ಬ್ರಿಟಿಷರ ವಿರುದ್ದ ಘರ್ಜಿಸಿದ ಅಮರ ಸೇನಾನಿ ಚಿರಂಜೀವಿ ಸುಭಾಷ್ !

ಬ್ರಿಟಿಷರ ವಿರುದ್ದ ಘರ್ಜಿಸಿದ ಅಮರ ಸೇನಾನಿ ಚಿರಂಜೀವಿ ಸುಭಾಷ್ !

Profile Vishwavani News January 23, 2022
image-5e9eee3e-64ee-465d-a1ea-036c329ce9b8.jpg
ನಂ.ಶ್ರೀಕಂಠ ಕುಮಾರ‍್ ಸುಭಾಷ್ ಚಂದ್ರ ಬೋಸ್! ಅವರ ಹೆಸರನ್ನು ಕೇಳಿದರೆ, ದೇಶಾಭಿಮಾನ ಉಕ್ಕುತ್ತದೆ, ಸೈನಿಕರ ಕುರಿತು ಗೌರವ ಮೂಡುತ್ತದೆ. ನಮ್ಮ ದೇಶವನ್ನು ದಬ್ಬಾಳಿಕೆಯ ಆಡಳಿತದ ಮೂಲಕ ಶೋಷಿಸಿದ ಬ್ರಿಟಿಷರನ್ನು ಎದುರಿಸಲು ಸೈನ್ಯ ಕಟ್ಟುವುದೇ ಸರಿಯಾದ ಮಾರ್ಗ ಎಂದು ತಿಳಿದ ಸುಭಾಷರು, ಆ ಪ್ರಯತ್ನದಲ್ಲಿ ಬಹುಮಟ್ಟಿಗೆ ಯಶಸ್ವಿಯೂ ಆದರು. ಬ್ರಿಟಿಷರ ವಿರೋಽಗಳಾಗಿದ್ದ ಜರ್ಮನಿ ಮತ್ತು ಜಪಾನ್‌ನ ಸಹಕಾರ ಬಯಸಿ, ತಮ್ಮ ಕುಟುಂಬ ತೊರೆದು ಎಲ್ಲೆಲ್ಲೋ ಅಲೆದರು. ೨೧.೧೦.೧೯೪೩ರಂದು ಸಿಂಗಪುರದಲ್ಲಿ ಹಂಗಾಮಿ ಸ್ವತಂತ್ರ ಭಾರತ ಸರಕಾರವನ್ನೂ ಸ್ಥಾಪಿಸಿದರು. ಜಪಾನ್ ಸಹಾಯದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡರು. ಆದರೆ ಜಪಾನಿನ ಮೇಲೆ ಅಮೆರಿಕವು ಅಣುಬಾಂಬ್ ದಾಳಿ ನಡೆಸಿ, ಲಕ್ಷಾಂತರ ನಾಗರಿಕರನ್ನು ಸಾಯಿಸಿ ದಾಗ, ಜಪಾನ್ ಶರಣಾಯಿತು. ಸುಭಾಷರು ಅತಂತ್ರರಾದರು. ತಮ್ಮ ಜೀವನವನ್ನೇ ದೇಶಕ್ಕಾಗಿ ತ್ಯಾಗ ಮಾಡಿದರು. ಇಂದು ಅವರ ಜನ್ಮದಿನ. ಕೊನೆಯ ಉಸಿರಿರುವ ತನಕವೂ ದೇಶಕ್ಕಾಗಿ ಹೋರಾಡಿದ ಸೇನಾನಿ ಯಾರು ಎಂಬ ಪ್ರಶ್ನೆಗೆ ಸರಳ ಉತ್ತರ ನೇತಾಜಿ ಸುಭಾಷ್ ಚಂದ್ರ ಬೋಸ್! ಅನೇಕ ಶತಮಾನಗಳ ಭಾರತದ ಸ್ವಾತಂತ್ರ್ಯದ ಹೋರಾಟವು ಸಂಘರ್ಷದ ಹಾದಿಯಲ್ಲಿ ತ್ಯಾಗ- ಬಲಿದಾನ ಶೌರ್ಯದ ಪರಾಕಾಷ್ಠೆ ತಲುಪಿ ಬ್ರಿಟಿಷರು ಸ್ವಾತಂತ್ರ್ಯವನ್ನು ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ೧೯೪೭ರಲ್ಲಿ ಬ್ರಿಟಿಷರ ಹಿಡಿತದಿಂದ ಮುಕ್ತಿಗೊಂಡಿತು. ಅದಕ್ಕಾಗಿ ವಿವಿಧ ರೀತಿಯ ಹೋರಾಟದಲ್ಲಿ ತೊಡಗಿಸಿಕೊಂಡ ಭಾರತೀಯರೆಷ್ಟೋ. ನಾವಿಂದು ೭೫ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಆಚರಣೆ ಯಲ್ಲಿ ಅವರೆಲ್ಲರನ್ನೂ ಸ್ಮರಿಸಬೇಕಾಗಿದೆ. ಈ ನಿಟ್ಟಿನಲ್ಲಿ, ನಾವು ಸುಮ್ಮನೆ ಕುಳಿತಿದ್ದರೆ ಅಥವಾ ಶಾಂತಿಯುತ ಮೆರವಣಿಗೆ ಮಾಡಿ, ಮನವಿ ಮಾಡಿದರೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದಿಲ್ಲ, ಅವರನ್ನು ಬಲ ಪ್ರಯೋಗ ಮಾಡಿ ಆಚೆ ದೂಡಬೇಕು ಎಂದು ನಂಬಿದ್ದ, ಅಂತಯೇ ಕಾರ್ಯಪ್ರವತ್ತರಾದ ನೇತಾಜಿ ಸುಭಾಷ್ ಚಂದ್ರಬೋಸ್‌ರವರ ಕೊಡುಗೆ ಅನನ್ಯ. ಈ ವರ್ಷ ಅವರ ೧೨೫ ಜನ್ಮ ವರ್ಷಾಚರಣೆಯೂ ಆಗಿರುವುದು ಸಂತಸದ ವಿಷಯ. ಸುಭಾಷ್‌ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು ಒರಿಸ್ಸಾದ ಕಟಕ್‌ನಲ್ಲಿ. ತಂದೆ ಜಾನಕೀನಾಥ್ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ ಒಂಬತ್ತು ಮಕ್ಕಳಲ್ಲಿ ಸುಭಾಷ್ ಆರನೆಯವರು. ವಕೀಲರಾಗಿದ್ದ ಜಾನಕೀನಾಥ್ ಬೋಸ್ ಕಟಕ್ ನಗರ ಸಭೆಯ ಅಧ್ಯಕ್ಷರಾಗಿದ್ದರು. ಕೆಲಕಾಲ ಸರಕಾರಿ ವಕೀಲರೂ ಆಗಿದ್ದರು. ೧೯೧೨ರಲ್ಲಿ ಬಂಗಾಳದ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಸುಭಾಷರ ಬಾಲ್ಯ ಕಟಕ್ ನಲ್ಲಿ ಆರಂಭವಾಗಿ ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಇಂಗ್ಲೀಷ್ ಮಿಷಿನರಿ ಶಾಲೆಗೆ ಸೇರಿದರು. ಅಲ್ಲಿಯೇ ಇದ್ದ ರ‍್ಯಾವನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ವಿದ್ಯಾಭ್ಯಾಸದ ಜೊತೆಯಲ್ಲೇ ಸುಭಾಷರ ಮನಸನ್ನು ಆವರಿಸಿ ಪ್ರಭಾವ ಬೀರಿದವರು ರಾಮಕೃಷ್ಣ ಪರಮ ಹಂಸರು ಮತ್ತು ಸ್ವಾಮಿ ವಿವೇಕಾನಂದರು. ಸುಭಾಷರ ಜೀವನದಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖ ಸ್ಪೂರ್ತಿ ಆಗಿದ್ದರು. ೧೯೧೩ರಲ್ಲಿ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ವಿಶ್ವವಿದ್ಯಾಯಲಕ್ಕೆ ಎರಡನೆಯವರಾಗಿ ತೇರ್ಗಡೆ ಹೊಂದಿದರು. ನಂತರ ಇಂಟರ್‌ಮೀಡಿಯಟ್ ಓದಲು ಕಲ್ಕತ್ತಗೆ ಹೋಗಿ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು. ಓದಿನ ಜೊತೆಗೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ತತ್ವಶಾಸವನ್ನು ಪ್ರಮುಖ ವಿಷಯವನ್ನಾಗಿ ವ್ಯಾಸಂಗ ಮಾಡಲು ಬಿ.ಎ. ಡಿಗ್ರಿಗೆ ಸೇರಿದರು. ಆದರೆ ಅನಿರೀಕ್ಷಿತ ಘಟನೆಯಿಂದಾಗಿ ಕಾಲೇಜಿನಿಂದ ಉಚ್ಛಾಟಿತ ರಾಗಿ ಓದಿಗೆ ವಿಘ್ನ ಒದಗಿತು. ನಂತರ ಅಣ್ಣ ಶರತ್‌ಚಂದ್ರಬೋಸರ ವಿಶೇಷ ಆಸಕ್ತಿಯಿಂದಾಗಿ ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿದರು. ಅದೇ ಸಮಯದಲ್ಲಿ ವಿಶ್ವವಿದ್ಯಾಲಯದ ಅಂಗವಾಗಿದ್ದ ಭಾರತೀಯ ಸೇನೆಯ ಟೆರಿಟೋರಿಯಮ್ ಆರ್ಮಿ ಘಟಕದಲ್ಲೂ ಸುಭಾಷರು ದಾಖಲಾಗಿ ತರಬೇತಿ ಪಡೆದರು. ೧೯೧೯ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಗಳಿಸಿ ಉತ್ತೀರ್ಣರಾದರು. ತಂದೆ ಜಾನಕೀನಾಥ ಬೋಸರ ಇಚ್ಛೆಯಂತೆ ಐಸಿಎಸ್ ಓದಲು ಇಂಗ್ಲೆಂಡಿಗೆ ತೆರಳಿದರು. ಐಸಿಎಸ್ ಪದವಿ ತಿರಸ್ಕಾರ ಕೇಂಬ್ರಿಡ್ಜ್ ನಲ್ಲಿ ಓದಿ, ೧೯೨೦ರಲ್ಲಿ ಐಸಿಎಸ್‌ನಲ್ಲಿ ನಾಲ್ಕನೇ ಸ್ಥಾನಗಳಿಸಿ ತೇರ್ಗಡೆ ಹೊಂದಿದರು. ಆದರೆ ಸಿವಿಲ್ ಸರ್ವಿಸಿನ ಚೌಕಟ್ಟು ರಾಷ್ಟೀಯತೆ ಮತ್ತು ಆಧ್ಯಾತ್ಮಿಕ ಅಶೋತ್ತರಗಳಿಗೆ ಸರಿ ಹೊಂದಲಾರದು ಎಂದು ಐಸಿಎಸ್ ಪದವಿಯನ್ನು ತಿರಸ್ಕರಿಸಿದರು. ಇದರಿಂದಾಗಿ ಭಾರತದ ಜನಮಾನಸದಲ್ಲಿ ಸುಭಾಷರ ಹೆಸರು ಜನಜನಿತಗೊಂಡಿತ್ತು. ಪ್ರತಿಷ್ಠಿತ ಪದವಿಯನ್ನು ತಿರಸ್ಕರಿಸಿದ ಭಾರತೀಯ ಎಂಬ ಪ್ರಶಂಸೆಗೆ ಭಾಜನರಾದರು. ನಂತರ ೧೯೨೧ ಜುಲೈ ೧೬ರಂದು ಸುಭಾಷರು ಇಂಗ್ಲೆಂಡಿನಿಂದ ಮುಂಬಯಿಗೆ ವಾಪಸ್ ಬಂದರು. ಅಂದೇ ಲ್ಯಾಬರ್‌ನಂ ರಸ್ತೆಯಲ್ಲಿದ್ದ ಮಣಿಭವನಕ್ಕೆ ಹೋಗಿ ಗಾಂಧೀಜಿಯವರನ್ನು ಭೇಟಿಯಾಗಿ ಹಲವಾರು ವಿಷಯಗಳ ಬಗ್ಗೆ ಸೌಹಾರ್ದದಿಂದ ಮಾತುಕತೆ ನಡೆಸಿದರು. ಮಾತುಕತೆಯಲ್ಲಿ ಸುಭಾಷರಿಗೆ ಉತ್ಸುಕತೆ ಮೂಡಲಿಲ್ಲ. ಸುಭಾಷರು ಕಲ್ಕತ್ತ ನಗರಕ್ಕೆ ತೆರಳಿ ದೇಶಬಂಧು ಚಿತ್ತರಂಜನ ದಾಸ್‌ರವರನ್ನು ಭೇಟಿಮಾಡಿ ಅವರು ಮಾರ್ಗದರ್ಶನದಲ್ಲಿ ಹೊಣೆಗಾರಿಕೆಯನ್ನು ದಕ್ಷತೆಯಿಂದ ನಿರ್ವಹಿಸಿ ದೇಶಭಕ್ತ ಯುವಕ ರನ್ನು ಆಕರ್ಷಿಸಿದರು. ಕಲ್ಕತ್ತದಲ್ಲಿ ಗೆಲುವು ೧೯೨೪ರಲ್ಲಿ ಸುಭಾಷರು ಕಲ್ಕತ್ತನಗರ ಸಭೆಗೆ ಚಿತ್ತರಂಜನ್ ದಾಸರು  ಸ್ಥಾಪಿಸಿದ ಸ್ವರಾಜ ಪಕ್ಷದಿಂದ ಸ್ಪರ್ಧಿಸಿ, ಹಾಗೂ ಹಲವಾರು ವಿಭಿನ್ನ ರಾಜಕೀಯ ಬಣಗಳು ಸಹಕಾರದೊಂದಿಗೆ ಜಯಗಳಿಸಿದರು. ಚಿತ್ತರಂಜನ್‌ದಾಸ್‌ರವರು ಮೇಯರ್ ಆಗಿಯೂ ಸುಭಾಷರೂ ಪ್ರಮುಖಾಧಿಕಾರಿಯಾಗಿಯೂ ನಿಯುಕ್ತ ಗೊಂಡರು. ಅದೇ ಸಮಯದಲ್ಲಿ ಸುಭಾಷರಿಗೆ ಕ್ರಾಂತಿಕಾರಿ ನಾಯಕರ ಬಗ್ಗೆ ಸಹಾನುಭೂತಿ ಉಂಟಾಯಿತು. ಹಾಗಾಗಿ ಬ್ರಿಟಿಷ್ ಸರಕಾರ ಯಾವುದೇ ಕಾರಣ ನೀಡದೆ ೧೯೨೫ರಲ್ಲಿ ಜನವರಿ ತಿಂಗಳಲ್ಲಿ ಬಂಧಿಸಿ ಆಲಿಪುರ ಕಾರಾಗೃಹದಲ್ಲಿರಿಸಿ ನಂತರ ದೂರದ ಬರ್ಮಾ ಮಾಂಡಲೇ ಸೆರೆಮನೆಗೆ ರವಾನಿಸಿದರು. ಬ್ರಿಟಿಷ್ ಜೈಲುಗಳಲ್ಲಿ ತರಬೇಕಾದ ಸುಧಾರಣೆಗಳನ್ನು ಕುರಿತು ಅಧ್ಯಯನ ಮಾಡಲು ಸುಭಾಷರು ಈ ಅವಕಾಶವನ್ನು ಬಳಸಿಕೊಂಡರು ಹಾಗೂ ರಾಜಕೀಯ ಸನ್ನಿವೇಶವನ್ನು ಭಾರತ- ಬರ್ಮಾ ಸಾಂಸ್ಕೃತಿಕ ನಂಟನ್ನು ಅಧ್ಯಯನ ಮಾಡಿದರು. ಬ್ರಿಟಿಷ್ ಸರಕಾರ ಸುಭಾಷರನ್ನು ೧೯೨೭ ಮೇ ತಿಂಗಳಲ್ಲಿ ವಾಪಸ್ ಕಲ್ಕತ್ತೆಗೆ ಕರೆತಂದು, ಎರಡೂವರೆ ವರ್ಷ ಸೆರೆಮನೆ ವಾಸದ ನಂತರ ಬಂಧನದಿಂದ ಮುಕ್ತಿಗೊಳಿಸಲಾಯಿತು. ಹಲವು ಬಾರಿ ಸೆರೆಮನೆಗೆ  ೧೯೨೮ರ ಆಗಸ್ಟ್ ತಿಂಗಳಲ್ಲಿ ಕಲ್ಕತ್ತದಲ್ಲಿ ಪಂಡಿತ ಜವಹರ್‌ಲಾಲ್ ರವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನ ನಡೆಯಿತು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸುಭಾಷ್ ಚಂದ್ರಬೋಸರು ಮಾಡಿದ ಭಾಷಣ ಎಲ್ಲರ ಗಮನ ಸೆಳೆಯಿತು. ಬೋಸರು ಸಂದರ್ಭ ಬಂದಾಗಲೆಲ್ಲಾ ಬ್ರಿಟಿಷ್ ಸರಕಾರಕ್ಕೆ ಸವಾಲುಗಳನ್ನು ಒಡ್ಡುತ್ತಿದ್ದರು. ಹಾಗಾಗಿ ಹಲವಾರು ಬಾರಿ ಬಂಧನಕ್ಕೆ ಒಳಗಾಗಿ ಸೆರೆಮನೆವಾಸ ಅನುಭವಿಸಬೇಕಾಯಿತು. ೧೯೩೨ರಲ್ಲಿ ಬೋಸರನ್ನು ಮತ್ತೆ ಬಂಧಿಸಿ ಶಿವಾನಿ ಸೆರೆಮನೆಯಲ್ಲಿ ಇರಿಸಿ, ನಂತರ ಮದರಾಸು ಸೆರೆಮನೆಗೂ ವರ್ಗಾಯಿಸಲಾಯಿತು. ಅಲ್ಲಿ ಅವರ ಆರೋಗ್ಯ ಕುಸಿಯ ತೊಡಗಿತು. ಅನಿವಾರ್ಯವಾಗಿ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಸರಕಾರ ಇವರಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಯೂರೋ ಪಿಗೆ ತೆರಳಲು ಅನುಮತಿ ನೀಡಿತು. ೧೯೩೫ರಲ್ಲಿ ಪಂಡಿತ್ ಜವಹರಲಾಲ್ ನೆಹರೂರವರು ಪತ್ನಿ ಕಮಲಾ ನೆಹರೂರವರ ಚಿಕಿತ್ಸೆಗಾಗಿ ವಿಯನ್ನಾಗೆ ಆಗಮಿಸುವ ಸುದ್ದಿ ತಿಳಿದು ಬೋಸರು ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕಮಲಾ ನೆಹರೂರವರು ಕೊನೆಯುಸಿರೆಳೆದರು. ಅಂತ್ಯ ಸಂಸ್ಕಾರದ ವೇಳೆಯಲ್ಲಿ ಬೋಸರು ಇದ್ದು ಜವಾಹರಲಾಲ ನೆಹರುರವರನ್ನು ಸಂತೈಸಿದರು. ಯೂರೋಪ್ ವಾಸ್ತವ್ಯದಲ್ಲಿ ಅವರ ಕಾರ್ಯದರ್ಶಿಯಾಗಿದ್ದ ಎಮಿಲೀ ಶಂಕಲ್ ಎಂಬ ಜರ್ಮನ್ ಮಹಿಳೆ ಸುಭಾಷರ ರಾಷ್ಟ್ರೀಯತೆಯನ್ನು ಮೆಚ್ಚಿ ನಿಕಟವರ್ತಿಯಾದರು. ನಂತರ ೧೯೩೭ ಡಿಸೆಂಬರ್ ೨೬ರಂದು ಆಕೆಯನ್ನು ವಿವಾಹವಾದರು. ನಂತರ ವಿಯನ್ನಾದಲ್ಲಿದ್ದಾಗಲೇ ೧೯೪೨ರಲ್ಲಿ ಪುತ್ರಿ ಅನಿತಾಳ ಜನನವಾಯಿತು. ನಂತರ ಯುರೋಪಿನಿಂದ ಜರ್ಮನಿ, ಇಟಲಿ ದೇಶಗಳಿಗೆ ಭೇಟಿ ನೀಡಿ ಪ್ರಧಾನಿ ಬೆನಿಟ್ ಮುಸಲೋನಿಯನ್ನು ಭೇಟಿಮಾಡಿ ಕ್ರಾಂತಿಕಾರಿ ಚಿಂತನೆಗಳನ್ನು ವಿನಿಮಯ ಮಾಡಿಕೊಂಡರು ಹಾಗೂ ಅನೇಕ ನಾಯಕರನ್ನು, ಉದ್ಯಮಪತಿಗಳನ್ನು ಭೇಟಿ ಮಾಡಿದರು. ಬ್ರಿಟಿಷ್ ಸರಕಾರ ಬೋಸರು ಭಾರತಕ್ಕೆ ಹಿಂತಿರುಗಬಾರದೆಂಬುದಾಗಿ ಸೂಚಿಸಿ ಬಂಧಿಸುವುದಾಗಿ ಎಚ್ಚರಿಕೆ ನೀಡಿತು. ಆದರೂ ೧೯೩೬ರ ಮಾರ್ಚ್‌ನಲ್ಲಿ ಮುಂಬಯಿಗೆ ಹಿಂತಿರುಗಿದರು. ಕೂಡಲೇ ಸರಕಾರ ಬೋಸರನ್ನು ಬಂಧಿಸಿತು. ಅವರ ಬಂಧನವನ್ನು ವಿರೋಧಿಸಿ ದೇಶಾದ್ಯಂತ ಹರತಾಳ ನಡೆಯಿತು. ಬ್ರಿಟಿಷ್ ಸರಕಾರ ಬೇಷರತ್ತಾಗಿ ಬಿಡುಗಡೆ ಮಾಡಿತು. ನಂತರ ೧೯೩೮ರಲ್ಲಿ ಹರಿಪುರದಲ್ಲಿ ನಡೆದ ಕಾಂಗ್ರೆಸ್ ೫೧ನೇ ಅಧಿವೇಶನದ ಅಧ್ಯಕ್ಷತೆಯನ್ನು ಬೋಸರು ವಹಿಸಿದರು. ಬೋಸರು ಮಾಡಿದ ಭಾಷಣ ಕಾಂಗ್ರೆಸ್ ಇತಿಹಾಸದಲ್ಲೆ ಸ್ಮರಣಾರ್ಹವಾಯಿತು. ಕಾಂಗ್ರೆಸ್ ಅಧ್ಯಕ್ಷರಾಗಿ ೧೯೩೮ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಬೋಸರು ಸ್ಪರ್ಧಿಸಿದರು. ಹೆಚ್ಚಿನ ಜನರ ನಿರೀಕ್ಷೆ ಇದ್ದುದ್ದು ಗಾಂಽಜಿಯವರ ಪರೋಕ್ಷ ಬೆಂಬಲ ಪಡೆದ ಅಭ್ಯರ್ಥಿಯೇ ಗೆಲ್ಲುವರೆಂದು ಆದರೆ ಬೋಸರ ಪರವಾಗಿ ೧೫೮೦ ಮತಗಳೂ ಡಾ. ಪಟ್ಟಾಭಿ ಸೀತಾರಾಮಯ್ಯನವರ ಪರವಾಗಿ ೧೩೭೫ ಮತಗಳು ಬಿದ್ದಿದ್ದವು. ಇದರಿಂದ ಗಾಂಧೀಜಿಯವರಿಗೆ ಬೇಸರವಾಯಿತು. ಅವರ ಇಂಗಿತದಂತೆ, ಕಾಂಗ್ರೆಸ್ ಪಕ್ಷದ ನಾಯಕರುಗಳು ಅಸಹಕಾರ ತೋರಿದ್ದರಿಂದ, ಬೋಸರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಬೋಸರು ಕಾಂಗ್ರೆಸ್ ಮುಖ್ಯವಾಹಿನಿಯಿಂದ ದೂರ ಸರಿಯಬೇಕಾಯಿತು. ಮುಂದೆ ಬೋಸರು ತಮ್ಮ ವಿಚಾರಧಾರೆಗೆ ಹೊಂದುವ ಸ್ವಾತಂತ್ರ್ಯ ಹೋರಾಟಗಾರರನ್ನು ಒಳಗೊಂಡಂತೆ ಫಾರ್‌ವರ್ಡ್ ಬ್ಲಾಕ್ ಪಕ್ಷದ ರಚನೆಯನ್ನು ಘೋಷಿಸಿದರು ಹಾಗೂ ಪಕ್ಷದ ಸಿದ್ಧಾಂತವನ್ನು ಪ್ರಚಾರ ಮಾಡಲು ‘ಫಾರ್ ವರ್ಡ್ ಬ್ಲಾಕ್’ ಎಂಬ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ೧೯೪೧ ಡಿಸೆಂಬರ್ ಹೊತ್ತಿಗೆ ಬ್ಯಾಂಕಾಕ್‌ನಲ್ಲಿ ಕ್ರಾಂತಿಕಾರಿಗಳಾದ ರಾಸಬಿಹಾರಿ ಬೋಸ್, ಬಾಬಾ ಅಮರ್ ಸಿಂಗ್, ಗ್ಯಾನಿಪ್ರೀತಂ ಸಿಂಗ್‌ರ ಪ್ರಯತ್ನದಿಂದಾಗಿ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಸ್ಥಾಪನೆಯಾಗಿತ್ತು. ೧೯೪೨ರಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಮೋಹನ್ ಸಿಂಗ್ ಎಂಬ ಬ್ರಿಟಿಷ್ ಅಧಿಕಾರಿ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನೀಯರ ಸಹಕಾರದೊಂದಿಗೆ ಪ್ರಾರಂಭಿಸಿದ್ದರು. ೧೯೪೩ರ ಹೊತ್ತಿಗೆ ಕ್ರಾಂತಿಕಾರಿ ರಾಸ್‌ಬಿಹಾರಿ ಬೋಸರನ್ನು ಸುಭಾಷರು ಟೋಕಿಯೋದಲ್ಲಿ ಪರಸ್ಪರ ಸೌಹಾರ್ದ ಭೇಟಿಯಾದರು. ನಂತರ ಸ್ವತಂತ್ರ ಭಾರತದ ಹಂಗಾಮಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ನೇತಾಜಿ ಇಂಡಿಯನ್ ನ್ಯಾಷನಲ್ ಆರ್ಮಿಯ ದಂಡನಾಯಕ ರಾದರು. ಸುಭಾಷ್‌ಚಂದ್ರ ಬೋಸರ ನೇತೃತ್ವದಲ್ಲಿ ಐಎನ್‌ಎ ಬಲಗೊಂಡಿತು. ಐಎನ್‌ಎಯನ್ನು ದಕ್ಷತೆಯಿಂದ ಬೆಳೆಸುವುದು ಸುಭಾಷರಿಗೆ ಸವಾಲಾಯಿತು. ಮಲಯದಲ್ಲಿನ (ಮಲೇಷಿಯಾ) ಮತ್ತು ಬರ್ಮಾದೇಶದ ಬಿಡುಗಡೆಗೊಂಡ ಯುದ್ಧ ಕೈದಿಗಳನ್ನು ಹಾಗೂ ಸಾರ್ವಜನಿಕರನ್ನೂ ಸೇನೆಗೆ ಸೇರುವಂತೆ ಪ್ರೋತ್ಸಾಸಿದರು. ಅಸೀಮ ಧೈರ್ಯ ಒಮ್ಮೆ ರಂಗೂನಿನಲ್ಲಿ ಸೇನಾ ತುಕಡಿಯೊಂದನ್ನು ನೇತಾಜಿ ಸಂದರ್ಶಿಸುತ್ತಿದ್ದರು. ಅವರ ಭಾಷಣ ಮುಗಿಯುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಆಗಸದಲ್ಲಿ ಶತ್ರು ವಿಮಾನಗಳು ಹಾರಾಡತೊಡಗಿತು. ಆದರೆ ಪ್ರಾಣಾಪಾಯದ ಸನ್ನಿವೇಶದಲ್ಲಿಯೂ ನೇತಾಜಿ ವೇದಿಕೆಯನ್ನು ಬಿಟ್ಟು ಇಳಿಯದೆ ಶಾಂತವಾಗಿ ನಿಂತು ಸೈನಿಕರಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದರು. ಕಟ್ಟಕಡೆಯ ಸೈನಿಕ ಅಲ್ಲಿಂದ ತೆರಳಿದ ಮೇಲೆಯೇ ನೇತಾಜಿ ವೇದಿಕೆಯಿಂದ ಇಳಿದದ್ದು. ನೇತಾಜಿಯವರ ಇಂತಹ ಸ್ಥೈರ್ಯದಿಂದಾಗಿ ಐಎನ್‌ಎ ಸೈನಿಕರಲ್ಲಿ ಹೆಚ್ಚಿನ ನಿಷ್ಠೆಯನ್ನು ಮೂಡಿಸಿತು. ಸುಭಾಷ್ ಚಂದ್ರಬೋಸರು ಪದೇಪದೇ ಹೇಳುತ್ತಿದ್ದ ಒಂದು ಮಾತು ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ, ಅದು ನಾವು ಪಡೆದುಕೊಳ್ಳ ಬೇಕಾದದ್ದು. ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ ತಂದು ಕೊಡುತ್ತೇನೆ ಎಂಬುದು ಅವರ ಇನ್ನೊಂದು ಘೋಷಣೆ. ಮಹಿಳಾ ರೆಜಿಮೆಂಟ್ ನೇತಾಜಿರವರ ಸಾಧನೆಯಲ್ಲಿ ಹಲವಾರು ಪ್ರಥಮಗಳು ಇದ್ದವು. ಬ್ರಿಟಿಷರ ವಿರೋಧಿಗಳಾಗಿದ್ದ ಜರ್ಮನ್ ಸೇನೆಯ ನೆರವನ್ನು ಪಡೆದಿದ್ದರು, ಜಪಾನ್ ಸೇನೆಯ ಸಹಕಾರ ಪಡೆದಿದ್ದರು, ದೊಡ್ಡ ಸೈನ್ಯ ಕಟ್ಟಿ ಭಾರತದ ಮೇಲೆ ಆಕ್ರಮಣ ಮಾಡಿ, ಬ್ರಿಟಿಷರನ್ನು ಓಡಿಸುವ ಕನಸು ಕಂಡಿದ್ದರು, ಆ ಹಾದಿಯಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿದ್ದರು. ಏಷ್ಯಾ ಖಂಡದಲ್ಲಿಯೇ ಮೊಟ್ಟ ಮೊದಲಬಾರಿಗೆ ಸೇನೆಯಲ್ಲಿ ಮಹಿಳೆಯರನ್ನು ಸೇರಿಸಿದರು. ಮಹಿಳಾ ಘಟಕದ ಝಾನ್ಸಿರಾಣಿ ರೆಜಿಮೆಂಟ್‌ಗೆ ಮುಖ್ಯಸ್ಥರಾಗಿ ಕ್ಯಾಪ್ಟನ್ ಲಕ್ಷ್ಮಿಯವರನ್ನು ನೇಮಿಸಿದ್ದರು. ೧೯೪೫ರ ಏಪ್ರಿಲ್‌ನಲ್ಲಿ ಸುಭಾಷರು ಬರ್ಮಾದಿಂದ ನಿರ್ಗಮಿಸಿ ಜಪಾನಿಗೆ ಬಂದರು ಸುಭಾಷರು ಯೋಚಿಸಿದ್ದಂತೆ ರಷ್ಯಕ್ಕೆ ಹೋಗಿ ಮಾತುಕತೆ ನಡೆಸಿ, ಅಲ್ಲಿಯ ಸೇನೆಯ ನೆರವನ್ನು ಪಡೆದು ಭಾರತದ ಗಡಿಯ ಮೇಲೆ ಬ್ರಿಟಿಷರ ವಿರುದ್ಧ ಸೇನಾ ಕಾರ್ಯಚರಣೆಯನ್ನು ಆರಂಭಿಸುವ ಯೋಜನೆ ಇತ್ತು. ಆದರೆ ಇದಕ್ಕೆ ಜಪಾನ್ ಅನುಮತಿಸದ ಕಾರಣ ಐಎಸ್‌ಎಯನ್ನು ಮುಂದುವರಿಸುವುದು ಸೂಕ್ತವಲ್ಲವೆಂದು ಭಾವಿಸಿ ಸುಮಾರು ಇಪ್ಪತ್ತಮೂರು ಸಾವಿರ ಯೋಧರನ್ನು ಹೊಂದಿದ್ದ ಐಎನ್‌ಎಯನ್ನು ವಿಸರ್ಜಿಸಿ, ಸಾವಿರಾರು ಸೈನಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದರು. ಆ ಪ್ರಸಿದ್ಧ ಅಪಘಾತ ಅಂದು ೧೯೪೫ರ ಆಗಸ್ಟ್ ೧೭. ನೇತಾಜಿ ಸುಭಾಷ್‌ಚಂದ್ರ ಬೋಸ್ ಹಾಗೂ ಇಂಡಿಯನ್ ನ್ಯಾಷನಲ್ ಆರ್ಮಿಯ ಉಪಾಧ್ಯಕ್ಷ ಹಬೀಬ್ ಉರ್ ರೆಹಮಾನ್ ಹಾಗೂ ಇತರರನ್ನೊಳಗೊಂಡ ಕೆ-೨೧ ಬಾಂಬರ್ ವಿಮಾನ ತೈವಾನ್‌ನ ನಿಲ್ದಾಣದಿಂದ ಆಗಸಕ್ಕೆ ಹಾರಿತು. ಆದರೆ ನಿಲ್ದಾಣ ಬಿಟ್ಟ ಸ್ವಲ್ಪ ಹೊತ್ತಲ್ಲೇ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಸಾಕಷ್ಟು ವೇಗ ಕಂಡುಕೊಳ್ಳಲು ಸಾಧ್ಯವಾಗದೇ ನಿಯಂತ್ರಣ ಸಾಧಿಸಲು ವಿಫಲವಾಗಿ ವಿಮಾನ ಪತನಗೊಂಡಿತು. ಇದರಿಂದಾಗಿ ಇಂಧನದ ಟ್ಯಾಂಕ್ ಸಿಡಿದ ಪರಿಣಾಮ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತು. ಈ ಭಾರಿ ಸ್ಫೋಟದಿಂದಾಗಿ ಇಂಧನ ಟ್ಯಾಂಕ್ ಪಕ್ಕದಲ್ಲೇ ಕುಳಿತ್ತಿದ್ದ ನೇತಾಜಿರವರ ಬಟ್ಟೆಗಳಿಗೂ ಬೆಂಕಿ ತಗುಲಿತು. ಹೀಗೆ ವಿಮಾನದೊಂದಿಗೆ ನೆಲಕ್ಕೆ ಪತನಗೊಂಡ ನೇತಾಜಿ ಅವರ ದೇಹಕ್ಕೆ ಸುಟ್ಟಗಾಯವಾಗಿತ್ತು. ಅಲ್ಲದೆ, ತಲೆ ಹಾಗೂ ಕುತ್ತಿಗೆಗೂ ಗಾಯವಾಗಿತ್ತು. ಇಷ್ಟಾದರೂ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರಬೋಸರು ಇನ್ನೂ ಬದುಕಿದ್ದರು. ನೇತಾಜಿ ಅವರ ಸಹವರ್ತಿ ರೆಹಮಾನ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ನೇತಾಜಿರವರ ಮೈಮೇಲಿದ್ದ ಅರೆಸುಟ್ಟ ಬಟ್ಟೆಗಳನ್ನು ತೆಗೆದ ರೆಹಮಾನ್ ಜೊತೆ ತುಸು ಹೊತ್ತು ಸಂಭಾಷಣೆ ನಡೆಸಿದ್ದರಂತೆ. ದಿನಾಂಕ ೧೮-೮-೧೯೪೫ರ ರಾತ್ರಿ ೮ ಗಂಟೆಯ ವೇಳೆಗೆ ನೇತಾಜಿರವರು ಕೊನೆಯುಸಿರೆಳೆದರು ಎಂದು ಘೋಷಿಸಲಾಯಿತು. ಈ ವಿವರಗಳು ಸೆಪ್ಟೆಂಬರ್ ೨೯, ೨೦೦೭ ರಲ್ಲಿ ಸಲ್ಲಿಸಿರುವ ಕೌಂಟರ್ ಇಂಟೆಲಿಜೆನ್ಸ್ ಕಾರ್ಪ್ಸ್ ವರದಿಯಲ್ಲಿರುವುದು, ೧೯೫೬ರ ಷಾ ನವಾಜ್ ಖಾನ್ ಸಮಿತಿ ಹಾಗೂ ೧೯೭೦-೭೪ರ ನ್ಯಾ.ಜಿ.ಡಿ. ಖೋಸ್ಲಾರವರು ಸರಕಾರಕ್ಕೆ ಸಲ್ಲಿಸಿರುವ ದಾಖಲೆಗಳನ್ನು ನೀಡುವಂತೆ ಮಿಷನ್ ನೇತಾಜಿ ಸಂಸ್ಥೆಯು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಂದ್ರ ಹಕ್ಕು ಮಾಹಿತಿ ಅಯೋಗದ ನಿರ್ದೇಶನದ ಅನ್ವಯ ಬಹಿರಂಗಪಡಿಸಲಾಗಿರುವುದು ವರದಿಯಾಗಿದೆ. ಮಗಳು ಹೇಳಿದ ಸತ್ಯ ಮಾರ್ಚ್ ೨೩, ೧೯೯೭ರಲ್ಲಿ ಸುಭಾಷ್‌ಚಂದ್ರ ಬೋಸರ ಪುತ್ರಿ ಅನಿತಾ ಪ-ರವರು ಹಾಗೂ ಅವರ ಪತಿ ಜರ್ಮನ್  ಪಾರ್ಲಿಮೆಂಟಿನ ಸದಸ್ಯರಾದ ಡಾ. ಮಾರ್ಟಿನ್ ಪ-ರವರು ಬೆಂಗಳೂರಿಗೆ ಔಪಚಾರಿಕ ಭೇಟಿಯ ಸಂದರ್ಭದಲ್ಲಿ ಪತ್ರಿಕೆಗಳಿಗೆ ನೀಡಿದ್ದ ಸಂದರ್ಶನದಲ್ಲಿ ‘ನನ್ನ ತಂದೆ ಏನಾದರೋ ಗೊತ್ತಿಲ್ಲ, ಇತರರು ತಂದೆಯ ಸಾವು ಅಥವಾ ನಾಪತ್ತೆ ಬಗ್ಗೆ ಏನು ಭಾವಿಸುತ್ತಾರೋ ಹಾಗೆಯೇ ನಾನೂ ಭಾವಿಸುತ್ತೇನೆ’ ಎಂದು ಹೇಳಿರುವ ವರದಿಯು ನೇತಾಜಿ ಸಾವಿನ ಬಗ್ಗೆ ಕುತೂಹಕ್ಕೆ ಕಾರಣವಾಗಿದೆ. ೧೯೪೫ರಲ್ಲಿ ಅವರು ಸತ್ತಿಲ್ಲ, ಬಹಳ ವರ್ಷಗಳ ತನಕ ಮಾರುವೇಷದಲ್ಲಿ ಬದುಕಿದ್ದರು ಎಂದು ಸುಭಾಷರ ಅಭಿಮಾನಿಗಳು ಇಂದಿಗೂ ನಂಬಿದ್ದಾರೆ. ಇಂದು ಸುಭಾಷರ ೧೨೫ನೇ ಜನ್ಮದಿನ. ಸೇನೆಯ ಸಹಾಯದಿಂದ ಬ್ರಿಟಿಷರನ್ನು ಭಾರತದಿಂದ ಓಡಿಸಬೇಕೆಂಬ ಅವರ ಆಸೆಯು ನೆರವೇರಲಿಲ್ಲ. ಆದರೆ, ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು, ಅವರ ಸೇನಾ ಅಭಿಯಾನ ಸಹ ಒಂದು ಕಾರಣ ಎಂದು ಹಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಕ್ರೇಂದ್ರ ಸರಕಾರವು ಸ್ವಾತ್ರಂತ್ರ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಬೋಸರ ಜನ್ಮ ದಿನವನ್ನು ಈಗಾಗಲೇ ಪರಾಕ್ರಮ ದಿವಸ್ ಎಂದು ಆಚರಿಸುತ್ತಿದ್ದು, ಈ ವರ್ಷದ ಗಣರಾಜ್ಯೊತ್ಸವದ ಭಾಗವಾಗಿ ಅವರ ಜನ್ಮ ದಿನವಾದ ಜನವರಿ ೨೩ರಿಂದ ವರ್ಷವಿಡೀ ಸಂಭ್ರಮಾಚರಣೆಯನ್ನು ಆಚರಿಸಲು ನಿರ್ಧರಿಸಿರುವುದು ದೇಶ ಪ್ರೇಮಿಗಳಿಗೆ ಹೆಮ್ಮೆ ತಂದಿದೆ. ೧೯೪೭ರ ನಂತರ ನಡೆಸಿದ ಬೇಹುಗಾರಿಕೆ ಬ್ರಿಟಿಷ್ ಸರಕಾರವು ಸುಭಾಷರನ್ನು ೧೯೪೧ರಲ್ಲಿ ಗೃಹಬಂಧನದಲ್ಲಿರಿಸಿತ್ತು. ಗಡ್ಡ ಬೆಳೆಸಿ, ಬ್ರಿಟಿಷ್ ಏಜೆಂಟರ ಕಣ್ ತಪ್ಪಿಸಿ ಸುಭಾಷರು ಅಪಘಾನಿಸ್ತಾನದ ಮೂಲಕ ಸಾಗಿ ಯುರೋಪಿಗೆ ಹೋದರು. ಬ್ರಿಟಿಷರ ವಿರುದ್ಧ ಹೋರಾಡಲು ಹಿಟ್ಲರನ ನೆರವು ಬಯಸಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುಭಾಷರನ್ನು ಬ್ರಿಟಿಷರು ಫ್ಯಾಸಿಸ್ಟ್ ಎಂದು ಘೋಷಿಸಿ, ಅವರ ಕುಟುಂಬದ ಮೇಲೆ ಗುಪ್ತಚಾರಿಕೆ ನಡೆಸಿದ್ದರು. ಸುಭಾಷ್ ಮತ್ತು ಅವರ ಸಹೋದರರ ಕುಟುಂಬದ ಎಲ್ಲಾ ಸದಸ್ಯರ ಮೇಲೆ ಕಣ್ಣಿಟ್ಟು, ಅವರ ಪತ್ರವ್ಯವಹಾರವನ್ನು ಗಮನಿಸುತ್ತಿದ್ದರು. ಆದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬದ ನಂತರವೂ, ಈ ರಹಸ್ಯ ಗುಪ್ತಚಾರ ಚಟುವಟಿಕೆ ಮುಂದುವರಿದಿತ್ತು. ೧೯೪೮ರಿಂದ ೧೯೬೮ರ ತನಕ ಕೇಂದ್ರ ಸರಕಾರದ ಆದೇಶದಂತೆ ಐ.ಬಿ. ಗುಪ್ತಚರ ದಳವು, ಬೋಸ್ ಕುಟುಂಬದ ಎಲ್ಲಾ ಸದಸ್ಯರ ಮೇಲೆ ಕಣ್ಣಿಟ್ಟು, ರಹಸ್ಯ ಫೈಲ್‌ಗಳನ್ನು ತೆರೆದು, ಅವರ ಕುರಿತ ಪ್ರತಿ ವಿವರಗಳನ್ನೂ ದಾಖಲಿಸುತ್ತಿತ್ತು! ಸ್ವಾತಂತ್ರ್ಯಹೋರಾಟಗಾರ ಮತ್ತು ಅಪ್ರತಿಮ ಸೇನಾನಿಯಾಗಿದ್ದ ಸುಭಾಷರ ಕುಟುಂಬದ ಸದಸ್ಯರ ಮೇಲೆ ಕೇಂದ್ರ ಸರಕಾರ ನಡೆಸಿದ ಈ ರಹಸ್ಯ ಬೇಹುಗಾರಿಕೆಯು, ೨೦೧೫ರಲ್ಲಿ ಕೆಲವು ಕಡತಗಳ ಡಿಕ್ಲಾಸಿಫಿಕೇಷನ್ ಮೂಲಕ ಬಯಲಾಯಿತು. ಆದರೆ ಬೋಸ್ ಕುರಿತ ಇನ್ನಷ್ಟು ಕಡತಗಳು ಇನ್ನೂ ರಹಸ್ಯವಾಗಿಯೇ ಸರಕಾರದ ಬಳಿ ಭದ್ರವಾಗಿವೆ! ಅಪಘಾತ ನಡೆದಿಲ್ಲ ಎಂದ ಸುಬ್ರಮಣಿಯನ್ ಸ್ವಾಮಿ ೧೯೪೫ರ ಆಗಸ್ಟ್ ೬ ಮತ್ತು ೯ರಂದು ಜಪಾನಿನ ಮೇಲೆ ಅಮೆರಿಕವು ಅಣುಬಾಂಬ್ ಹಾಕಿ, ಲಕ್ಷಾಂತರ ಜನರನ್ನು ಸಾಯಿಸಿತು. ತಕ್ಷಣ ಜಪಾನ್ ಶರಣಾಗಲು ಒಪ್ಪಿತು. ಇದಾಗಿ ಕೆಲವೇ ದಿನಗಳಲ್ಲಿ, ಅಂದರೆ ೧೮ ಆಗಸ್ಟ್ ೧೯೪೫ರಂದು ಸುಭಾಷ್ ಪಯಣಿಸುತ್ತಿದ್ದ ವಿಮಾನ ಅಪಘಾತಕ್ಕೆ ಈಡಾಗಿ, ಅವರು ಸತ್ತರು ಎಂದು ಘೋಷಿಸಲಾಗುತ್ತದೆ. ‘ವಿಮಾನ ಅಪಘಾತವು ಒಂದು ಕಪಟ ನಾಟಕ. ನೇತಾಜಿವರು ಸೋವಿಯತ್ ರಷ್ಯಾದಲ್ಲಿ ರಾಜಕೀಯ ಆಶ್ರಯ ಬಯಸಿದರು. ಆದರೆ ಅವರನ್ನು ಅಲ್ಲಿ ಬಂಧಿಸಿ, ಸಾಯಿಸಲಾಯಿತು’ ಎಂದು ಸುಬ್ರಮಣಿಯನ್ ಸ್ವಾಮಿ ಹೇಳುತ್ತಾರೆ. ನೇತಾಜಿಯವರು ರಷ್ಯಾದಲ್ಲಿ ಇದ್ದರು ಎಂದು ನೆಹರೂಗೆ ಗೊತ್ತಿತ್ತು ಎಂದು ಸ್ವಾಮಿ ಹೇಳಿದ್ದರು. ಇದಕ್ಕೆ ಅವರು ನೀಡುವ ಆಧಾರವೆಂದರೆ, ೧೯೭೦ರಲ್ಲಿ ಖೋಸ್ಲಾ ಕಮಿಷನ್ ಮುಂದೆ ಶ್ಯಾಮ್ ಲಾಲ್ ಜೈನ್ (ನೆಹರೂ ಅವರ ಸ್ಟೆನೋಗ್ರಾಫರ್) ನೀಡಿದ ಹೇಳಿಕೆ. ನೆಹರೂ ಅವರು ಸ್ಟಾಲಿನ್‌ಗೆ ೧೯೪೫ರಲ್ಲಿ ಕಳಿಸಿದ ಪತ್ರದಲ್ಲಿ ಬೋಸ್ ಬಂಧನದಲ್ಲಿರುವ ವಿಚಾರವಿತ್ತು ಮತ್ತು ಅದನ್ನು ತಾನು ಟೈಪ್ ಮಾಡಿದ್ದೆ ಎಂದು ಶ್ಯಾಮ್ ಲಾಲ್ ಜೈನ್ ಹೇಳಿಕೆ ನೀಡಿದ್ದರು. ಆದರೆ, ಸುಭಾಷರ ಕೊನೆಯ ದಿನಗಳು ಇಪ್ಪತ್ತನೆಯ ಶತಮಾನದ ಬಿಡಿಸಲಾಗದ ರಹಸ್ಯವಾಗಿಯೇ ಇಂದಿಗೂ ಮುಂದುವರಿದಿದೆ. ಯಾರೀ ಬಾಬಾ? ಸುಭಾಷ್ ಚಂದ್ರ ಬೋಸ್‌ರು ೧೯೪೫ರ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಅವರು ಆ ನಂತರವೂ ಮೂರು ದಶಕಗಳ ಕಾಲ ಬದುಕಿದ್ದರು ಎಂದು ಬೋಸ್‌ರ ಅಭಿಮಾನಿಗಳು ಇಂದಿಗೂ ನಂಬುತ್ತಾರೆ. ಅದಕ್ಕೆ ಹಲವು ಸಾಂದರ್ಭಿಕ ಸಾಕ್ಷಗಳನ್ನೂ ಪ್ರಸ್ತಾಪಿಸುತ್ತಾರೆ. ಅವುಗಳಲ್ಲಿ ಒಂದು ಎಂದರೆ ‘ಗುಮ್ನಾಮಿ ಬಾಬಾ’ ಎಂಬ ರಹಸ್ಯ ವ್ಯಕ್ತಿ. ಗುಮ್ನಾಮಿ ಬಾಬಾ ಅಥವಾ ಭಗವಾನ್‌ಜಿ ಎಂಬುವವ ಅಧ್ಯಾತ್ಮ ಜೀವಿ, ಉತ್ತರ ಪ್ರದೇಶದ ಲಕ್ನೋ ಮತ್ತು ಇತರ ಪ್ರದೇಶಗಳಲ್ಲಿ ೧೯೫೦ರ ದಶಕದಿಂದಾರಂಭಿಸಿ, ೧೯೮೫ರ ತನಕ ಬದುಕಿದ್ದರು. ೧೬.೯.೧೯೮೫ರಂದು ಅಯೋಧ್ಯಾದಲ್ಲಿ ಅವರು ದೇಹತ್ಯಾಗ ಮಾಡಿದರು ಎನ್ನಲಾಗಿದೆ. ಗುಮ್ನಾಮಿ ಬಾಬಾ ಅವರು ಸುಭಾಷರನ್ನು ಹೋಲುತ್ತಿದ್ದುದು ಮಾತ್ರ ವಲ್ಲ, ಅವರ ಕೈ ಬರಹ ಸಹ ಸುಭಾಷ್‌ರ ಕೈ ಬರಹವನ್ನು ಹೋಲುತ್ತಿತ್ತು. ಆದರೆ, ಅವರ ಹಲ್ಲುಗಳ ಡಿಎನ್‌ಎ ಪರೀಕ್ಷೆಯನ್ನು ಮಾಡಿಸಿದಾಗ, ಸ್ಪಷ್ಟ ಫಲಿತಾಂಶ ದೊರಕಲಿಲ್ಲ. ಅವರು ಕೆಲವೇ ಕೆಲವು ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದರು, ಆದರೆ ಆ ಭೇಟಿಯು ರಹಸ್ಯವಾಗಿರುತ್ತಿತ್ತು. ಗುಮ್ನಾಮಿ ಬಾಬಾ ಅವರು ೨೫ ಮರದ ಪೆಟ್ಟಿಗೆಗಳಲ್ಲಿ ಸಂಗ್ರಹಿಸಿದ್ದ ಬಹುಪಾಲು ವಸ್ತುಗಳು ಸುಭಾಷ್ ಚಂದ್ರ ಬೋಸ್‌ರಿಗೆ ಸಂಬಂಧಿಸಿದ್ದು ಎಂದು ರಾಜ್ಯ ಸರಕಾರವೇ ಅಫಿದವಿತ್ ಸಲ್ಲಿಸಿದೆ. ಗುಮ್ನಾಮಿ ಬಾಬಾ ಅವರು ಸುಭಾಷರೇ ಎಂದು ಪತ್ತೆ ಹಚ್ಚಲು ಸಮಿತಿ ಸಹ ನೇಮಕವಾಗಿತ್ತು. ಆದರೆ, ಇವರು ಅವರೇ ಎಂದು ಅಧಿಕೃತವಾಗಿ ಘೋಷಿಸಲಾಗಿಲ್ಲ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