ನಮ್ಮ ಆರೋಗ್ಯ ಕಾಪಾಡುವಲ್ಲಿ ನಾವು ತಿನ್ನುವ ಅಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲದರದ್ದೂ ಪಾತ್ರವಿದೆ. ಇವೆಲ್ಲೂ ಶುದ್ಧವಾಗಿದ್ದಷ್ಟೂ ನಮ್ಮ ಆರೋಗ್ಯವೂ ಚೆನ್ನಾಗಿರಬಲ್ಲದು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವಯಂಕೃತ ಲೋಪದಿಂದಾಗಿ ವಾತಾವರಣವೆಲ್ಲವೂ ಕಲುಷಿತಗೊಂಡಿರುವುದರಿಂದ, ಇದಕ್ಕೆ ಸಂಬಂಧಿಸಿದ ರೋಗಗಳ ಪ್ರಮಾಣದಲ್ಲೂ ತೀವ್ರ ಏರಿಕೆಯಾಗಿದೆ. ಆದರೆ ಈ ಕುರಿತು ಜನಜಾಗೃತಿ ಮೂಡಿಸುವುದು ಸುಲಭದ ಮಾತಲ್ಲ. ಹಾಗಾಗಿ ಪರಿಸರದ ಕಾರಣದಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚಿಸುವ ಉದ್ದೇಶದಿಂದ, ಸೆಪ್ಟೆಂಬರ್ ತಿಂಗಳ 26ನೇ ದಿನವನ್ನು ವಿಶ್ವ ಪರಿಸರ ಆರೋಗ್ಯ ದಿನವೆಂದು (World Environment Day 2024) ಆಚರಿಸಲಾಗುತ್ತದೆ.
ಇದೇ ವರ್ಷ ಜೂನ್‌ನಲ್ಲಿ ಅಮೆರಿಕದ ಪ್ರಮುಖ ಸಂಶೋಧನಾ ಸಂಸ್ಥೆಯೊಂದು ಪ್ರಕಟಿಸಿರುವ ವರದಿಯ ಪ್ರಕಾರ, 2021 ಸಾಲಿನಲ್ಲಿ ವಾಯು ಮಾಲಿನ್ಯದಿಂದಾಗಿ ವಿಶ್ವಮಟ್ಟದಲ್ಲಿ 80 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲ್ಯಾನ್ಸೆಟ್ ಸಂಸ್ಥೆಯ ದತ್ತಾಂಶಗಳೂ ಇದನ್ನು ಪುಷ್ಟೀಕರಿಸಿವೆ.
ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಜನ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುವುದಕ್ಕೆ ಪರಿಸರದ ಮಾಲಿನ್ಯ ಕಾರಣವಾಗಿದೆ. ಇದರಲ್ಲಿ ಉಸಿರಾಟದ ತೊಂದರೆಗಳು, ಹಲವು ರೀತಿಯ ಕ್ಯಾನ್ಸರ್‌ಗಳು, ಹೃದ್ರೋಗ, ಪಾರ್ಶ್ವವಾಯುವಿನಂಥ ಗಂಭೀರ ರೋಗಗಳು ಸೇರಿವೆ. ಜಲ ಮಾಲಿನ್ಯವು ವಾರ್ಷಿಕ 15 ಲಕ್ಷ ಮಂದಿಯ ಜೀವಕ್ಕೆ ಎರವಾಗುತ್ತದೆ.
ಆಹಾರ ಸುರಕ್ಷತೆಯೂ ಸಮಸ್ಯೆಯಾಗಿದ್ದು, ಪ್ರತಿವರ್ಷ ಜಾಗತಿಕವಾಗಿ 600 ದಶಲಕ್ಷ ಅನಾರೋಗ್ಯ ಪ್ರಕರಣಗಳು ವರದಿಯಾಗುತ್ತಿವೆ.
ಭೂಮಿ ಮತ್ತು ಪರಿಸರದ ಮೇಲಿನ ವಿಪರೀತ ಒತ್ತಡದಿಂದಾಗಿ ಸಂಭವಿಸುತ್ತಿರುವ ಪ್ರಾಕೃತಿಕ ವಿಪತ್ತುಗಳು ಪಡೆಯುತ್ತಿರುವ ಆಹುತಿಯ ಪ್ರಮಾಣ ನಿರಂತರ ಏರುತ್ತಿದೆ. ಹಾಗಾಗಿ ಎಲ್ಲ ದೇಶಗಳ ಪ್ರಗತಿ, ಆರ್ಥಿಕತೆ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಸರ ಮಾಲಿನ್ಯವೆಂಬುದು ಅಗಾಧ ಒತ್ತಡವನ್ನು ಹೇರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಇತಿಹಾಸವೇನು?
ಅಂತಾರಾಷ್ಟ್ರೀಯ ಪರಿಸರ ಆರೋಗ್ಯ ಒಕ್ಕೂಟವು 2011ರಲ್ಲಿ ಈ ದಿನದ ಆಚರಣೆಯನ್ನು ಘೋಷಿಸಿತು. ನಮ್ಮ ಆರೋಗ್ಯ ಮತ್ತು ಪರಿಸರದ ಆರೋಗ್ಯದ ನಡುವಿನ ನಂಟನ್ನು ವಿಶ್ವಕ್ಕೆ ಅರ್ಥೈಸಿಕೊಡುವ ಉದ್ದೇಶಕ್ಕಾಗಿ ಈ ದಿನವನ್ನು ಮೀಸಲಿಡಲಾಗಿದೆ. ಸ್ವಚ್ಛ ಗಾಳಿ, ಸುಸ್ಥಿರ ಪರಿಸರ ಮತ್ತು ಕೃಷಿ, ನಿರ್ಮಲ ವಾತಾವರಣ, ತ್ಯಾಜ್ಯ ನಿರ್ವಹಣೆ, ಸುರಕ್ಷಿತ ರಾಸಾಯನಿಕಗಳನ್ನು ಮಾತ್ರವೇ ಬಳಕೆ ಮಾಡುವುದು, ಶುದ್ಧ ಕುಡಿಯುವ ನೀರು- ಇವೆಲ್ಲವೂ ಸಾರ್ವಜನಿಕ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಉಂಟುಮಾಡಬಲ್ಲವು.
ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ವಿಕೋಪಗಳು ಸಹ ಅಗಾಧ ಪ್ರಮಾಣದಲ್ಲಿ ಸಾವು-ನೋವು ಉಂಟುಮಾಡುತ್ತಿವೆ. ಬದಲಾಗುತ್ತಿರುವ ಹವಾಮಾನ ಮತ್ತು ಅದರ ಫಲವಾಗಿ ಉಂಟಾಗುತ್ತಿರುವ ಪ್ರಾಕೃತಿಕ ವಿಪತ್ತುಗಳನ್ನು ಎದುರಿಸುವಲ್ಲಿ ಸಮುದಾಯಗಳು ಸಶಕ್ತವಾಗಿರಬೇಕೆನ್ನುವುದು ಈ ವರ್ಷದ ಪರಿಸರ ಆರೋಗ್ಯ ದಿನದ ಸದಾಶಯ.
Highest Paid CEOs: ಭಾರತದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ 8 ಸಿಇಒಗಳ ಪಟ್ಟಿ ಇಲ್ಲಿದೆ
ಘೋಷ ವಾಕ್ಯ ಏನು?
ಪರಿಸರ ಆರೋಗ್ಯ: ಹವಾಮಾನ ಬದಲಾವಣೆ ಕಡಿತ ಮತ್ತು ಹೊಂದಾಣಿಕೆ ಹಾಗೂ ಪ್ರಕೋಪ ಭೀತಿ ತಗ್ಗಿಸುವ ಮೂಲಕ ಪುನಶ್ಚೇತನಗೊಳ್ಳುವಂಥ ಸಮಯದಾಯಗಳ ರಚನೆ.