Thursday, 19th September 2024

Viral Video: ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿ ಮೇಲೆ ಮಲಗಿದ ಯುವತಿಗೆ ಗಾಢ ನಿದ್ದೆ! ಮುಂದೇನಾಯ್ತು?

Viral Video

ನವದೆಹಲಿ: ಇಂದಿನ ಕಾಲದಲ್ಲಿ ಯುವ ಜನಾಂಗದವರು ಸಣ್ಣ ಪುಟ್ಟ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಜೀವನಲ್ಲಿ ಎದುರಾದ ಕಷ್ಟಗಳನ್ನು ಎದುರಿಸಲಾಗದೆ ಇವರು ತಮ್ಮ ಇಡೀ ಜೀವನವನ್ನು ನಾಶ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದೀಗ ಅಂತಹದೊಂದು ಘಟನೆ ಬಿಹಾರದಲ್ಲಿ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಯ ಮೇಲೆ ಮಲಗಿದ್ದು, ತಕ್ಷಣ ರೈಲು ಚಾಲಕನ ತ್ವರಿತ ಕ್ರಮದಿಂದ ಮಂಗಳವಾರ ಬಿಹಾರದ ಚಕಿಯಾ ನಿಲ್ದಾಣದ ಬಳಿ ಸಂಭವಿಸಬಹುದಾದ ಮಹಾ ದುರಂತ ತಪ್ಪಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ರೈಲು ಸಂಚಾರಕ್ಕೆ ತಾತ್ಕಾಲಿಕವಾಗಿ ಅಡ್ಡಿಯಾದ ಈ ಘಟನೆ ರೈಲು ಚಾಲಕನ ಜೀವ ಉಳಿಸುವ ಪ್ರಜ್ಞೆ ಮತ್ತು ಸ್ಥಳೀಯ ನಿವಾಸಿಗಳ ಸಾಮೂಹಿಕ ಪ್ರಯತ್ನವನ್ನು ತೋರಿಸುತ್ತದೆ. ರೈಲ್ವೆ ಹಳಿಯ ಮೇಲೆ ಮಲಗಿರುವ ಆಕೆ ಸ್ಥಳೀಯ ಹುಡುಗಿ ಎಂದು ಗುರುತಿಸಲಾಗಿದ್ದು, ಶಾಲಾ ವಿದ್ಯಾರ್ಥಿನಿ ಎಂಬುದಾಗಿ ತಿಳಿದುಬಂದಿದೆ. ಚಕಿಯಾ ನಿಲ್ದಾಣದ ಹೊರ ಸಿಗ್ನಲ್ ಬಳಿ ನಿಲ್ಲಿಸಲಾಗಿದ್ದ ರೈಲಿನ ಕೆಳಗೆ ಬ್ಯಾಗ್ ಅನ್ನು ಬೆನ್ನಿನ ಮೇಲೆ ಇಟ್ಟುಕೊಂಡು ವಿದ್ಯಾರ್ಥಿನಿ ಟ್ರ್ಯಾಕ್ ಮೇಲೆ ಮಲಗಿರುವುದು ಕಂಡುಬಂದಿದೆ. ಆ ಸಮಯದಲ್ಲಿ, ಮೋತಿಹಾರಿಯಿಂದ ಮುಜಾಫರ್ಪುರಕ್ಕೆ ಪ್ರಯಾಣಿಸುತ್ತಿದ್ದ ರೈಲು ಸಮೀಪಿಸುತ್ತಿತ್ತು. ಆಗ ಅಪಾಯವನ್ನು ಅರಿತುಕೊಂಡ ರೈಲು ಚಾಲಕ, ತಕ್ಷಣ ಬ್ರೇಕ್ ಹಾಕಿದ್ದಾನೆ. ರೈಲು ವೇಗವಾಗಿ ಚಲಿಸುತ್ತಿದ್ದರೂ ಕೂಡ ಚಾಲಕನ ತ್ವರಿತ ಕ್ರಮದಿಂದ ದುರಂತವನ್ನು ತಪ್ಪಿಸಲು ಸಾಧ್ಯವಾಯಿತು.

