Friday, 13th December 2024

ನನ್ನ ಜಾತಕದಲ್ಲಿ ಸಿಎಂ ಯೋಗ ಇದೆ : ಸಿಎಂ ಇಬ್ರಾಹಿಂ ವಿಶ್ವಾಸದ ನುಡಿ

ವಿಶ್ವವಾಣಿ ಕ್ಲಬ್‌ಹೌಸ್‌ (ಸಂವಾದ ೧೧)

ನೋಡ್ತಾ ಇರಿ, ನವೆಂಬರ್‌ ಹೊತ್ತಿಗೆ ನಾನು ಟಾಪ್‌ ಅಲ್ಲಿ ಬತ್ತೀನಿ

ನನ್ನ ಜಾತಕದಲ್ಲಿ ಸಿಎಂ ಆಗ್ತೀನಿ ಅನ್ನೋ ಯೋಗ ಇದೆ: ಸಿಎಂ ಇಬ್ರಾಹಿಂ

ಬೆಂಗಳೂರು: ನವೆಂಬರ್ ವರೆಗೆ ಕಾಯ್ತಾ ಇರಿ, ನಾನು ಟಾಪಲ್ಲಿ ಬತ್ತೀನಿ, ನನ್ನ ಜಾತಕದಲ್ಲೇ ಸಿಎಂ ಆಗೋ ಯೋಗ ಇದೆ ಅಂತ ಬರೆದಿದೆ. ಹೀಗಾಗಿ, ನಾನು ಕೂಡ ಸಿಎಂ ಆಗಿಯೇ ಆಗ್ತೀನಿ. ಅದಕ್ಕಾಗಿ ಕಾಯ್ತ ಇರಿ.. ಇದು ಕಾಯಂ ಸಿಎಂ, ಕರ್ನಾಟಕದ ವರ್ಣರಂಜಿತ ರಾಜಕಾರಣಿ ಇಬ್ರಾಹಿಂ ಅವರ ಮನದಾಳದ
ಮಾತುಗಳು.

‘ವಿಶ್ವವಾಣಿ’ ಕ್ಲಬ್‌ಹೌಸ್‌ನ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಭಾಗ ವಹಿಸಿದ್ದರು. ಕೇಳುಗರ ಕೇಳಿದ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡುವ ಮೂಲಕ ಪಸ್ತುತ ರಾಜಕಾರಣ, ಸರಕಾರಗಳ ವೈಫಲ್ಯ, ಕಾಂಗ್ರೆಸ್‌’ ನೊಳಗಿನ ಸಿಎಂ ವಿವಾದ, ಧರ್ಮಗಳ ನಡುವಿನ ಸಾಮರಸ್ಯ ಸೇರಿದಂತೆ ಇನ್ನಿತರ ಗಂಭೀರ ವಿಚಾರಗಳ ಬಗ್ಗೆ ಗಹನವಾದ ಚರ್ಚೆ ನಡೆಸಿದರು.

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮುಂದಿನ ಸಿಎಂ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ ಅವರು, ಸಿಎಂ ಸ್ಥಾನಕ್ಕೆ ನಾನು ಕೂಡ ಆಕಾಂಕ್ಷಿ. ನನಗೂ ಸಿಎಂ ಆಗಬೇಕೆಂಬ ಬಯಕೆ ಇದೆ. ಆದರೆ, ಕಾಲ ಕೂಡಿ ಬರಬೇಕು. ನನ್ನ ಜಾತಕದಲ್ಲೇ ಸಿಎಂ ಆಗುವ ಯೋಗ ಇದೆ ಎಂದು ಹೇಳಿದ್ದಾರೆ. ಹೀಗಾಗಿ, ನಾನು ಒಂದಲ್ಲ ಒಂದು ದಿನ ಸಿಎಂ ಆಗಿಯೇ ಆಗುತ್ತೇನೆ. ಕರ್ನಾಟಕದ ಜನತೆ ನನ್ನನ್ನು ಸಿಎಂ ಮಾಡಿಯೇ ಮಾಡುತ್ತಾರೆ ಎಂಬ ಭರವಸೆ ಇದೆ. ಆದರೆ, ನಾನು ಧರ್ಮದ ಆಧಾರದಲ್ಲಿ ರಾಜಕೀಯ ಮಾಡಲು ಬಯಸುವಿಲ್ಲ. ಪ್ರಸ್ತುತ ರಾಜಕಾರಣದಲ್ಲಿ ಹರಿಕಥೆ ಕೇಳುವ ಜನರಿಲ್ಲ.

ಬದಲಾಗಿ ಡಿಸ್ಕೋ ಡ್ಯಾನ್ಸ್ ಬಂದಿದೆ. ಹೀಗಾಗಿ, ಚುನಾವಣೆ ಎಂಬುದು ದುಡ್ಡಿರುವವರ ಪರವಾಗಿದ್ದು ಎಂಬ ಭಾವನೆ ಇದೆ. ಗಾಂಧಿ ಬಂದರೂ ಎಲೆಕ್ಷನ್ ಖರ್ಚಿಗೆ ಹತ್ತು ಕೋಟಿ ಬೇಕಾಗಬಹುದು ಎನ್ನುವ ಮೂಲಕ ಹದಗೆಟ್ಟಿರುವ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆಯನ್ನು ವಿಡಂಬನೆ ಮಾಡಿದರು. ವೀರೇಂದ್ರ ಪಾಟೀಲ್, ದೇವೇಗೌಡರು, ಜೆ.ಎಚ್. ಪಾಟೀಲ್. ಗುಂಡೂರಾವ್, ಬಂಗಾರಪ್ಪ ಅವರಂತಹ ರಾಜಕಾರಣಿಗಳು ರಾಜ್ಯವನ್ನು ಆಳಿದ್ದು, ಅವರೆಲ್ಲರೂ ರಾಜ್ಯದ ಘನತೆ
ಹೆಚ್ಚಿಸಿದರು. ಯಡಿಯೂರಪ್ಪ ಅವರು ಕೂಡ ಅದೇ ರೀತಿ ರಾಜಕಾರಣ ಮಾಡಬಹುದಿತ್ತು.

೧೭ ಜನರನ್ನು ಕರೆದೊಯ್ದು ಸರಕಾರ ರಚನೆ ಮಾಡಿದರು. ಅವರು ಮಾಡಬಾರದ್ದು ಮಾಡಿ ಕೋರ್ಟ್ ಮುಂದೆ ಹೋದರು. ನಾನು ಸರ್ವ ಧರ್ಮದ ಸಾರವನ್ನು ತಿಳಿಯುತ್ತೇನೆ. ನಾನು ಮತ್ತು ಯಡಿಯೂರಪ್ಪ ಇಬ್ಬರು ಬಸವ ಕೃಪದವರು. ಆದರೆ, ಬಿಎಸ್‌ವೈ ಬವಣ್ಣನನ್ನು ಓದುತ್ತಿಲ್ಲ. ಹೀಗಾಗಿ ಹಾಳಾಗುತ್ತಿದ್ದಾರೆ. ರಾಜ್ಯದಲ್ಲಿ ಕೇಶವ ಕೃಪಕ್ಕೆ ಪರ್ಸೆಂಟ್ ಮಾತ್ರ ಮತಗಳಿವೆ. ಆದರೆ, ಬಸವ ಕೃಪಕ್ಕೆ ೨೨ ಪರ್ಸೆಂಟ್ ಮತಗಳಿವೆ. ಹೀಗಾಗಿ, ಬಿಎಸ್‌ವೈ ಇನ್ನೂ ಉಳಿದುಕೊಂಡಿದ್ದಾರೆ ಎಂದರು.

