ಛತ್ತೀಸ್‍ಗಢ್ : ಛತ್ತೀಸ್‍ಗಢದ ಸರ್ಕಾರಿ ಶಾಲೆಯಲ್ಲಿ ಸಹಪಾಠಿಯ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಮೋಜು ಮಸ್ತಿ ಮಾಡಲು ಮದ್ಯಪಾನ ಸೇವಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಸಿಕ್ಕಿಬಿದ್ದಿದ್ದಾರೆ. ಛತ್ತೀಸ್‍ಗಢದ ಬಿಲಾಸ್ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಬಿಯರ್ ಕುಡಿಯುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ. ಈ ವಿಡಿಯೊ ನೋಡಿದ ಶಿಕ್ಷಣ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆ ಮಾಡಲು ಮುಂದಾಗಿದ್ದಾರೆ.
ಮಸ್ತೂರಿ ಪ್ರದೇಶದ ಭಟ್ಚೌರಾ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಜುಲೈ 29ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ವಿದ್ಯಾರ್ಥಿನಿಯರು ಬಿಯರ್ ಮತ್ತು ಕೋಲ್ಡ್ ಡ್ರಿಂಕ್ಸ್‌ಗಳನ್ನು ಕುಡಿಯುತ್ತಿರುವುದು ಕಂಡು ಬಂದಿದೆ. ಈ ಘಟನೆಯ ಬಗ್ಗೆ ಸಿಟ್ಟಾದ ಬಿಲಾಸ್ಪುರದ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ಟಿ ಆರ್ ಸಾಹು ಈ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ತಂಡವು ಸೋಮವಾರ ಸಂಬಂಧಪಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಗಳನ್ನು ದಾಖಲಿಸಿದೆ ಎಂದು ಅವರು ತಿಳಿಸಿದ್ದಾರೆ. ವಿಡಿಯೊಗಳನ್ನು ಮಾಡುವಾಗ ಮೋಜಿಗಾಗಿ ಬಿಯರ್ ಬಾಟಲಿಗಳನ್ನು ಬಳಸಿದ್ದೇವೆ ಆದರೆ ಅದನ್ನು ಕುಡಿಯಲಿಲ್ಲ ಎಂದು ವಿದ್ಯಾರ್ಥಿಗಳು ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.
▶#ClassRoom में #BeerParty करते छात्राओं की तस्वीर #SocialMedia पर जमकर हो रहा #Viral#viralvideo #ibc24 #chhattisgarhnews #cgnews #bilaspur #students pic.twitter.com/0gRXZzxBsV
— IBC24 News (@IBC24News) September 10, 2024
“ಶಾಲೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪ್ರಾಂಶುಪಾಲರು ಮತ್ತು ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ, ಭಾಗಿಯಾಗಿರುವ ಬಾಲಕಿಯರ ಪೋಷಕರಿಗೆ ನೋಟಿಸ್ ಕಳುಹಿಸಲಾಗುವುದು” ಎಂದು ಶಿಕ್ಷಣ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:ಶಿಕ್ಷಕರ ದಿನಾಚರಣೆಯಂದು ‘ಆಜ್ ಕಿ ರಾತ್‘ ಹಾಡಿಗೆ ಸೊಂಟ ಬಳುಕಿಸಿದ ಮಕ್ಕಳು; ರೊಚ್ಚಿಗೆದ್ದ ಜನ!
ವರದಿ ಪ್ರಕಾರ, ಕೆಲವು ವಿದ್ಯಾರ್ಥಿನಿಯರು ಜುಲೈ 29ರಂದು ತರಗತಿಯೊಳಗೆ ತಮ್ಮ ಸಹಪಾಠಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಮತ್ತು ಪಾರ್ಟಿಯ ಸಮಯದಲ್ಲಿ ಅವರು ಬಿಯರ್ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಒಬ್ಬರು ನಂತರ ಇದಕ್ಕೆ ಸಂಬಂಧಪಟ್ಟ ವಿಡಿಯೊಗಳು ಮತ್ತು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿ ವಿದ್ಯಾರ್ಥಿನಿಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನಲಾಗಿದೆ.