Saturday, 21st September 2024

Roopa Gururaj Column: ಪ್ರತಿ ದಿನವನ್ನೂ ನಿಮ್ಮದಾಗಿಸಿಕೊಳ್ಳಿ…

ಒಂದೊಳ್ಳೆ ಮಾತು

ರೂಪಾ ಗುರುರಾಜ್

ವ್ಯಕ್ತಿಯೊಬ್ಬ ದಾರಿಯಲ್ಲಿ ನಡೆದು‌ಹೋಗುತ್ತಿದ್ದಾಗ ವಯಸ್ಸಾದ ಬಿಕ್ಷುಕನೊಬ್ಬ ಭಿಕ್ಷೆಗಾಗಿ ಅವನ ಎದುರು ಕೈ ಚಾಚಿದ. ಆ ಭಿಕ್ಷುಕನಿಗೆ ಕಣ್ಣು ಅಷ್ಟಾಗಿ ಕಾಣುತ್ತಿರಲಿಲ್ಲ ಸಾಕಷ್ಟು ವಯಸ್ಸು ಬೇರೆ ಆಗಿತ್ತು. ಈ ವ್ಯಕ್ತಿ ತನ್ನ ಕಿಸೆಯೊಳಗೆ ಕೈ ಹಾಕಿ ಕಾಸಿಗಾಗಿ ತಡಕಾಡಿದ. ಪರ್ಸನ್ನು ಮನೆಯಲ್ಲಿಯೇ ಮರೆತು ಬಿಟ್ಟು ಬಂದಿರುವುದು ಅವನಿಗೆ ನೆನಪಾಯ್ತು. ತಕ್ಷಣ ಆ ಭಿಕ್ಷುಕನ ಕೈಹಿಡಿದು, ‘ನಿನಗೆ ಕೊಡಲು ನನ್ನ ಜೇಬಿನಲ್ಲಿ ಏನೂ ಇಲ್ಲ. ಪರ್ಸನ್ನು ಮನೆಯ
ಮರೆತು ಬಿಟ್ಟು ಬಂದಿದ್ದೇನೆ. ಇನ್ನೊಮ್ಮೆ ಯಾವಾಗಲಾದರೂ ನೀನು ಸಿಕ್ಕಾಗ ಕೊಡುವೆ. ದಯವಿಟ್ಟು ಕ್ಷಮಿಸು’ ಎಂದು ಹೇಳಿದ.

ಗ ಭಿಕ್ಷುಕ, ‘ಹೋಗಲಿ ಬಿಡಿ ಅಪ್ಪಾರೆ, ಈಗ ಪರ್ಸಿನ ಮಾತೇಕೆ? ನೀವು ನನಗೆ ಬೇರೆ ಯಾರೂ ಕೂಡದೇ ಇದ್ದಿದ್ದನ್ನು ಕೊಟ್ಟಿದ್ದೀರಿ, ನನಗೆ ಅದೇ ತೃಪ್ತಿಯಾಯಿತು, ನೀವು ನನ್ನ ಕೈಯನ್ನು ನಿಮ್ಮ ಕೈಯಲ್ಲಿ ಹಿಡಿದಿರಿ, ನಮ್ಮಂತವರ ಕೈಯನ್ನು ಯಾರು ಮುಟ್ಟುತ್ತಾರೆ? ಈ ದಾರಿಯಲ್ಲಿ ಇನ್ನೊಮ್ಮೆ ನೀವು ಯಾವಾಗಲಾದರೂ ಸಿಕ್ಕಾಗ, ಕ್ಷಣ ಮಾತ್ರವಾದರೂ ನನ್ನ ಕೈಯನ್ನು ಇದೇ ರೀತಿಯಲ್ಲಿ ಹಿಡಿದುಕೊಳ್ಳಿ. ಅದೇ ನನಗೆ ದೊಡ್ಡ ಭಿಕ್ಷೆ’ ಎಂದ.

