ಎಬಿಡಿ, ಗೇಲ್ ಅಲ್ಲ! ತಮ್ಮ ಮೇಲೆ ಪ್ರಭಾವ ಬೀರಿದ ಆಟಗಾರರನ್ನು ಹೆಸರಿಸಿದ ವಿರಾಟ್ ಕೊಹ್ಲಿ!
ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ತಮ್ಮ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಿದ ದಿಗ್ಗಜನನ್ನು ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಮರಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಷರ್ ತಮಗೆ ತುಂಬಾ ನೆರವು ನೀಡಿದ್ದಾರೆಂದು ಹೇಳಿಕೊಂಡಿದ್ದಾರೆ.



ಭರ್ಜರಿ ಫಾರ್ಮ್ನಲ್ಲಿ ವಿರಾಟ್ ಕೊಹ್ಲಿ
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 11 ಪಂದ್ಯಗಳಿಂದ 7 ಅರ್ಧಶತಕಗಳ ಬಲದಿಂದ 505 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ದಿಗ್ಗಜನನ್ನು ನೆನೆದ ವಿರಾಟ್ ಕೊಹ್ಲಿ
ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ತಮ್ಮ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಿದ್ದ ದಿಗ್ಗಜನನ್ನು ವಿರಾಟ್ ಕೊಹ್ಲಿ ಸ್ಮರಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಷರ್, ಕೊಹ್ಲಿಗೆ ಉಪಯುಕ್ತ ಸಲಹೆಯನ್ನು ನೀಡಿದ್ದರು.

ವಿರಾಟ್ ಕೊಹ್ಲಿ-ಮಾರ್ಕ್ ಬೌಷರ್
2008 ಹಾಗೂ 2011ರ ಐಪಿಎಲ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಹಾಗೂ ಮಾರ್ಕ್ ಬೌಷರ್ ಜೊತೆಯಲ್ಲಿ ಆಡಿದ್ದರು. ಇದಾದ ಬಳಿಕ ಮಾರ್ಕ್ ಬೌಷರ್ ಬೇರೆ ತಂಡಕ್ಕೆ ಸೇರ್ಪಡೆಯಾಗಿದ್ದರೆ, ವಿರಾಟ್ ಕೊಹ್ಲಿ ಆರ್ಸಿಬಿಯಲ್ಲಿ ಮುಂದುವರಿದಿದ್ದಾರೆ.

ಪಾಡ್ಕಾಸ್ಟ್ನಲ್ಲಿ ಕೊಹ್ಲಿ ಮಾತು
ಆರ್ಸಿಬಿ ಪಾಡ್ಕಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಸಿದ್ಧ ಕ್ರಿಕೆಟ್ ನಿರೂಪಕಿ ಮಯಾಂತಿ ಲ್ಯಾಂಗರ್ ಅವರ ಜತೆ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದ ಹಲವು ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮಾರ್ಕ್ ಬೌಷರ್ ಮಾಡಿದ್ದ ಸಹಾಯವನ್ನು ಕೂಡ ಬಹಿರಂಗಪಡಿಸಿದ್ದಾರೆ.

ಬೌಷರ್ ದೊಡ್ಡ ಪ್ರಭಾವ ಬೀರಿದ್ದರು
"ಎಲ್ಲಾ ವಿದೇಶಿ ಆಟಗಾರರ ಪೈಕಿ ಮಾರ್ಕ್ ಬೌಷರ್ ಅವರು ತಮ್ಮ ವೃತ್ತಿ ಜೀವನದ ಮೇಲೆ ದೊಡ್ಡ ಪ್ರಭಾವವನ್ನು ಬೀರಿದ್ದರು. ನಾನು ಆಗ ಯುವ ಆಟಗಾರ. ಅವರೇ ನನ್ನ ಬಳಿ ಬಂದು, ನನ್ನ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ವಿವರಿಸಿದ್ದರು. ಅಲ್ಲದೆ ನನ್ನ ಆಟದಲ್ಲಿ ಸುಧಾರಣೆ ಕಂಡುಕೊಳ್ಳಬೇಕೆಂದರೆ ಏನು ಮಾಡಬೇಕೆಂದು ಸಲಹೆ ನೀಡಿದ್ದರು," ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನೆಟ್ಸ್ನಲ್ಲಿ ಶಾರ್ಟ್ ಬಾಲ್ ಹಾಕಿದ್ದರು
"ನನ್ನನ್ನು ನೆಟ್ಸ್ಗೆ ಕರೆದುಕೊಂಡು ಹೋಗಿದ್ದ ಅವರು (ಬೌಷರ್), ಶಾರ್ಟ್ ಬಾಲ್ಗೆ ಆಡುವುದರಲ್ಲಿ ಸುಧಾರಣೆ ಕಂಡುಕೊಳ್ಳಬೇಕೆಂದು ಹೇಳಿದ್ದರು. ಶಾರ್ಟ್ ಬಾಲ್ಗೆ ಆಡಿಲ್ಲವಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಿಮಗೆ ಯಾರೂ ಅವಕಾಶ ನೀಡುವುದಿಲ್ಲ ಎಂದಿದ್ದರು. ಆ ಮೂಲಕ ಅವರು ನನಗೆ ಟೆನಿಸ್ ಬಾಲ್ ಮೂಲಕ ತರಬೇತಿ ಕೊಟ್ಟಿದ್ದರು," ಎಂದು ಆರ್ಸಿಬಿ ಬ್ಯಾಟ್ಸ್ಮನ್ ತಿಳಿಸಿದ್ದಾರೆ.