Thursday, 12th December 2024

ಬಿಹಾರ ವಿಧಾನಸಭೆ: ಮತ ಎಣಿಕೆ ಸಂಜೆಯ ಬಳಿಕವೂ ಮುಂದುವರಿಯಲಿದೆ ಎಂದ ಚುನಾವಣಾ ಆಯೋಗ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಪಾರ ಪ್ರಮಾಣದಲ್ಲಿ ಮತ ಎಣಿಕೆ ಇನ್ನೂ ಬಾಕಿ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಹಾರದ ಮುಖ್ಯ ಚುನಾವಣಾ ಆಯುಕ್ತ ಎಚ್ ಆರ್ ಶ್ರೀನಿವಾಸ್, ’50 ಸುತ್ತುಗಳಷ್ಟು ಮತ ಎಣಿಕೆ ಮಾಡಬೇಕಾದ ಅನೇಕ ಕ್ಷೇತ್ರಗಳಿವೆ. 4 ಕೋಟಿ 10 ಲಕ್ಷ ಮಂದಿ ಮತಚಲಾಯಿಸಿದ್ದಾರೆ. ನಾವು ಇದು ವರೆಗೂ 95 ಲಕ್ಷ ಮತಗಳನ್ನು ಎಣಿಕೆ ಮಾಡಿದ್ದೇವೆ. ಎಣಿಕೆಯು ಸಂಜೆಯ ಬಳಿಕವೂ ಮುಂದುವರಿಯಲಿದೆ’ ಎಂದು ತಿಳಿಸಿದರು.

ಇದುವರೆಗೂ ಮತ ಎಣಿಕೆ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆದಿದೆ. ಒಟ್ಟು 30 ರಿಂದ 35 ಸುತ್ತುಗಳಲ್ಲಿ ಮತ ಎಣಿಕೆ ನಡೆಯ ಲಿದೆ. 20-25 ಸುತ್ತುಗಳ ಮತ ಎಣಿಕೆ ಇನ್ನೂ ಬಾಕಿ ಇದೆ ಎಂದರು.

ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇವಿಎಂಗಳನ್ನು ಟ್ಯಾಂಪರ್ ಮಾಡಲಾಗದು. ಇವಿಎಂಗಳ ಗುಣಮಟ್ಟವನ್ನು ಸುಪ್ರೀಂಕೋರ್ಟ್ ಹಲವು ಬಾರಿ ಎತ್ತಿ ಹಿಡಿದಿದೆ. 2017ರಲ್ಲಿ ಇವಿಎಂ ಚಾಲೆಂಜ್ ಅನ್ನು ಕೂಡ ಚುನಾವಣಾ ಆಯೋಗ ಇರಿಸಿತ್ತು ಎಂದು ಸ್ಪಷ್ಟಪಡಿಸಿದರು.