ರೈಲು ನಿಲ್ಲಿಸಿದ ನಂತರ, ಚಾಲಕ ತಕ್ಷಣ ಇಳಿದು ವಿದ್ಯಾರ್ಥಿಯನ್ನು ಹಳಿಗಳಿಂದ ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ವಿದ್ಯಾರ್ಥಿನಿ ಮೊಂಡುತನದಿಂದ ಅಲ್ಲಿಂದ ಎದ್ದು ಬರಲು ನಿರಾಕರಿಸಿದ್ದಾಳೆ. ರೈಲು ತುಂಬಾ ಹೊತ್ತು ನಿಂತಿದ್ದರಿಂದ ಪರಿಸ್ಥಿತಿ ಹೆಚ್ಚು ಉದ್ವಿಗ್ನವಾಯಿತು. ಚಾಲಕ ಎಷ್ಟೇ ಕೇಳಿಕೊಂಡರೂ ವಿದ್ಯಾರ್ಥಿನಿ ಕೇಳದ ಕಾರಣ ಅಲ್ಲಿಗೆ ಬಂದ ಸ್ಥಳೀಯ ಮಹಿಳೆಯರು ಮಧ್ಯಪ್ರವೇಶಿಸಿ ಸಾಕಷ್ಟು ಪ್ರಯತ್ನ ಮಾಡಿ , ವಿದ್ಯಾರ್ಥಿನಿಯನ್ನು ಟ್ರ್ಯಾಕ್‍ನಿಂದ ಬಲವಂತವಾಗಿ ಹೊರಗೆ ಎಳೆದಿದ್ದಾರೆ. ವೈಯಕ್ತಿಕ ವಿಷಯದ ಬಗ್ಗೆ ನೊಂದ ವಿದ್ಯಾರ್ಥಿನಿ ಜೋರಾಗಿ ಅಳುತ್ತಿದ್ದಳು ಮತ್ತು ತನ್ನ ಜೀವನವನ್ನು ಕೊನೆಗೊಳಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ.

ಇದನ್ನೂ ಓದಿ:ಹಾಲಿನ ಕೆನೆ ಮತ್ತು ಅಲೋವೆರಾ ಇವೆರಡರಲ್ಲಿ ಯಾವುದು ನಿಮ್ಮ ಚರ್ಮಕ್ಕೆ ಸೂಕ್ತ?

ಮೂಲಗಳ ಪ್ರಕಾರ, ತನ್ನ ಗೆಳೆಯನನ್ನು ಮದುವೆಯಾಗುವ ವಿಚಾರದಲ್ಲಿ ಕುಟುಂಬದಲ್ಲಿ ವಿವಾದ ನಡೆದಿದ್ದರಿಂದ ವಿದ್ಯಾರ್ಥಿನಿ ಬೇಸರಗೊಂಡಿದ್ದಳು. ಆಕೆಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿತ್ತು ಎಂದು ವರದಿಯಾಗಿದೆ, ಇದರಿಂದಾಗಿ ಆಕೆ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಆಕೆಯನ್ನು ಹಳಿಯಿಂದ ಹೊರಗೆ ಕರೆದುಕೊಂಡು ಬಂದ ನಂತರ, ರೈಲು ತನ್ನ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಯಿತು. ಸ್ಥಳೀಯ ನಿವಾಸಿಗಳ ಮಧ್ಯಪ್ರವೇಶ ಮತ್ತು ರೈಲು ಚಾಲಕನ ನಿರ್ಣಾಯಕ ಕ್ರಮಗಳು ಸಂಭಾವ್ಯ ದುರಂತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ವಿದ್ಯಾರ್ಥಿನಿಯನ್ನು ಸ್ಥಳೀಯ ಜನರು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋದರು.