ಬೆಂಗಳೂರು : ಮುಡಾ ಪ್ರಕರಣದಲ್ಲಿ (MUDA Case) ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ನಡೆಸಬಹುದು ಎಂದು ಹೈಕೋರ್ಟ್ ನೀಡಿರುವ ಆದೇಶವನ್ನು ಇನ್ನೂ ಪೂರ್ತಿಯಾಗಿ ಓದಿಲ್ಲ. ಸಂಪೂರ್ಣವಾಗಿ ಅಧ್ಯಯನ ಬಳಿಕ ನಾನು ಅದರ ಬಗ್ಗೆ ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಅವರು ಪ್ರತಿಪಕ್ಷಗಳ ಪಿತೂರಿಗೆ ಬಗ್ಗುವುದಿಲ್ಲ ಎಂಬ ಮಾತನ್ನು ಪುನರುಚ್ಛರಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ತನಿಖೆ ನಡೆಸಲು ಎಂದು ರಾಜ್ಯಪಾಲರು ಅನುಮತಿ ನೀಡಿರುವುದು ಸಮಪರ್ಕವಾಗಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನಅವರಿದ್ದ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಭಾರತೀಯ ನ್ಯಾಯ ಸಂಹಿತೆಯ 218 ಸೆಕ್ಷನ್ ಪ್ರಕಾರ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಲ್ಲ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ಕೊಟ್ಟಂತೆ ಅಲ್ಲ. ಇದು ಸೆಕ್ಷನ್ 17ಎ ಪ್ರಕಾರ ತನಿಖೆಗೆ ಮಾತ್ರ ಕೊಟ್ಟಿರುವ ನಿರ್ದೇಶನ ಎಂದು ಅವರು ಹೇಳಿದ್ದಾರೆ.
ಸೆಕ್ಷನ್ 17ಎ ಭ್ರಷ್ಟಾಚಾರ ಕಾಯಿದೆ, 19 ಭ್ರಷ್ಟಾಚಾರ ಕಾಯಿದೆ. 121 ಭಾರತೀಯ ನ್ಯಾಯ ಸಂಹಿತೆ ಪ್ರಕಾರ ತನಿಖೆ ನಡೆಸಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕೋರ್ಟ್ 17ರ ಅಡಿಯಲ್ಲಿ ಮಾತ್ರ ತನಿಖೆ ನಡೆಸಬಹುದು ಎಂದು ಅಭಿಪ್ರಾಯಪಟ್ಟಿದೆ. ಅದೇ ರೀತಿ 19 ಪಿಸಿ ಕಾಯಿದೆ ಮತ್ತು 128 ಬಿಎಸ್‌ಎಸ್ ಅನ್ನು ವಜಾ ಮಾಡಿದೆ. ಹೀಗಾಗಿ ಇದು ನನ್ನ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ಅಲ್ಲ. ಆದಾಗ್ಯೂ ನಾನು ಕಾನೂನು ಪರಿಣತರ ಜತೆ ಹಾಗೂ ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳ ಜತೆ, ಪಕ್ಷ ಹಾಗೂ ಹೈಕಮಾಂಡ್ ಜತೆಗೆ ಮಾತನಾಡಿ ಮುಂದಿನ ಕ್ರಮ ಏನು ಎಂಬುದನ್ನು ನಿರ್ಧರಿಸುತ್ತೇನೆ ಎಂದು ಹೇಳಿದರು.
ಪಿತೂರಿಗೆ ಹೆದರುವುದಿಲ್ಲ
ಬಿಜೆಪಿ ಹಾಗೂ ಕಾಂಗ್ರೆಸ್ ಮಾಡುವ ಪಿತೂರಿಗೆ ನಾವು ಬಗ್ಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಹೇಳಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ನವರು ಸಣ್ಣ ಸಂಗತಿಗಳನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅದಕ್ಕೆ ನಾವು ಮಣೆ ಹಾಕುವುದಿಲ್ಲಎಂದು ಅವರು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಎಂದಿಗೂ ಸ್ವಂತ ಬಲದಿಂದ ಅಧಿಕಾರ ಪಡೆದಿಲ್ಲ. ಆಪರೇಷನ್ ಕಮಲ ಹಾಗೂ ಇನ್ನಿತರ ವಾಮಮಾರ್ಗಗಳ ಮೂಲಕ ಅಧಿಕಾರ ನಡೆಸಿದವರು. ಇದೀಗ ಅವರು ಸರ್ಕಾರವನ್ನುಅಸ್ಥಿರ ಮಾಡಲು ಮುಂದಾಗಿದ್ದಾರೆ. ಈ ಪ್ರಯತ್ನವನ್ನು ನಾವು ವಿಫಲಗೊಳಿಸುತ್ತೇವೆ ಎಂದು ಅವರು ಹೇಳಿದರು.
ಸರ್ಕಾರಕ್ಕೆ ಕಪ್ಪು ಚುಕ್ಕೆ ಬಳಿಯುವುದು ಪ್ರತಿಪಕ್ಷಗಳ ಉದ್ದೇಶವಾಗಿದೆ. ಅದಕ್ಕಾಗಿ ರಾಜಭವನದ ಅಧಿಕಾರ ದುರ್ಬಳಕೆ ಮಾಡಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಆರಂಭದಿಂದಲೇ ವಿರೋಧಿಸುತ್ತಲೇ ಬಂದಿದ್ದಾರೆ. ನಾವು ಕೊಡುತ್ತಿರುವ ಭಾಗ್ಯಗಳನ್ನು ವಿಫಲಗೊಳಿಸಲು ಯತ್ನಿಸುತ್ತಲೇ ಇದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ನಾನಾ ಕಡೆ ಬೇರೆಬೇರೆ ಸರ್ಕಾರಗಳನ್ನು ಅಸ್ಥಿರಗೊಳಿಸಲು ಮುಂದಾಗುತ್ತಿದೆ. ಅಂತೆಯೇ ಇಲ್ಲೂ ಮಾಡುತ್ತಿದ್ದಾರೆ. ರಾಜ್ಯದ ಮತದಾರರು ನಮ್ಮ ಜತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಹೀಗಾಗಿ ನಮಗೆ ಯಾವುದೇ ಭಯವಿಲ್ಲಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.