂ ಹಂಪಿ ಹೊಸಪೇಟೆ ಕಮಲಾಪುರ ಕಂಪ್ಲಿ ಬಳ್ಳಾರಿ ಭಾಗದಲ್ಲಿ ಸಂಘಪರಿವಾರ ಹಿಂದೂಪರ ಸಂಘಟನೆಗಳು ಸಂಘಟಿತರಾಗಿ ದೇಶ ಪರಂಪರೆ ಸಂಸ್ಕೃತಿ ಸ್ಮಾರಕ ವಿಚಾರದಲ್ಲಿ ಜಾಗೃತರಾಗಿದ್ದಾರೆ. ಈ ಕಾರಣದಿಂದಾಗಿಯೇ ಕಾಂಗ್ರೆಸ್ ಕೈಲಿದ್ದ ಬಳ್ಳಾರಿ ಇಂದು ಬಿಜೆಪಿಯ ಭದ್ರಕೋಟೆಯಾಗಿದೆ. ಸಂಘಪರಿವಾರ ಹಿಂದೂಪರ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಸಂಘಟನೆಗಳು ಇಂದು ಛತ್ರಪತಿ ಶಿವಾಜಿ ಸ್ವಾಮಿ ವಿವೇಕಾನಂದರು ವೀರ ಸಾವರ್ಕರರನ್ನು ಆದರ್ಶ ಪುರುಷರನ್ನಾಗಿ ಕಾಣ ಬಹುದು.

ಆದರೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಉದ್ದೇಶ ವಿದ್ಯಾರಣ್ಯರು ಹರಿಹರಬುಕ್ಕ ಸಹೋದರರು ಪ್ರೌಢದೇವರಾಯ ಶ್ರೀಕೃಷ್ಣದೇವರಾಯ ಕೊನೆಗೆ ಅಳಿಯ ರಾಮರಾಯರ ಸಾಧನೆ ಶೌರ್ಯ ಪರಾಕ್ರಮ ಆಡಳಿತ ಧರ್ಮರಕ್ಷಣೆ ಸಾಧನೆ ಕೊಡುಗೆ ಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅಭಿಮಾನಿಸದಿದ್ದರೆ ರಾಷ್ಟ್ರೀಯತೆಯಾಗಲಿ ಧರ್ಮ ಜಾಗೃತಿಯಾಗಲಿ ಪರಿಪಕ್ವವಾಗು ವುದೇ ಇಲ್ಲ. ಏಕೆಂದರೆ ಇಡೀ ಉತ್ತರಭಾರತವನ್ನು ಮುಸ್ಲಿಂ ರಾಜರುಗಳ ಆಕ್ರಮಿಸಿಕೊಂಡು ದಕ್ಷಿಣಭಾರತದತ್ತ ಧಾವಿಸುತ್ತಿದ್ದ ಕಾಲದಲ್ಲಿ ಹಿಂದೂಧರ್ಮವನ್ನು ಪುನರುತ್ಥಾನಗೊಳಿಸಿದ್ದೇ ವಿಜಯನಗರ ಸಾಮ್ರಾಜ್ಯ.

ಜಗತ್ತಿನಲ್ಲಿ ಬೇರೆ ಸಾಮ್ರಾಜ್ಯಗಳು ಆಕ್ರಮಣ, ಸ್ವಾರ್ಥ, ವ್ಯಕ್ತಿಘನತೆ, ಭೋಗಾಪೇಕ್ಷೆಗಳ ಕಾರಣಕ್ಕೆ ಸ್ಥಾಪನೆಗೊಂಡಿದ್ದರೆ, ಒಂದು ಧರ್ಮವನ್ನು ರಕ್ಷಿಸಲೋಸಗ ಸ್ಥಾಪನೆಯಾದ ಜಗತ್ತಿನ ಏಕೈಕ ಸಾಮ್ರಾಜ್ಯವೇ ವಿಜಯನಗರ. ಅದರಲ್ಲೂ ಶ್ರೀಕೃಷ್ಣದೇವರಾಯನ ಎರಡು ದಶಕಗಳ (1509-1529) ಆಡಳಿತವಂತೂ ಹಂಪಿಯನ್ನು ರಾಜಧಾನಿ ಯಾಗಿಸಿ ಕೊಂಡು ಇಡೀ ದಕ್ಷಿಣ ಭಾರತವನ್ನು ಆಳಿ ಮೆರೆದದ್ದು ಮಾತ್ರ ದೇಶದ ದೊಡ್ಡ ಐತಿಹಾಸಿಕ ಮೈಲುಗಲ್ಲು.

