Tuesday, 10th September 2024

Sundeep Verma: ಒಲಿಂಪಿಕ್ಸ್‌ನಲ್ಲಿ ನಕಲಿ ಪಾಸ್ ಬಳಕೆ: ಗಾಲ್ಫ್‌ ಒಕ್ಕೂಟದ ಸದಸ್ಯ ಅಮಾನತು

Sundeep Verma

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ನಕಲಿ ಪಾಸ್‌ ಬಳಸಿದ ಆರೋಪದಡಿ ಭಾರತೀಯ ಗಾಲ್ಫ್‌ ಒಕ್ಕೂಟದ(Indian Golf Union) ಸದಸ್ಯ ಸಂದೀಪ್ ವರ್ಮಾ(Sundeep Verma) ಅವರನ್ನು ಒಕ್ಕೂಟದಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಒಕ್ಕೂಟದ ಅಧ್ಯಕ್ಷ ಬ್ರಿಜೇಂದರ್ ಸಿಂಗ್, 10 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸುವಂತೆ ಸಮಿತಿಗೆ ನಿರ್ದೇಶಿಸಲಾಗಿದೆ ಎಂದಿದ್ದಾರೆ.

ತಮ್ಮ ವಿರುದ್ಧದ ಆರೋಪವನ್ನು ಸಂದೀಪ್ ವರ್ಮಾ ನಿರಾಕರಿಸಿದ್ದು ಇದು ಆಧಾರ ರಹಿತ ಎಂದಿದ್ದಾರೆ. ‘ನನ್ನ ಬಳಿ ಅಗತ್ಯ ದಾಖಲೆಗಳಿದ್ದವು. ಇದನೆಲ್ಲ ಪರೀಕ್ಷಿಸಿದ ಬಳಿಕವೇ ನಾನು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡೆʼ ಎಂದು ಹೇಳಿದ್ದಾರೆ. ‘ನಾನು ಯಾವುದೇ ಮಾಹಿತಿಯನ್ನೂ ಮುಚ್ಚಿಟ್ಟಿಲ್ಲ. ಕಾರ್ಯಕ್ರಮ ವೀಕ್ಷಿಸುವ ಮುನ್ನ ಹಲವು ಹಂತಗಳಲ್ಲಿ ಭದ್ರತಾ ಮತ್ತು ದಾಖಲೆ ತಪಾಸಣೆಗೆ ಒಳಪಟ್ಟಿದ್ದೇನೆ. ಹಾಗಿದ್ದರೆ ಅವೆಲ್ಲವೂ ಹುಸಿಯೇ? ಐಜಿಯು ಮಾಡಿರುವುದು ಆಧಾರ ರಹಿತ ಆರೋಪಗಳಾಗಿವೆ.  ನನಗೆ ಉತ್ತರಿಸಲು 21 ದಿನಗಳ ಕಾಲಾವಕಾಶ ನೀಡಬೇಕಿತ್ತು. ಅದು ಪಾಲನೆಯಾಗಿಲ್ಲ’ ಎಂದು ವರ್ಮಾ ಹೇಳಿದ್ದಾರೆ.

ನನ್ನ ಬಳಿ ಎಲ್ಲಾ ಪುರಾವೆಗಳಿವೆ. ನಾನು ಇದನ್ನು ಬಹಿರಂಗಪಡಿಸಲು ಹೊರಟಿದ್ದೆ, ಆದರೆ ಅವರು ನನ್ನನ್ನು ಉದ್ದೇಶಪೂರ್ವಕವಾಗಿ ಈ ಸಭೆಯಿಂದ ದೂರವಿಡಲು ಬಯಸುತ್ತಿದ್ದಾರೆ. ಒಲಿಂಪಿಕ್ಸ್‌ ಉದ್ಘಾಟನಾ ಕಾರ್ಯಕ್ರಮ ನಡೆದು ಸರಿ ಸುಮಾರು ಒಂದು ತಿಂಗಳು ಆಗುತ್ತಾ ಬಂದಿದೆ. ಈಗ ಏಕೆ ನನ್ನ ವಿರುದ್ಧ ಈ ಆರೋಪ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಇದೊಂದು ಪೂರ್ವ ನಿಯೋಜಿತ ಸಂಚು  ಎಂದು ಸಂದೀಪ್ ವರ್ಮಾ ಅವರು ಹೇಳಿದ್ದಾರೆ.

ಈ ಪ್ರಕರಣಕ್ಕೂ ಮುನ್ನ ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮದಲ್ಲಿ(olympic village) ತಮ್ಮ ಗುರುತಿನ ಕಾರ್ಡ್ ದುರ್ಬಳಕೆ ಮಾಡಿದ ಆರೋಪದಡಿ ಕುಸ್ತಿಪಟು(Wrestler Antim Panghal) ಅಂತಿಮ್‌ ಪಂಘಲ್‌(Antim Panghal) ಅವರನ್ನು ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿತ್ತು. ಅಂಟಿಮ್‌ ಅವರು ತಮ್ಮ ಸಾಮಾಗ್ರಿಯನ್ನು ತರಲು ಐಡಿ ಕಾರ್ಡನ್ನು ಸಹೋದರಿ ನಿಶಾ ಪಂಘಲ್‌ಗೆ ನೀಡಿದ್ದರು. ಈ ಐಡಿ ಕಾರ್ಡ್ ಬಳಸಿ ನಿಶಾ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಿದ್ದರು. ಹಿಂದಿರುಗುವಾಗ ನಿಶಾ ಸೆಕ್ಯುರಿಟಿ ಕೈಗೆ ಸಿಕ್ಕಿಬಿದ್ದಿದ್ದರು. ಕೂಡಲೇ ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು. ಬಳಿಕ ಅಂತಿಮ್‌ ಹೇಳಿಕೆ ದಾಖಲಿಸಿ ನಿಶಾ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದರು.

Leave a Reply

Your email address will not be published. Required fields are marked *