2025ರ ಐಪಿಎಲ್ ಟೂರ್ನಿಯಲ್ಲಿ ಮುರಿದ ಪ್ರಮುಖ ದಾಖಲೆಗಳ ವಿವರ!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಅಂತ್ಯವಾಗಿದೆ. ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಜೂನ್ 3 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಆರ್ಸಿಬಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.



2025ರಲ್ಲಿ ಮುರಿದ ಪ್ರಮುಖ ದಾಖಲೆಗಳು
2025ರ ಐಪಿಎಲ್ ಟೂರ್ನಿಯು ಅಂತ್ಯವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿದೆ. ಈ ಟೂರ್ನಿಯಲ್ಲಿ ಹಲವು ದೊಡ್ಡ ದಾಖಲೆಗಳನ್ನು ತಂಡಗಳು ಹಾಗೂ ಆಟಗಾರರು ಮುರಿದಿದ್ದಾರೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಸಾಯಿ ಸುದರ್ಶನ್
700ಕ್ಕೂ ಅಧಿಕ ರನ್ ಗಳಿಸಿ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಬರೆದಿದ್ದಾರೆ. ಇವರು 15 ಇನಿಂಗ್ಸ್ಗಳಿಂದ 54.21ರ ಸರಾಸರಿಯಲ್ಲಿ 759 ರನ್ಗಳನ್ನು ಕಲೆ ಹಾಕಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ತವರಿನಾಚೆ ಆಡಿದ ಎಲ್ಲಾ ಏಳು ಪಂದ್ಯಗಳಲ್ಲಿ ಗೆಲುವು ಪಡೆದ ಮೊದಲ ತಂಡ ಎಂಬ ದೊಡ್ಡ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೆದಿದೆ. ಐಪಿಎಲ್ ಟೂರ್ನಿಯಲ್ಲಿ ಯಾವುದೇ ತಂಡ ಮಾಡದ ದಾಖಲೆಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿದೆ.

ಪಂಜಾಬ್ ಕಿಂಗ್ಸ್
ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಅತ್ಯಂತ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಿದ ದಾಖಲೆಯನ್ನು ಬರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ 111 ರನ್ಗಳಿಗೆ ಆಲ್ಔಟ್ ಆಗಿತ್ತು. ಬಳಿಕ ಕೆಕೆಆರ್ ತಂಡವನ್ನು 95ಕ್ಕೆ ಪಂಜಾಬ್ ಆಲ್ಔಟ್ ಮಾಡಿತ್ತು.

ಕೃಣಾಲ್ ಪಾಂಡ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಕೃಣಾಲ್ ಪಾಂಡ್ಯ ಈ ಟೂರ್ನಿಯಲ್ಲಿ ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ವಿಶೇಷ ದಾಖಲೆಯನ್ನು ಆರ್ಸಿಬಿ ಆಲ್ರೌಂಡರ್ ಬರೆದಿದ್ದಾರೆ.

ವೈಭವ್ ಸೂರ್ಯವಂಶಿ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಹಾಗೂ ವೇಗದ ಶತಕವನ್ನು ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಬರೆದಿದ್ದಾರೆ.

ಐಪಿಎಲ್ ಗೆದ್ದ 8ನೇ ತಂಡ ಆರ್ಸಿಬಿ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಎಂಟನೇ ತಂಡ ಎಂಬ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾಜನವಾಯಿತು. ಚೊಚ್ಚಲ ಕಪ್ ಗೆಲ್ಲಲು ಆರ್ಸಿಬಿ 18 ವರ್ಷಗಳ ಕಾಲ ಕಾಯಬೇಕಾಯಿತು.