ಇಂದಿಗೂ ಹಿಂದೂ ಧರ್ಮ ಉಳಿದು ಕೊಂಡಿದೆಯೆಂದರೆ ಅದಕ್ಕೆ ವಿಜಯ ನಗರ ಸಾಮ್ರಾಜ್ಯದ ಶಕ್ತಿ ಮತ್ತು ಪ್ರಭಾವ ಅಪಾರ ವಾದದ್ದು. 1565ರ ತಾಳೀಕೋಟೆ ಯುದ್ಧದಲ್ಲಿ ವಿಜಯನಗರ ಸೇನೆಯಲ್ಲಿದ್ದ ಮುಸ್ಲಿಂ ಗಿಲಾನಿ ಸೋದರರ ನಂಬಿಕೆ ದ್ರೋಹ ದಿಂದಾಗಿ ಸಾಮ್ರಾಜ್ಯ ಸೋಲುಂಡು ಬರ್ಬರವಾಗಿ ನಾಶವಾಗುತ್ತದೆ. ನಂತರ ಹದಿನೇಳನೇ ಶತಮಾನದ ಆರಂಭದಲ್ಲಿ
ಛತ್ರಪತಿ ಶಿವಾಜಿಯು ಬಾಲ್ಯದಲ್ಲಿ ತಾಯಿ ಜೀಜಾಬಾಯಿಯೊಡನೆ ಹಂಪಿಗೆ ಬರುತ್ತಾನೆ. ಸುಮಾರು ಹತ್ತು ದಿನಗಳವರೆಗೂ ಹಂಪಿಯಲ್ಲಿ ವಾಸ್ತವ್ಯವಿದ್ದು ಇಲ್ಲಿನ ದೈವಮೂರ್ತಿಗಳ ಭಗ್ನಾವಶೇಷ ಗುಡಿಗೋಪುರಗಳ ಸರ್ವನಾಶಗಳನ್ನು ಕಣ್ಣಾರೆ ಕಂಡು ತನ್ನ ತಾಯಿಯಿಂದ ದುರಂತ ಇತಿಹಾಸವನ್ನು ಅರಿತು ಮಮ್ಮಲ ಮರುಗುತ್ತಾನೆ.

ಸಾಮ್ರಾಜ್ಯದ ವಿನಾಶದ ಇತಿಹಾಸವು ಬಾಲಕ ಶಿವಾಜಿಯಲ್ಲಿ ರೋಷ, ಕಿಚ್ಚು , ಆಕ್ರೋಶ ಉಕ್ಕಿ ಅದೇ ಪ್ರೇರಣೆಯಿಂದ ತೆರಳಿ ಹಿಂದವಿರಾಜ್ಯ ಸ್ಥಾಪಿಸಿ ಮರಾಠಿಗರ ಅಗ್ರ ನಾಯಕನಾಗಿ ಬಲಿಷ್ಠ ಹಿಂದೂ ರಾಜನಾಗುತ್ತಾನೆ. ಆದರೆ ಇಂದಿನ ದುರಂತವೆಂದರೆ
ಶ್ರೀಕೃಷ್ಣದೇವರಾಯ ವಿಜೃಂಭಿಸಿದ ವಿಜಯನಗರದ ಇತಿಹಾಸವು ನೆರೆಯ ಶಿವಾಜಿಯಲ್ಲಿ ಕಿಚ್ಚು ಸ್ಫೂರ್ತಿ ಆದರ್ಶವಾಗಿ ಮರಾಠಿಗರಲ್ಲಿ ಸ್ವಾಭಿಮಾನದ ಸಂಕೇತವಾಗಿ ನಿಂತರೆ, ಅದೇ ರಾಯನು ಕನ್ನಡಿಗರಿಗೆ ಏನೇನೂ ಆಗದೆ ಗತಕಾಲಕ್ಕೇ ಸ್ಥಗಿತ ಗೊಂಡಿದ್ದಾನೆ.

ಇದಕ್ಕೆ ಕಾರಣ  ಕೆಲ ಎಡಗೈ ನೆಕ್ಕುವ ಕೆಲ ಕಲಬೆರ್ಕಿ ಸಂಶೋಧಕರು ರಾಯನ ಸಾಧನೆಗಿಂತಲೂ ತಮ್ಮ ಸಾಧನೆಯೇ ಶ್ರೇಷ್ಠ
ವೆಂಬಂತೆ ರಾಯನ ಮೇಲೆ ಪೂರ್ವಗ್ರಹ ಹುಟ್ಟಿಸುವಂಥ ಆಧುನಿಕ ಇತಿಹಾಸ ಕೃಷಿ ನಡೆಸಿರುವುದೇ ಹೆಚ್ಚು. ಇಂದು
ಕನ್ನಡಿಗರಿಗೆ ಶ್ರೀಕೃಷ್ಣ ದೇವರಾಯ ಎಂದರೆ ಅದು ರಾಜಕುಮಾರ್ ಅಭಿನಯದ ಸಿನಿಮಾ ಎಂಬಷ್ಟೇ ರಿಜ್ಞಾನಕ್ಕೆ ಸೀಮಿತ ವಾಗಿದೆ. ಬಹುಶಃ ಇಂದಿನ ತಲೆಮಾರಿಗೆ ಹೊಂದಿಕೆ ಯಾಗುವಂಥ ಅಭಿಮಾನಿಸುವ, ಮಾನದಂಡವಾದ ಯಾವುದೇ ಪ್ರಬಲ ಜಾತಿಯವ ನಾಗದಿದ್ದುದೇ ಕೃಷ್ಣದೇವರಾಯನ ದುರಾದೃಷ್ಟ.

ಹಿಂದೂಧರ್ಮವನ್ನು ಸರ್ವನಾಶ ಮಾಡುವ ಮೂಲೋದ್ಧೇಶದ ಇಸ್ಲಾಂ ಆಕ್ರಮಣವನ್ನು ತಡೆಯಲು ಶಿವನ ಅಪರಾವತಾರ ಎಂಬಂತೆ (ಶಾಸನ ದಲ್ಲಿನ ಉಲ್ಲೇಖ) ಸಂಕಲ್ಪಗೈದ ಶೃಂಗೇರಿಯ ವೇದಜ್ಞಾನಿ ಸನ್ಯಾಸಿ ವಿದ್ಯಾರಣ್ಯರು ಸಂಗಮ ವಂಶದ ಹರಿಹರಬುಕ್ಕರು ಯಾವ ಜಾತಿಕುಲ ಪಂಥ ಯಾವುದನ್ನೂ ಯೋಚಿಸದೆ ಸಂತತೆಯ  ರೇಖೆಯನ್ನು ದಾಟಿ ಲೌಕಿಕವಾಗಿ ಚಿಂತಿಸಿ ಹಕ್ಕಬುಕ್ಕರಿಗೆ ಗುರುತ್ವಾ ಕರ್ಷಣೆ ನೀಡಿ ವಿಜಯನಗರ ಸಾಮ್ರಾಜ್ಯವನ್ನು (1336) ಸ್ಥಾಪಿಸುತ್ತಾರೆ.

ಅದುವರೆಗಿದ್ದ ರಾಜರುಗಳ ನಡುವಿನ ಒಳಜಗಳ ಅಸೂಯೆ ಅಂತರ್ಕಲಹಗಳನ್ನು ಹೋಗಲಾಡಿಸಿ ಎಲ್ಲರನ್ನೂ ಒಗ್ಗೂಡಿಸಿ, ಈ ನಾಡಿಗಿರುವ ಗಂಡಾಂತರಕಾರಿ ಶತ್ರು ಇಸ್ಲಾಂ ಆಕ್ರಮಣ ಒಂದೇ ಎಂದು ಪರಿಣಾಮಕಾರಿಯಾಗಿ ತೋರಿಸಿಕೊಟ್ಟು ಸಾಮ್ರಾಜ್ಯ
ಸ್ಥಾಪನೆಗೆ ಸಂಘಟಿಸಿ ಶ್ರಮಿಸಿದ್ದು ಬಹುಶಃ ಇಂದಿನ ನೊಬೆಲ್ ಪ್ರಶಸ್ತಿ ಪುರಸ್ಕೃತಕ್ಕೂ ಮೀರಿದ ಸಾಧನೆಯಾಗಿದೆ.

