CM Siddaramaiah: ಊಟಕ್ಕೆ ಹೋಗಿ ಮೂವತ್ತೇ ನಿಮಿಷಕ್ಕೆ ಸಭೆಗೆ ಬಂದ ಸಿಎಂ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು!
CM Siddaramaiah: ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಸಭೆಯಲ್ಲಿ ಈ ಪ್ರಸಂಗ ನಡೆದಿದೆ. ಊಟಕ್ಕೆ ಬಿಡುವು ಕೊಡುವಾಗಲೇ ಅರ್ಧ ಗಂಟೆ ಸಾಕು ಎಂದು ಸಿಎಂ ಹೇಳಿದ್ದರು. ತಮ್ಮ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಯಾಗಿ 30 ನಿಮಿಷಕ್ಕೆ ಬಂದಿದ್ದು ಅಧಿಕಾರಿಗಳು, ಸಚಿವರನ್ನು ಕಕ್ಕಾಬಿಕ್ಕಿಯಾಗಿಸಿದೆ.


ಬೆಂಗಳೂರು: ಊಟಕ್ಕೆ ಹೋಗಿ ಕೇವಲ ಮೂವತ್ತೇ ನಿಮಿಷಕ್ಕೆ ಸಭೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ವಾಪಸ್ ಆದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಕ್ಕಾಬಿಕ್ಕಿಯಾದ ಪ್ರಸಂಗ ವಿಧಾನಸೌಧದಲ್ಲಿ ಶುಕ್ರವಾರ ನಡೆದಿದೆ. ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಸಭೆ ವೇಳೆ ಮಧ್ಯಾಹ್ನ ಊಟದ ಬಿಡುವು 30 ನಿಮಿಷ ನೀಡಲಾಗಿತ್ತು. ಅಧಿಕಾರಿಗಳು ಮತ್ತು ಸಚಿವರಿಗೆ ಬ್ಯಾಂಕ್ವೆಟ್ ಹಾಲ್ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ಊಟಕ್ಕೆಂದು ಮನೆಗೆ ತೆರಳಿದ್ದರು. ಸಿಎಂ ಮನೆಗೆ ಹೋಗಿದ್ದರಿಂದ ಅವರು ಊಟ ಮುಗಿಸಿ ಬರುವುದು ಲೇಟಾಗಬಹುದು ಎಂದು ಅಧಿಕಾರಿಗಳು ರಿಲ್ಯಾಕ್ಸ್ ಮೂಡ್ನಲ್ಲಿ ಊಟ ಮಾಡುತ್ತಿದ್ದರು. ಆದರೆ, ಮುಖ್ಯಮಂತ್ರಿಗಳು ಊಟ ಮುಗಿಸಿ ಸರಿಯಾಗಿ 30 ನಿಮಿಷಕ್ಕೆ ಸಮ್ಮೇಳನ ಸಭಾಂಗಣಕ್ಕೆ ಖಡಕ್ ಎಂಟ್ರಿ ಕೊಟ್ಟದ್ದಾರೆ.
ಸಿಎಂ ಹೇಳಿದ್ದ ಸಮಯಕ್ಕೆ ಬಂದಾಗ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು, "ಸರ್ ಅಧಿಕಾರಿಗಳು ಇನ್ನೂ ಊಟಕ್ಕೆ ಹೋಗಿದ್ದಾರೆ ಸರ್, ಬರ್ತಾರೆ ಎಂದು ಸಮಾಧಾನಗೊಳಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳು ಸರಿಯಾದ ಸಮಯಕ್ಕೆ ಬಂದ ಸುದ್ದಿ ಕೇಳಿ ಬ್ಯಾಂಕ್ವೆಂಟ್ ಹಾಲ್ನಲ್ಲಿದ್ದ ಅಧಿಕಾರಿಗಳು, ಸಚಿವರು ತಡಬಡಾಯಿಸಿ ದೌಡಾಯಿಸಿದರು.
ಈ ಸುದ್ದಿಯನ್ನು ಓದಿ | Karnataka Rains: ಗುಡ್ಡ ಕುಸಿತ; ತಕ್ಷಣ ದಕ್ಷಿಣ ಕನ್ನಡಕ್ಕೆ ತೆರಳಲು ಸಚಿವ ದಿನೇಶ್ ಗುಂಡೂರಾವ್ಗೆ ಸಿಎಂ ಸೂಚನೆ
ಊಟಕ್ಕೆ ಬಿಡುವು ಕೊಡುವಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು 45 ನಿಮಿಷ ಬಿಡುವು ಕೊಡೋಣ ಎಂದಿದ್ದರು. ಮುಖ್ಯಮಂತ್ರಿಗಳು ಅರ್ಧ ಗಂಟೆ ಸಾಕು ಎಂದು ಹೇಳಿದ್ದರು. ತಮ್ಮ ಸೂಚನೆಯಂತೆ ಮುಖ್ಯಮಂತ್ರಿಗಳು ಸರಿಯಾಗಿ 30 ನಿಮಿಷಕ್ಕೆ ಬಂದಿದ್ದು ಅಧಿಕಾರಿಗಳು, ಸಚಿವರನ್ನು ಕಕ್ಕಾಬಿಕ್ಕಿಯಾಗಿಸಿತು.