ಯಾರಿಗಾದರೂ, ಏನನ್ನಾದರೂ ಕೊಡುವುದಕ್ಕಿಂತ, ಪ್ರೇಮ ಪೂರ್ಣತೆಯಿಂದ ಎರಡು ಮಾತನಾಡಿಸಿದರೆ,
ಅದರಿಂದ ಸಿಗುವ ಸಂತೋಷ ಅಪಾರವಾದದ್ದು. ದಾರಿಯಲ್ಲಿ ಯಾರಾದರೂ ನಮ್ಮ ಗುರುತಿನವರೇ ಸಿಕ್ಕಾಗ ಕೂಡಾ ಒಂದು ಮುಗುಳ್ನಗೆ ಹರಿಸಲು ಎಷ್ಟೋ ಜನ ಹಿಂಜರಿಯುತ್ತಾರೆ. ಮೊದಲು ಅವರೇ ನಗಲಿ, ಎಂದು ಕಾಯುತ್ತಾರೆ, ಒಂದು ಕಿರುನಗೆಯನ್ನು ಹರಿಸಲು ಕೂಡಾ, ಕೆಲವರ ಮನಸ್ಸು ಅಹಂಕಾರವನ್ನು ತೋರಿಸುತ್ತದೆ. ಅಷ್ಟೇ ಯಾಕೆ? ಅಕ್ಕ ಪಕ್ಕದ ಮನೆಯ ಕೆಲವರು ಕೂಡಾ, ಮುಖ ನೋಡಿದರೆ ಎಲ್ಲಿ ಮಾತನಾಡಿಸಬೇಕಾಗಬಹುದು ಎಂದುಕೊಂಡು
ನೋಡಿಯೂ ನೋಡದವರಂತೆ ನಡೆದುಬಿಡುವ ಸುಸಂಸ್ಕೃತರು ಇzರೆ.

ನಾವು ವಾಕಿಂಗ್ ಹೊರಟಾಗ ಮಾರುಕಟ್ಟೆಯಲ್ಲಿ ಸಿಕ್ಕಿದಂತಹ ಪರಿಚಿತರನ್ನು ನೋಡಿ ಮುಗುಳ್ನಗುವುದು ನಾಲ್ಕು ಮಾತನಾಡುವುದು ಸುಸಂಸ್ಕಾರ ಅಲ್ಲವೇ? ಯಾಕೆ ಇಂತಹ ಚಿಕ್ಕಪುಟ್ಟ ವಿಷಯಗಳನ್ನೇ ನಾವೆಲ್ಲ ಮರೆಯು ತ್ತಿದ್ದೇವೆ? ಮಕ್ಕಳನ್ನು ಕಂಡಾಗ ಪ್ರೀತಿಯಿಂದ ಮಾತನಾಡಿಸುವುದು, ಹಿರಿಯರನ್ನು ಕಾಲ್ಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ತೆಗೆದುಕೊಳ್ಳುವುದು, ಮನೆಗೆ ಬಂದ ಅತಿಥಿಗಳನ್ನ ಮೊದಲಿಗೆ ಮಾತನಾಡಿಸಿ ಕಾಫಿ ತಿಂಡಿ ವಿಚಾರಿಸು ವುದು. ಇವೆಲ್ಲ ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗಗಳು.

ಆದರೆ ಇಂದಿನ ದಿನಗಳಲ್ಲಿ ಮನೆಯವರನ್ನ ಮಾತನಾಡಿಸುವುದನ್ನೇ ನಾವು ಮರೆತುಬಿಟ್ಟಿದ್ದೇವೆ. ಇನ್ನು ರಸ್ತೆಯಲ್ಲಿ ಹೋಗಿ ಬರುವವರನ್ನು ಮಾತನಾಡಿಸಲು ಸಾಧ್ಯವೇ? ಮದುವೆ ಸಮಾರಂಭಗಳಿಗೆ ನೋ ಹೋಗುತ್ತೇವೆ ಆದರೆ ಅಲ್ಲಿ ನಮ್ಮದೇ ಭಾವಚಿತ್ರಗಳನ್ನು ತೆಗೆಸಿಕೊಳ್ಳುತ್ತ ಯಾರ ಮದುವೆಗೆ ಹೋಗಿದ್ದೇವೆ ಎನ್ನುವುದೂ ನಮಗೆ ತಿಳಿದಿರುವು ದಿಲ್ಲ. ಅಲ್ಲಿಯೂ ಕೂಡ ನಮ್ಮ ಗುಂಪಿನ ನಾವು ಕಳೆದುಹೋಗುತ್ತೇವೆ. ಹೊಸ ಬಂಧುಗಳೆಲ್ಲ ಪರಿಚಯ ಮಾಡಿ ಕೊಳ್ಳುವುದು ಅವರನ್ನ ಮಾತನಾಡಿಸುವುದು ವಿಷಯ ಹಂಚಿಕೊಳ್ಳುವುದು ಇವೆಲ್ಲ ದೂರದ ಮಾತುಗಳು.