ಮುಂದೆ ಪ್ರೌಢದೇವರಾಯನ ಆಡಳಿತದಲ್ಲಿ ಶಿಲ್ಪಕಲೆ ಗುಡಿಗೋಪುರ ಕೋಟೆಗಳ ನಿರ್ಮಾಣ, ಕಾಲುವೆಗಳು, ಜಲತಂತ್ರಜ್ಞಾನ, ಕೃಷಿ ನೀರಾವರಿ ವ್ಯವಸ್ಥೆ, ಸುಸಜ್ಜಿತ ರಸ್ತೆ, ಚರಂಡಿಗಳು ಅಲ್ಲದೇ ಅನೇಕ ಪ್ರಗತಿ ಕಾರ್ಯಗಳು ನಗರ ಯೋಜನೆಗಳಿಂದ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿ ಉನ್ನತಿಯ ಉತ್ತುಂಗಕ್ಕೇರಿಸುತ್ತಾನೆ. ಆ ನಂತರ ಹೆಚ್ಚು ವಿಜೃಂಭಿಸಿದ್ದೇ ಶ್ರೀಕೃಷ್ಣದೇವರಾಯ. ವಿಜಯನಗರದಂಥ ಸಾಮ್ರಾಜ್ಯವನ್ನು ಆಳಲು, ಕಟ್ಟಲು ಇರಬೇಕಾದ ಎಲ್ಲಾ ಯೋಗ್ಯತೆ ಅರ್ಹತೆಗಳನ್ನು ಅಗತ್ಯಕ್ಕಿಂತಲೂ ಹೆಚ್ಚು ಪಡೆದವನಾಗಿದ್ದ ರಾಯ, ರಾಜ ತಾಂತ್ರಿಕತೆಯಿಂದಾಗಲಿ ಅಭಿವೃದ್ಧಿ, ಸಾಮಾಜಿಕ ಚಿಂತನೆ, ಧರ್ಮರಕ್ಷಣೆ, ಪ್ರಜಾಪಾಲನೆ, ಯುದ್ಧ ಯೋಜನೆ, ಸಾಮ್ರಾಜ್ಯ ವಿಸ್ತರಣೆ, ಸ್ವತಃ ಯಾವುದೇ ಆಯುಧಗಳಿಲ್ಲದೆ ಹತ್ತು ಮಂದಿ ಜಗಜಟ್ಟಿಗಳನ್ನು ಹೊಡೆದುರು ಳಿಸುವಂಥ ದೇಹದಾರ್ಢ್ಯತೆ , ಚತುರತೆ, ಸರ್ವ ಸಾಮರ್ಥ್ಯವನ್ನೂ ಮೈಗೂಡಿಸಿಕೊಂಡು ರಾಜಾಧಿರಾಜನೇ ಆಗಿದ್ದ.

ಭಾರತೀಯ ಪರಂಪರೆಯಲ್ಲಿ ಒಬ್ಬ ರಾಜ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರವೇ ಶ್ರೀಕೃಷ್ಣ ದೇವರಾಯ. ಸಾಮಾನ್ಯ ಪ್ರಜೆಯಿಂದ, ಎಲ್ಲಾ ಜಾತಿ ಕುಲದವರ ನಂಬಿಕೆಗಳಿಸಿಕೊಂಡು, ಶತ್ರುಗಳೂ ಹೆದರಿ ಆರಾಧಿಸುವಂತೆ ಮೆರೆದ ರಾಯನ ಆಡಳಿತಾವಧಿಯು ಸುವರ್ಣಯುಗ ಎಂದು ಕರೆಸಿಕೊಂಡಿರುವುದು ಪ್ರತಿಯೊಬ್ಬ ಹಿಂದೂ ಕೂಡ ಹೆಮ್ಮೆಪಡುವಂಥದ್ದು. ಇಂದು ನಾವುಗಳು
ಬೆಳಗಾವಿಯನ್ನು ಉಳಿಸಿಕೊಳ್ಳಲೇಬೇಕಾದ ಕಾಸರಗೋಡನ್ನು ಉಳಿಸಿಕೊಳ್ಳಲಾಗದಂಥ ಪರಿಸ್ಥಿತಿ ಇರುವಾಗ ಅಂದು ಸಮಸ್ತ ದಕ್ಷಿಣಭಾರತವನ್ನು (ಆಂಧ್ರ ಒರಿಸ್ಸಾ ಕೇರಳ ತಮಿಳುನಾಡು ಗೋವ ಮಹಾರಾಷ್ಟ್ರ ಕರ್ನಾಟಕ) ತನ್ನ ವಜ್ರಮುಷ್ಠಿಯಲ್ಲಿ ಹಿಡಿದು ಆಳಿದ ರಾಯನಿಗೆ ಎಂದಿಗೂ ಸರಿಸಮಾನರಿಲ್ಲ.

ಅಂದು ಜಾಗತಿಕ ಖ್ಯಾತಿ ಹೊಂದಿದ್ದ ರಾಯನೊಂದಿಗೆ ವಿದೇಶಿಗರಿಗೆ ವ್ಯಾಪಾರ ವ್ಯವಹಾರಗಳಲ್ಲದೆ ಸಾಮ್ರಾಜ್ಯಕ್ಕೆ ಭೇಟಿ ನೀಡುವುದೇ ಒಂದು ಪ್ರತಿಷ್ಠೆಯಾಗಿದ್ದಿತ್ತು. ವಿದೇಶಿ ಪ್ರವಾಸಿಗರು ಗಣ್ಯರು ಸಾಮ್ರಾಜ್ಯವನ್ನು ಸಂದರ್ಶಿಸಲು ಉತ್ಸಾಹಿಗಳಾಗು ತ್ತಿದ್ದರು. ಶತ್ರು ರಾಜರುಗಳಂತೂ ರಾಯನ ಸಾಮರ್ಥ್ಯಕ್ಕೆ ಬೆದರುತ್ತಿದ್ದು ಅವನ ವಿರುದ್ಧ ಹೋರಾಟ ಮೃತ್ಯುಕೂಪಕ್ಕೆ ಆಹ್ವಾನಿಸುವಂತಿತ್ತು. ಇದಕ್ಕೆ ರಾಯನ ದಿಗ್ವಿಜಯಗಳೇ ಸಾಕ್ಷಿ.

ವಿದೇಶಿ ಪ್ರವಾಸಿಗಳಾದ ಪೋರ್ಚುಗಲ್‌ನ ಬಾರ್ಬೋಸ (1514-1516), ಡೊಮಿಂಗೋ ಪಯಾಸ್ (1520) ಸೇರಿ ಅನೇಕ ಪ್ರವಾಸಿ ಗರು ಅಂದಿನ ರಾಯನ ಆಡಳಿತವನ್ನು ಕಂಡು ಕೊಂಡಾಡಿದ್ದಾರೆ. ಇಂದು ಜಾತಿಗೊಬ್ಬ ಪುಡಾರಿ, ಜಾತಿಗೊಬ್ಬ ಸ್ವಾಮೀಜಿ ಗಳಿಂದ ಧರ್ಮ ದಾರಿತಪ್ಪುತ್ತಿದ್ದರೆ ಅಂದು ಸಕಲ ಜಾತಿಗಳಿಗೂ ಮನ್ನಣೆ ಗೌರವ ನೀಡಿ ದಾನದತ್ತಿ, ಊರು ಕೆರೆಕಟ್ಟೆ ಗಳನ್ನು ನಿರ್ಮಿಸುತ್ತಾನೆ.

ಬ್ರಾಹ್ಮಣ ಸನ್ಯಾಸಿಗಳಾದ ರಾಜಗುರು ವ್ಯಾಸರಾಯರು ಧರ್ಮಗುರು ವಿದ್ಯಾರಣ್ಯ ಪೀಠದ ಯತಿಗಳನ್ನು ತನ್ನ ಆತ್ಮಬಲವನ್ನಾಗಿ ಕಾಣುತ್ತಾನೆ. ದೂರದ ಕಾಶಿಯಿಂದ ಆರುಸಾವಿರ ಸ್ಮಾರ್ಥಬ್ರಾಹ್ಮಣ ಅರ್ಚಕ ಕುಟುಂಬ ದವರನ್ನು ಕರೆತಂದು ಆಶ್ರಯನೀಡಿ
ಅಸಂಖ್ಯಾತ ದೇಗುಲಗಳಿಗೆ ನಿಯೋಜಿಸುತ್ತಾನೆ. ಬೇಡರು ವಿಶ್ವಕರ್ಮರು ವೀರಶೈವ ವಿರಕ್ತರು ಸಾಮ್ರಾಜ್ಯದ ಸಾಂಸ್ಕೃತಿಕ ಭಾಗ ವಾಗಿದ್ದರು. ಇಂದಿನ ಮೇಲ್ಜಾತಿ ಕೆಳಜಾತಿ ಅಂದು ಪವಿತ್ರವಾದ ಕುಲಕಸುಬಿನಿಂದ ಗುರುತಿಸಿಕೊಂಡು ಆಧರಣೀಯ ಸ್ಥಾನ ಪಡೆದಿತ್ತು. ಆದರೆ ಇಂದು ಜಾತಿ ಗಳನ್ನು ವಿಂಗಡಿಸುವ ಅಡ್ಡಕಸುಬಿಗಳೇ ಹೆಚ್ಚಾಗಿದ್ದಾರೆ.