ನಾನು ಮುಸ್ಲಿಂ ನಾಯಕನಲ್ಲ: ನಾನು ಮುಸ್ಲಿಂ ಸಮುದಾಯಕ್ಕೆ ಸೀಮಿತವಾದ ನಾಯಕ ಎನಿಸಿಕೊಳ್ಳಲು ನಾನು ಬಯಸುವುದಿಲ್ಲ. ಕರ್ನಾಟಕ ಹಿಂದೂ ಅಥವಾ ಮುಸ್ಲಿಮರ ಮನೆಯಲ್ಲ, ನಾವೆಲ್ಲ ಮನುಷ್ಯರು ಎಂಬ ಭಾವನೆ ಇರಬೇಕು. ಒಳ್ಳೆಯ ಮುಸ್ಲಿಂ ಎಂದೂ ಜಾತೀವಾದಿಯಾಗುವುದಿಲ್ಲ. ನಾನು ಆ ರೀತಿ ಬಂದವನು. ನನ್ನ ಮಡದಿ ಸ್ಮಾರ್ಥರು, ಶೃಂಗೇರಿ ಮಠದೊಡನೆ ನನಗೆ ನಿಕಟ ಸಂಪರ್ಕ ಇತ್ತು. ದೇವನೊಬ್ಬ ನಾಮ ಹಲವು ಎಂಬುದು ನನ್ನ ತತ್ವ. ಧರ್ಮ ಎಂದರೆ ನಮಾಜ, ವಿಭೂತಿ ಬಳಿಯುವುದಲ್ಲ. ನಾನು ಸಿರಿಗೆರೆ ಮಠದಲ್ಲಿದೆ. ರಾಮರಾಯರು ಅಂತ ಕನ್ನಡ ಮೇಸ್ಟ್ರು ಇದ್ದರು. ಇವರೆಲ್ಲರೂ ನನ್ನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸಿದರು ಎಂದರು.

ಗುಡಿ ಕಟ್ಟೋದು ಸರಕಾರದ ಸಾಧನೆಯಲ್ಲ: ಗುಡಿ ಕಟ್ಟುವುದು, ಮಸೀದಿ ಕಟ್ಟುವುದು ಸರಕಾರದ ಸಾಧನೆಯಲ್ಲ. ಜನರು ನೆನಪಿನಲ್ಲಿ ಉಳಿಯುವ ಆಡಳಿತ ನೀಡುವುದು ಆಡಳಿತಗಾರನ ಲಕ್ಷಣ. ಮೋದಿ ಅವರು ಇಂತಹದ್ದರಲ್ಲಿ ಎಡವುತ್ತಿದ್ದಾರೆ. ವಿಮಾನಯಾನ ಸಚಿವನಾಗಿದ್ದಾಗ ಏರ್ ಇಂಡಿಯಾ ಸಂಸ್ಥೆ ಲಾಭದಲ್ಲಿತ್ತು. ಈಗ ಎಲ್ಲವೂ ನಷ್ಟದಲ್ಲಿದೆ. ಇದಕ್ಕೆ ಸರಕಾರವೇ ಕಾರಣ. ನಾವು ಯಾವುದನ್ನು ಮಾರಲಿಲ್ಲ, ಹೀಗಾಗಿ, ಪ್ಲೇನ್ ಉಳಿಯಿತು. ರೂಟ್ ಉಳಿಲಿಲ್ಲ. ಮೋದಿ ಮಾರಾಟ
ಮಾಡ್ತಿದ್ದಾರೆ. ದೇಶದಲ್ಲಿ ಇಂದು ದುರ್ಭೀಕ್ಷ ಕಾಲ ಬಂದಿದೆ. ಜನ ಬದಲಾವಣೆ ಬಯಸಿದಾಗ ಎದುರಿಗಿರುವವರು ಬಲಿಷ್ಠರಲ್ಲದಿದ್ದರೂ ಬದಲಾವಣೆ ಆಗುತ್ತದೆ.