ವಿದ್ಯೆ ಹೆಚ್ಚಾಗುತ್ತಿದ್ದಂತೆ ನಾಗರಿಕತೆ ಹೆಚ್ಚಾಗುತ್ತಿದ್ದಂತೆ ನಾವೆಲ್ಲರೂ ಬಾವಿ ಕಪ್ಪೆಯಾಗುತ್ತಿದ್ದೇವೆ. ನಾವೇ ಶ್ರೇಷ್ಠರು ನಮಗೆ ಎಲ್ಲಾ ಗೊತ್ತಿದೆ ಎನ್ನುವ ಅಹಂ ಭಾವ ಮನಸ್ಸಿನಲ್ಲಿ ಮೊಳಕೆ ಒಡೆಯುತ್ತಿದೆ. ಹೀಗಿರುವಾಗ ನಾವು ಮಾನಸಿಕ ವಾಗಿ ಬೆಳೆಯುವುದಾದರೂ ಹೇಗೆ? ಸ್ನೇಹಪೂರ್ವಕವಾಗಿ ಇರಲು ನಮಗೆ ಸಿಕ್ಕ ಸಣ್ಣ ಸಣ್ಣ ಅವಕಾಶ ವನ್ನು ನಾವು ಎಂದೂ ಕಳೆದುಕೊಳ್ಳಬಾರದು. ಅದಕ್ಕೆ ನಾವೇನೂ ಹಣ ವ್ಯಯ ಮಾಡಬೇಕಿಲ್ಲ, ಒಂದು ಸಣ್ಣ ಮುಗುಳ್ನಗೆ ಸಾಕು. ಚೆನ್ನಾಗಿದ್ದೀರಾ, ಎಂದು ಕೇಳಿದರೆ ಸಾಕು. ಹಾಗಿಲ್ಲದೇ ಹೋದರೆ, ನಾವು ಜೀವನದಲ್ಲಿ ಎಲ್ಲ ಸಣ್ಣ ಸಣ್ಣ ಸಂತೋಷ ವನ್ನೂ ಕಳೆದುಕೊಳ್ಳುವ ಅಭ್ಯಾಸ ಮಾಡಿಕೊಂಡು ಬಿಡುತ್ತೇವೆ.

ನಾವು ಪ್ರತೀಕ್ಷಣವನ್ನೂ ಸ್ನೇಹಪೂರ್ವಕವಾಗಿ ಬದುಕನ್ನು ಪ್ರೀತಿಸುತ್ತಾ ನಮ್ಮ ಸುತ್ತಲಿರುವ ಪ್ರಾಣಿ ಪಕ್ಷಿ ಜನರನ್ನು ಗೌರವಿಸುತ್ತಾ ಕಳೆದಾಗ ನಮ್ಮಲ್ಲಿ ಸಹಜವಾಗಿ ಒಂದು ನವ ಚೈತನ್ಯ ಆನಂದ ಹೊರಸುಸುತ್ತದೆ. ಇನ್ನಾದರೂ ನಾವು ನಮ್ಮ ಮನೆ ನಮ್ಮ ಸಂತೋಷ ಇದಿಷ್ಟನ್ನೇ ಬಿಟ್ಟು ಹೊರಗಿನ ಪ್ರಪಂಚದತ್ತ ದೃಷ್ಟಿ ನೆಟ್ಟು ಎಲ್ಲರನ್ನೂ, ಎಲ್ಲವನ್ನೂ ನಮ್ಮ ಬದುಕಿನೊಳಗೆ ಮಿಳಿತ ಗೋಡಿಸಿಕೊಳ್ಳುವ ಪ್ರಯತ್ನ ಮಾಡೋಣ. ಬದುಕು ಬಹಳ ದೊಡ್ಡದು ಅದನ್ನ ಚಂದವಾಗಿಸಿಕೊಳ್ಳೋಣ.

ಇದನ್ನೂ ಓದಿ: Roopa Gururaj Column: ವಿಶ್ವಕರ್ಮ ಮತ್ತು ಪುರಿ ಜಗನ್ನಾಥ ರಥಗಳ ವೈಶಿಷ್ಟ್ಯ