ಸಕಲ ಜಾತಿಗಳನ್ನು ಸಮನ ಗೌರವದಿಂದ ಕಂಡು ಆಡಳಿತ ನಡೆಸಿದ್ದರಿಂದಲೇ ರಾಯನಿಗೆ ಹಿಂದೂರಾಯಸುರತ್ರಾಣ ಎಂಬ ಮಹೋನ್ನತ ಬಿರುದು ಲಭಿಸಿದೆ. ಪರಂತು ಯಾವುದೇ ಜಾತಿಬಿರುದುಗಳಲ್ಲ. ಇದಕ್ಕೆ ದೃಷ್ಟಾಂತ ವೆಂದರೆ ರಾಯನಿಗೆ ಕುಯೋಗ
ಸಂಭವಿಸುವ ಕಾಲದಲ್ಲಿ ಇಡೀ ಸಾಮ್ರಾಜ್ಯದ ಪ್ರಜೆಗಳು ಪೂಜೆಪುನಸ್ಕಾರ ವ್ರತ ಹರಕೆ ಹೋಮಹವನಗಳನ್ನು
ನಡೆಸಿದ್ದರು.

ಇನ್ನು ಕೆಲ ಅವಿವೇಕಿಗಳು ರಾಯನನ್ನು ಕನ್ನಡ ವಿರೋಧಿ ಎನ್ನುತ್ತಾರೆ. ಆದರೆ ಕರ್ಣಾಟ ರಾಜ್ಯ ರಮಾರಮಣ ಕನ್ನಡರಾಯ ಬಿರುದಾಂಕಿತ ರಾಯ ತನ್ನ ಕನಸಿಗೆ ಬಂದ ಮಹಾವಿಷ್ಣು ಕನ್ನಡರಾಯ ಎದ್ದೇಳು ಎಂದು ಸಂಬೋಧಿಸಿರುವುದಾಗಿ ದಾಖಲಿಸು ತ್ತಾನೆ. ಆಂಧ್ರದ ನೆಲ್ಲೂರಿನ ಸಿಂಗರಾಯಕೊಂಡದಲ್ಲಿರುವ ಶಾಸನದಲ್ಲಿ ಕರ್ಣಾಟರಾಜ್ಯ ಲಕ್ಷ್ಮೀ ಮನೋಹರ ಎಂದು ಕರೆಯ ಲಾಗಿದೆ.

ತಿರುಪತಿಯ ತಿಮ್ಮಪ್ಪನ ಗುಡಿಯಲ್ಲಿನ ಮೂರ್ತಿ ಗಳ ಮೇಲೆ ಶ್ರೀಕೃಷ್ಣದೇವರಾಯ ಚಿನ್ನಾದೇವಿ ತಿರುಮಲಾ ದೇವಿ ಎಂಬ ಅಕ್ಷರಗಳು ಕನ್ನಡದ ಕೆತ್ತನೆಯಾಗಿದೆ. ಸಾಮ್ರಾಜ್ಯದ ಕುಲದೇವರನ್ನು ಆರಾಧಿಸುತ್ತಾ ತಾನು ವಿರೂಪಾಕ್ಷ ಪಾದಪದ್ಮರಾಧಕ ಎಂದು ಹೇಳಿಕೊಂಡಿರುವುದು, ಅನೇಕ ಶಾಸನಗಳಲ್ಲಿ ವಿರೂಪಾಕ್ಷ ಅಂಕಿತ ವಿರುವುದು ಆತನ ಶೈವಾರಾಧನೆಗೆ ಸಾಕ್ಷಿ. ತನ್ನ
ಪಟ್ಟಾಭಿಷೇಕದ ಸವಿನೆನಪಿಗಾಗಿ ವಿರೂಪಾಕ್ಷ ದೇವರಿಗೆ ರಾಯಗೋಪುರ ರಂಗ ಮಂಟಪ ನಿರ್ಮಿಸಿ ಅಪರೂಪ ವಾದ ನವರತ್ನ ಖಚಿತ ಸುವರ್ಣಮುಖ ಕಿರೀಟವನ್ನು ಸಮರ್ಪಿಸುತ್ತಾನೆ.