ಹೀಗಾಗಿ, ರಾಹುಲ್ ಗಾಂಧಿ ಮೋದಿಗೆ ಪರ್ಯಾಯ ಆಗಬಹುದು. ಶರದ್ ಪವಾರ್, ಮಮತಾ ಬ್ಯಾನರ್ಜಿ ಕೂಡ ಮೋದಿ ಎದುರಿಗೆ ಮುಂದಿನ ದಿನಗಳಲ್ಲಿ ಪ್ರಬಲ
ನಾಯಕರಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಣೆ ಮಾಡಿದರು.

ವಚನ, ಸಂಸ್ಕೃತ ವಾಚನ

ಸತತ ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಸಿ.ಎಂ. ಇಬ್ರಾಹಿಂ, ತಮ್ಮ ಮಾತಿನುದ್ದಕ್ಕೂ ಶರಣರ ವಚನಗಳನ್ನು, ಸಂಸ್ಕೃತ ಶ್ಲೋಕಗಳನ್ನು ಪ್ರಸ್ತಾಪ ಮಾಡಿದರು. ಭಗವದ್ಗೀತೆ ಶ್ಲೋಕಗಳನ್ನು ಅಲ್ಲಲ್ಲಿ ಪ್ರಸ್ತಾಪಿಸುವ ಮೂಲಕ ಪ್ರಸ್ತುತ ಮನಸ್ಥಿತಿ ಮತ್ತು ರಾಜಕಾರಣವನ್ನು ಟೀಕಿಸಿದರು. ತಮ್ಮ ಈ ಪಾಂಡಿತ್ಯಕ್ಕೆ ತಾವು ಮಠ ಮಾನ್ಯಗಳೊಡನೆ, ಮತ್ತು ಇನ್ನಿತರೆ ಜ್ಞಾನಿಗಳೊಡನೆ ಬೆರೆತಿದ್ದೆ ಕಾರಣ.

ಸರ್ವ ಧರ್ಮದ ಸಾರವೂ ಒಂದೇ ಆಗಿದ್ದು, ಅಲ್ಲಾಹ್, ರಾಮ, ಈಶ್ವರನ ಹೆಸರಲ್ಲಿ ನಡೆಯುವ ಸಮಾಜ ವಿಭಜನೆ ನಿಲ್ಲಬೇಕು. ಮನುಷ್ಯತ್ವ ಎಂಬುದೇ ಅಂತಿಮ ಎಂಬ ಪ್ರಾಮಾಣಿಕತೆ ಉಳಿಯಬೇಕು ಎಂದು ಪ್ರತಿಪಾದಿಸಿದರು.

ಸಿಎಂ ಇಬ್ರಾಹಿಂ ಉವಾಚ
*ಎಲ್.ಕೆ. ಅಡ್ವಾಣಿಯಿಂದ ನರೇಂದ್ರ ಮೋದಿ ಇಂದಿಗೂ ಉಳಿದಿದ್ದಾರೆ.
*ಊಟದ ಪಂಕ್ತಿ ಬದಲಾಯಿಸುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.
*ಇತ್ತೀಚೆಗೆ ಸಿದ್ದರಾಮಯ್ಯ ಅವರ ಟೇಸ್ಟ್ ಬದಲಾಗಿದೆ.
*ಕುಮಾರಸ್ವಾಮಿ, ರೇವಣ್ಣ ನಾವು ಎತ್ತಿ ಆಡಿಸಿದ ಹುಡುಗ್ರು
*ನಾನು ಮತ್ತು ಬಿಎಸ್‌ವೈ ಎಲ್ಲರೂ ಬಸವ ಕೃಪದವರು
*ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಸಿದ್ದರಾಮಯ್ಯ ಅವರ ತಪ್ಪು
*ಜೈಲಿಗೆ ಹೋಗಿ ಬಂದವರಿಗೆ ಪದವಿ, ಇದೇ ಇಂದಿನ ರಾಜಕಾರಣ
*ಉತ್ತರ ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ನಾಯಕ ಸಿಕ್ಕರೆ ಜೆಡಿಎಸ್ ಕೂಡ ಪ್ರಬಲ