ಅನುದಾನದ ಕೊರತೆಯಿಲ್ಲ, ಮಳೆ ಹಾನಿಗೆ ತಕ್ಷಣ ಪರಿಹಾರ ನೀಡಿ: ಡಿಸಿಗಳಿಗೆ ಸಿಎಂ ಸೂಚನೆ
ಬೆಂಗಳೂರು: ಮಳೆ ಹಾನಿಗೆ ಪರಿಹಾರ (Karnataka Rains) ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ಅತಿವೃಷ್ಟಿಯಿಂದ ಮನೆಗಳಿಗೆ ಹಾನಿ ಉಂಟಾದರೆ ಈಗಾಗಲೇ ಪರಿಹಾರ ಒದಗಿಸುವ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ತಕ್ಷಣ ಪರಿಹಾರ ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಶುಕ್ರವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.
ಕಳೆದ 125 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲೆಗಳಲ್ಲಿ ಎಸ್ಡಿಆರ್ಎಫ್ ಅಡಿ ಒಟ್ಟಾರೆಯಾಗಿ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಲಭ್ಯವಿದೆ. ಭೂಕುಸಿತದಂತಹ ಪ್ರಕರಣಗಳಲ್ಲಿ ಸಾವಿನ ಸಂಭಾವ್ಯತೆಯನ್ನು ತಪ್ಪಿಸಲು, ಜನರ ತೆರವು ಕಾರ್ಯ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಮಳೆ ಹಾನಿ ಪ್ರದೇಶಗಳಿಗೆ ಡಿಸಿ, ಸಿಇಒ ತಕ್ಷಣ ಕಡ್ಡಾಯವಾಗಿ ಭೇಟಿ ನೀಡಿ ಅಗತ್ಯ ಪರಿಹಾರ ಒದಗಿಸಬೇಕು. ಸಂಪೂರ್ಣ ಮನೆ ಹಾನಿ ಪ್ರಕರಣಗಳಲ್ಲಿ 1.20 ಲಕ್ಷ ರೂ. ಮನೆ ಹಾನಿ ತಕ್ಷಣ ಪರಿಹಾರ ಒದಗಿಸಲಾಗುತ್ತಿದೆ. ಅಂತಹವರಿಗೆ ಹೊಸ ಮನೆ ಒದಗಿಸಲು ಕಳೆದ ವರ್ಷದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿವಿಧ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ನೆರವು ಒದಗಿಸಬೇಕು ಎಂದು ಸೂಚಿಸಿದರು.
ಬೆಂಗಳೂರಲ್ಲಿ ಮಳೆ ಹಾನಿ; ಶಾಶ್ವತ ಪರಿಹಾರಕ್ಕೆ ಕ್ರಮ
ಅತಿವೃಷ್ಟಿ ಅನಾಹುತ ಎದುರಿಸಲು ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಅವರು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಬೆಂಗಳೂರು ನಗರದಲ್ಲಿ ಮಳೆ ಬಗ್ಗೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಯಾಕೆ ಸಾಧ್ಯವಿಲ್ಲ. ತಗ್ಗು ಪ್ರದೇಶ, ನೀರು ನಿಲ್ಲುವ ಪ್ರದೇಶದ ಮಾಹಿತಿ ಮೊದಲೇ ಇರುತ್ತದೆ. ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಬೇಕು. ತಾತ್ಕಾಲಿಕ ಕ್ರಮಗಳೊಂದಿಗೆ ಶಾಶ್ವತ ಪರಿಹಾರಕ್ಕೂ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | HS Venkateshmurthy Passed Away: ಕವಿ ಎಚ್ಎಸ್ವಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಂತಾಪ
ಗ್ರಾಮ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಜಮೀನು ಗುರುತಿಸಿ, ಒತ್ತುವರಿಯನ್ನು ಗುರುತಿಸುವ ಕಾರ್ಯ ಶೇ.95ರಷ್ಟು ಪೂರ್ಣಗೊಂಡಿದೆ. 14,15,492 ಎಕರೆ ಸರ್ಕಾರಿ ಜಮೀನು ಒತ್ತುವರಿಯನ್ನು ಈಗಾಗಲೇ ಗುರುತಿಸಲಾಗಿದೆ. ಬಗರ್ಹುಕುಂ ಒಟ್ಟು 14,28,838 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ವಿಲೇವಾರಿ ಬಹಳ ವಿಳಂಬವಾಗುತ್ತಿದ್ದು, ಅರ್ಹ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.