ವಿಜಯನಗರ ಇತಿಹಾಸದ ಅತ್ಯಂತ ದೀರ್ಘ ಶಾಸನವಾದ 11 ತಾಮ್ರಪಟದ 532 ಸಾಲುಗಳುಳ್ಳ ಶಾಸನವು ರಾಯನಿಂದಲೇ ರಚನೆಯಾಗಿದೆ. ನಾಗರಿ ಲಿಪಿಯ ಈ ಶಾಸನದ ವಿಶೇಷವೆಂದರೆ ಲಕ್ಷ್ಮಣದಾಸ ಹೆಬ್ಬಣದಾಸ ಮಧ್ವಪದಾಸ ಎಂಬ ಅಂದಿನ
ಕನ್ನಡದ ದಾಸಶ್ರೇಷ್ಠ ಪುರಂದರದಾಸರ ಪುತ್ರರ ಹೆಸರುಗಳ ಪ್ರಸ್ತಾಪವಿದೆ. ಹೀಗೆ ಸಾಮ್ರಾಜ್ಯಕ್ಕೆ ಹೊಸತನಗಳ ಮೆರುಗನ್ನು ನೀಡಿದ ರಾಯನ ಕಾಲದಲ್ಲಿ ಹೆಚ್ಚು ಶಾಸನಗಳು ಬೃಹತ್ ದೇಗುಲಗಳು ವಾಸ್ತುಶಿಲ್ಪ, ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ,
ಟಂಕಶಾಲೆ, ಶಸಗಳು, ಅಶ್ವ ಆನೆಗಳ ಸೈನ್ಯಬಲ ಸದೃಢಗೊಳ್ಳುತ್ತದೆ. ನವರಾತ್ರಿ ದಸರಾ ಉತ್ಸವಗಳು ಸಾಮ್ರಾಜ್ಯದ ದೊಡ್ಡ ಹಬ್ಬವಾಗಿ ಆಚರಿಸಲ್ಪಟ್ಟು ಇಂದಿಗೂ ಮುಂದುವರಿದಿದೆ.

ಹೀಗೆ ರಾಯನಿಂದ ಹಿಂದೂ ಧರ್ಮದ ವೈಚಾರಿಕತೆ ಸಂಸ್ಕೃತಿ ಯು ಶ್ರೀಮಂತಗೊಂಡು ಜಗತ್ತಿನ ಯಾವುದೇ ರಾಜನಿಗಾಗಲಿ ಆಡಳಿತದ ಸೂತ್ರಕ್ಕಾಗಲಿ ಶ್ರೀಕೃಷ್ಣ ದೇವರಾಯ ಎಲ್ಲಾ ಕಾಲಕ್ಕೂ ಅದ್ವಿತೀಯ ಚಕ್ರವರ್ತಿ ಎನಿಸಿಕೊಳ್ಳುತ್ತಾನೆ. ಪಕ್ಕದ ಆಂಧ್ರದಲ್ಲಿ ರಾಯನನ್ನು ಸ್ಮರಿಸುವ ಅಭಿಮಾನಿಸುವ ಹಲವಾರು ಕಾರ್ಯಕ್ರಮಗಳು ಜಾರಿಯಲ್ಲಿವೆ. ರಾಯನ ಹೆಸರಿನ ವಿಶ್ವ
ವಿದ್ಯಾಲಯಗಳು ಅಧ್ಯಯನ ಪೀಠಗಳು ಪುಸ್ತಕ ಗಳಿವೆ. ಆದರೆ ಕನ್ನಡಿಗರ ವಿಚಾರದಲ್ಲಿ ರಾಯ ನಿಜಕ್ಕೂ ನತದೃಷ್ಟನೇ ಸರಿ.

