ನವದೆಹಲಿ: ತನ್ನ ಸಾಕು ನಾಯಿಗೆ ಬಲೂನ್ ಕಟ್ಟಿ ಹಾರಿಸಿ ವಿಡಿಯೋ ಮಾಡಿದ್ದ ದೆಹಲಿಯ ಯುಟ್ಯೂಬರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ನಾಯಿಯ ಬೆನ್ನಿಗೆ ಬಲೂನ್ ಗಳನ್ನು ಕಟ್ಟಿ ಅಪಾರ್ಟ್ ಮೆಂಟ್ ಮೇಲಿನಿಂದ ಎಸೆಯಲಾಗಿದೆ. ಇದನ್ನು ವಿಡಿಯೋ ಮಾಡಲಾಗಿದೆ. ವಿಡಿಯೋ ವೈರಲ್ ಆಗಿ ತೀವ್ರ ಟೀಕೆಗಳು ಎದುರಾದ ನಂತರ ಗೌರವ್ ಶರ್ಮಾ ವಿಡಿಯೋ ಡಿಲೀಟ್ ಮಾಡಿ, ನಂತರ ಮತ್ತೊಂದು ವಿಡಿಯೋದಲ್ಲಿ ಮಾಡಿ ಕ್ಷಮೆಯಾಚಿಸಿದ್ದಾನೆ.
‘ಪೀಪಲ್ ಫಾರ್ ಅನಿಮಲ್ಸ್ ಸೊಸೈಟಿಗೆ’ ಸೇರಿದ ಗೌರವ್ ಗುಪ್ತಾ ಎಂಬುವರು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಗೌರವ್ ಶರ್ಮಾನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಪೊಲೀಸ್ ಉಪ ಆಯುಕ್ತ (ಡಿಸಿಪಿ) (ದಕ್ಷಿಣ) ಅತುಲ್ ಠಾಕೂರ್ ಹೇಳಿದ್ದಾರೆ.
ತಮ್ಮ ಸಾಕು ನಾಯಿಯನ್ನು ಹೀಲಿಯಂ ಬಲೂನ್ ಗಳಿಗೆ ಕಟ್ಟಿ ಹಾರಿಸಿದ್ದು, ಆ ಮೂಲಕ ನಾಯಿಯನ್ನು ಗಾಳಿಯಲ್ಲಿ ಹಾರಿಸಿ ಅದರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಲ್ವಿಯಾ ನಗರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.