Thursday, 12th December 2024

Tejaswi Yadav Controversy: ಈಶಾನ್ಯ ಭಾರತೀಯರು ಚೈನೀಸ್‌ಗಳೇ?- ತೇಜಸ್ವಿ ಯಾದವ್‌ರಿಂದ ಜನಾಂಗೀಯ ನಿಂದನೆ

Tejsawi Yadav

ನವದೆಹಲಿ: ಜುಮ್ಮಾ ಪ್ರಾರ್ಥನೆಗಾಗಿ ಎರಡು ಗಂಟೆಗಳ ಕಾಲ ವಿಧಾನಸಭೆ ಕಲಾಪ ಮುಂದೂಡುವ ಪದ್ಧತಿಯನ್ನು ಅಸ್ಸಾಂ ಸರಕಾರ(Assam Governement) ರದ್ದುಪಡಿಸಿದೆ. ಇದೀಗ ಇದೇ ವಿಚಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ(Himant Biswa Sharma) ಮತ್ತು ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್(Tejaswi Yadav Controversy) ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ತೇಜಸ್ವಿ ಯಾದವ್‌ ಅವರ ವಿರುದ್ಧ ಜನಾಂಗೀಯ ನಿಂದನೆ ಆರೋಪವೂ ಕೇಳಿ ಬಂದಿದೆ. ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಭರದಲ್ಲಿ ತೇಜಸ್ವಿ ಯಾದವ್‌ ಅವರು ಈಶಾನ್ಯ ರಾಜ್ಯದ ಜನರನ್ನು ಜನಾಂಗೀಯ ನಿಂದನೆ(Racism Controversy) ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ತೇಜಸ್ವಿ ಹೇಳಿದ್ದೇನು?

ಜುಮ್ಮಾ ಪ್ರಾರ್ಥನೆ ಬ್ರೇಕ್‌ ರದ್ದುಗೊಳಿಸುವ ಮೂಲಕ ಬಿಜೆಪಿ ಮುಸ್ಲಿಮರನ್ನು ಮೂಲೆಗುಂಪು ಮಾಡುವ ಮೂಲಕ ದ್ವೇಷವನ್ನು ಬಿತ್ತುವ ಯತ್ನ ಮಾಡುತ್ತಿದೆ ಎಂದು ತೇಜಸ್ವಿ ಯಾದವ್‌ ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಹಿಮಂತ್‌ ಬಿಸ್ವಾ ಶರ್ಮಾ ಅವರು ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್‌ ಅವರ ಹಾದಿಯನ್ನು ಅನುಕರಣೆ ಮಾಡಲು ಮುಂದಾಗಿದ್ದಾರೆ. ಅವರು ಯೋಗಿಯವರ ಚೈನೀಸ್‌ ವರ್ಷನ್‌ ಆಗುವ ಪ್ರಯತ್ನದಲ್ಲಿದ್ದಾರೆ. ಸರ್ಕಾರದ ಈ ನಿರ್ಧಾರ ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುತ್ತದೆ ಎಂದು ತೇಜಸ್ವಿ ಯಾದವ್‌ ಕಿಡಿಕಾರಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ತಿರುಗೇಟು ನೀಡಿದೆ. ಅಲ್ಲದೇ ತೇಜಸ್ವಿ ಯಾದವ್‌ ಅವರು ಈಶಾನ್ಯ ಭಾಗದ ಜನರ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ದೂರಿದ್ದಾರೆ.

https://x.com/yadavtejashwi/status/1829545627509772518

ಬಿಜೆಪಿ ತಿರುಗೇಟು ಏನು?

ಇನ್ನು ತೇಜಸ್ವಿ ಯಾದವ್‌ ಅವರ ಆರೋಪಕ್ಕೆ ಸ್ವತಃ ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಪ್ರತಿಕ್ರಿಯಿಸಿದ್ದು, ಎರಡು ಗಂಟೆಗಳ ಜುಮ್ಮಾ ವಿರಾಮವನ್ನು ತೆಗೆದುಹಾಕುವುದು ಮುಖ್ಯಮಂತ್ರಿಯ ನಿರ್ಧಾರವಲ್ಲ, ಬದಲಾಗಿ ಎಲ್ಲಾ ಹಿಂದೂ ಮತ್ತು ಮುಸ್ಲಿಂ ಶಾಸಕರ ನಿರ್ಧಾರವಾಗಿತ್ತು. ಶುಕ್ರವಾರ ವಿಧಾನಸಭೆ ಸ್ಪೀಕರ್ ಇದನ್ನು ಘೋಷಿಸಿದಾಗ, ಸದನದಲ್ಲಿ ಯಾವುದೇ ಮುಸ್ಲಿಂ ಶಾಸಕರು ಇರಲಿಲ್ಲ. ಅಸ್ಸಾಂ ವಿಧಾನಸಭೆಯಲ್ಲಿ ಒಟ್ಟು 126 ಮಂದಿಯಲ್ಲಿ 25 ಮಂದಿ ಮುಸ್ಲಿಂ ಶಾಸಕರಿದ್ದಾರೆ. ವಿಧಾನಸಭೆಯ ಕಾರ್ಯವಿಧಾನದ ನಿಯಮಗಳಲ್ಲಿ ಈ ನಿಬಂಧನೆಯನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸ್ಪೀಕರ್ ನೇತೃತ್ವದ ನಿಯಮಗಳ ಸಮಿತಿಯ ಮುಂದೆ ಇರಿಸಲಾಗಿದೆ. ಇದು ಜುಮ್ಮಾ ಪದ್ಧತಿಯನ್ನು ಕೈಬಿಡಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದರು

https://x.com/himantabiswa/status/1829814195996533100

 ತೇಜಸ್ವಿ ವಿರುದ್ಧ ಬಿರೇನ್ ಸಿಂಗ್ ಕಿಡಿ

ತೇಜಸ್ವಿ ಅವರ ಚೈನೀಸ್‌ ವರ್ಶನ್‌ ಹೇಳಿಕೆಗೆ ಮಣಿಪುರ ಸಿಎಂ ಬಿರೇನ್‌ ಸಿಂಗ್‌ ಕಿಡಿ ಕಾರಿದ್ದಾರೆ. ತೇಜಸ್ವಿಯವರು ಈಶಾನ್ಯದಿಂದ ಬಂದವರು ಎಂಬ ಕಾರಣಕ್ಕೆ ಚೈನೀಸ್” ಎಂದು ಲೇಬಲ್ ಮಾಡಿದ್ದಾರೆ ಎಂದು ಆರೋಪಿಸಿದರು. ನಮ್ಮ ದೇಶದ ಇತಿಹಾಸ ಮತ್ತು ಭೌಗೋಳಿಕತೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಅಜ್ಞಾನಿ ಜನಾಂಗೀಯವಾದಿಗಳ ಗುಂಪಿನಿಂದ INDI ಒಕ್ಕೂಟ ರಚನೆಯಾಗಿದೆ. ಮೊದಲು ಸ್ಯಾಮ್ ಪಿತ್ರೋಡಾ, ಈಗ ತೇಜಸ್ವಿ ಯಾದವ್ ಅವರು ಈಶಾನ್ಯ ಜನರ ಬಗ್ಗೆ ಜನಾಂಗೀಯ ದ್ವೇಷವನ್ನು ತೋರಿಸುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

https://x.com/NBirenSingh/status/1829867479885079027