ಬಳ್ಳಾರಿಯ ವಿಶ್ವ ವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ನಾಮಕರಣಕ್ಕೆ ಅಂದು ಎಡಬಿಡಂಗಿಗಳು ವಿರೋಧಿಸಿದ್ದವು. ಆದರೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಒಂದು ಸಭಾಂಗಣಕ್ಕೆ ರಾಯ ತನ್ನ ರಾಜ್ಯಸಭೆ ಭುವನವಿಜಯ ಪದವನ್ನು ಚಂದ್ರಶೇಖರ ಕಂಬಾರರು ನಾಮಕರಣ ಮಾಡಿರುವುದು ಹೆಮ್ಮೆಯ ವಿಚಾರ. ದುರಂತವೆಂದರೆ ಇಂಥದ್ದನ್ನೇ ಪ್ರತಿಪಾದಿಸುವ ಸಂಘಪರಿವಾರ ಮತ್ತು ಹಿಂದೂಪರ ಸಂಘಟನೆಗಳು ಬರಿಯ ಶಿವಾಜಿಯನ್ನು ಮಾತ್ರ ಪ್ರೇರಣೆಯಾಗಿಸಿ ಕೊಂಡಿದೆಯಷ್ಟೆ. ಆದರೆ ಶಿವಾಜಿಗೆ ಪ್ರೇರಣೆ ನೀಡಿದ್ದೇ ಶ್ರೀಕೃಷ್ಣದೇವರಾಯ ಒಳಗೊಂಡ ವಿಜಯನಗರ ಸಾಮ್ರಾಜ್ಯ ಎಂಬುದನ್ನು ಇಂದಿಗೂ ಮನಗಾಣ ದಿರುವುದು ದುರ್ದೈವ.

ಅಸಲಿಗೆ ವಿಜಯನಗರ ಸಾಮ್ರಾಜ್ಯದ ಈ ವೈಚಾರಿಕತೆ ಹುಟ್ಟಿದ್ದೇ ಆದಿಶಂಕರ ಚಾರ್ಯರ ಪರಂಪರೆಯ ವಿದ್ಯಾರಣ್ಯರಿಂದಲೇ ಅಲ್ಲವೇ?. ಆದರೂ ಇಲ್ಲಿನ ಸಂಘಟನೆಗಳಿಗೆ ಸ್ವಾಮಿ ವಿವೇಕಾನಂದರು ಶ್ರೀಕೃಷ್ಣ ದೇವರಾಯರು ಇಬ್ಬರೂ ಆದರ್ಶ ಪುರುಷರೇ ಆಗಿದ್ದಾರೆ. ಈಗ ಜೋಳದರಾಶಿ ಗುಡ್ಡದಲ್ಲಿ ರಾಯನ ಪ್ರತಿಮೆಯ ವಿಚಾರವು ಇಲ್ಲಿನ ರಾಷ್ಟ್ರಪ್ರೇಮ ಸಂಘಟನೆಗಳ ಮಧ್ಯೆ ಭಿನ್ನಾ ಭಿಪ್ರಾಯಕ್ಕೆ ಕಾರಣವಾಗದೆ ರಾಯನ ಪ್ರತಿಮೆಯನ್ನೇ ಸ್ಥಾಪಿಸಿ ವಿಜಯನಗರ ಜಿಗೆ ಅರ್ಥಪೂರ್ಣ ಕೊಡುಗೆಗೆ ಒಂದಾಗಿ ನಿಲ್ಲಬೇಕಿದೆ.

ಅಗತ್ಯವಿದ್ದರೆ ವಿವೇಕಾನಂದರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮತ್ತೊಂದು ಕಡೆ ನಿರ್ಮಿಸಿದರೂ ಅನುಕರಣೀಯ. ಪ್ರತಿಮೆ ಸ್ಥಾಪೆನೆಯ ಉದ್ದೇಶ ರಾಜಕಾರಣಿಗಳ ವೈಯಕ್ತಿಕ ಅನುಕೂಲ ಗಳಿಗಲ್ಲದೆ ನಾಡಿನ ಸಾಂಸ್ಕೃತಿಕ ಹಿರಿಮೆಗೆ ಸ್ಥಾಪನೆಯಾಗಲಿ.
ಹಾಗಾದಲ್ಲಿ ಜೋಳದರಾಶಿ ಗುಡ್ಡ ಭವಿಷ್ಯದಲ್ಲಿ ವಿಜಯ ನಗರ ಜಿಯ ಒಂದು ಪೇಕ್ಷಣೀಯ ಸ್ಥಳವಾಗುವುದರಲ್ಲಿ ಸಂದೇಹವಿಲ್ಲ. ಮೊನ್ನೆಯಷ್ಟೇ ಬಸವಣ್ಣನವರ ಅನುಭವ ಮಂಟಪಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಯನ
ಪ್ರತಿಮೆಯ ಯೋಜನೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸುವಂತಾಗಲಿ.