Thursday, 12th December 2024

ದಾರಿ ತಪ್ಪುತ್ತಿದೆ ಕೈ ಹೋರಾಟದ ಹಾದಿ

ವರ್ತಮಾನ

maapala@gmail.com

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೊಳಪಡಿಸು ತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಳೆದ ಮೂರು ದಿನ ಘನಘೋರ ಹೋರಾಟ ಕೈಗೊಂಡಿತ್ತು. ಬೀದಿಗಳಲ್ಲಿ ಪ್ರತಿಭಟನೆ ನಡೆಸಿತು. ರಾಜಭವನ ಛಲೋ ಎಂದು ಮೆರವಣಿಗೆ ಮಾಡಿತು. ಪ್ರತಿಭಟನೆ ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೇ ಪಕ್ಷದ ನಾಯಕರು ಜಬರ್‌ದಸ್ತ್ ತೋರಿಸಿದರು.

ತಾಳ್ಮೆ ಕಳೆದುಕೊಂಡ ಪೊಲೀಸರು ಜನಪ್ರತಿನಿಧಿಗಳು ಎಂದೂ ನೋಡದೆ, ರಾಷ್ಟ್ರೀಯ ಪಕ್ಷವೊಂದರ ನಾಯಕರೂ ಎಂಬುದನ್ನು ಪರಿಗಣಿಸದೆ ಅವರನ್ನು ಹೀನಾಯವಾಗಿ ಎಳೆದೊಯ್ದರು. ಪೊಲೀಸರ ದೌರ್ಜನ್ಯದ ವಿರುದ್ಧ ಮತ್ತೊಂದು ಹೋರಾಟ ನಡೆಯಿತು. ಅಲ್ಲೂ ಇದೇ ಪುನರಾವರ್ತನೆಯಾಯಿತು.

ಕಾಂಗ್ರೆಸ್‌ನ ಈ ಹೋರಾಟದ ಹಿಂದಿನ ಕಾರಣವೆಂದರೆ ಕೇಂದ್ರ ಸರಕಾರ ಜಾರಿ ನಿರ್ದೇಶ ನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆ ಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂಬುದು. ಆದರೆ, ಈ ರಣ ಭೀಕರ ಬೀದಿ ಹೋರಾಟ, ರಾದ್ಧಾಂತದಿಂದ ಜನರಿಗೆ ಆದ ಅನುಕೂಲ ಶೂನ್ಯ. ಅದರ ಬದಲು ಸಾಕಷ್ಟು ಸಮಸ್ಯೆಗಳಾದವು. ಸಂಚಾರ ದಟ್ಟಣೆ ಯಿಂದ ನಿಗದಿತ ಸಮಯಕ್ಕೆ ಗಮ್ಯ ತಲುಪಲು ಸಾಧ್ಯವಾಗದೇ ಪ್ರತಿಭಟನಾಕಾರರಿಗೆ ಶಾಪ ಹಾಕಿದರು.

ಇದು ಒಂದು ಉದಾಹರಣೆ ಅಷ್ಟೆ. ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದಾಗಲೂ ರಾಜ್ಯದಲ್ಲಿ ಕಾಂಗ್ರೆಸ್ ಇದೇ ರೀತಿಯ ಹೋರಾಟ ನಡೆಸಿತ್ತು. ದೆಹಲಿಗೂ ಹೋರಾಟವನ್ನು ವಿಸ್ತರಿಸಿತ್ತು. ಆದರೆ, ಪ್ರತಿಪಕ್ಷದಲ್ಲಿ ಕುಳಿತ ಮೇಲೆ ಇದುವರೆಗೆ ಕಾಂಗ್ರೆಸ್ ಒಂದಾದರೂ ಜನಪರ ಹೋರಾಟವನ್ನು ಈ ಮಟ್ಟದಲ್ಲಿ ನಡೆಸಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಯಿತೇ ಎಂದರೆ ಸಿಗುವ ಉತ್ತರ ಇಲ್ಲ ಎಂಬುದು ಅಷ್ಟೆ.

ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಒಮ್ಮೆ ಬೀದಿಗಿಳಿದು ಸರಕಾರದ ವಿರುದ್ಧ ಬೊಬ್ಬಿರಿದರೆ ಅಲ್ಲಿಗೆ
ಮುಗಿಯಿತು. ಇಂತಹ ಜನಪರ ಹೋರಾಟಗಳನ್ನು ಕಾಂಗ್ರೆಸ್ ಯಾವತ್ತೂ ತೀವ್ರವಾಗಿ ಪರಿಗಣಿಸಲೇ ಇಲ್ಲ. ಹೀಗಾಗಿಯೇ 2014ರಲ್ಲಿ ಸೋತ ಬಳಿಕ ಇನ್ನೂ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಚೇತರಿಸಿಕೊಳ್ಳಲಿಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಂತಹ ಹೀನಾಯ ಪರಿಸ್ಥಿತಿ ಬಂದಿಲ್ಲ. ಪ್ರಯತ್ನ ವನ್ನು ಸ್ವಲ್ಪ ಹೆಚ್ಚಿಸಿದರೆ ಮತ್ತೆ ಅಧಿಕಾರಕ್ಕೆ ಬರುವಷ್ಟು ಸಾಮರ್ಥ್ಯವನ್ನು ಇನ್ನೂ ಇದೆ. ಆದರೆ, ಅಧಿಕಾರ ಕಳೆದು ಕೊಂಡು ವಿಲವಿಲನೆ ಒದ್ದಾಡುತ್ತಿರುವ ರಾಜ್ಯದ ನಾಯಕರಿಗೆ ಮತ್ತೆ ಅಧಿಕಾರಕ್ಕೇರಬೇಕು ಎಂಬ ಹಪಾಹಪಿ ಇದೆಯೇ ಹೊರತು,
ಅದಕ್ಕೆ ಯಾವ ರೀತಿಯ ಮಾರ್ಗ ಕಂಡುಕೊಳ್ಳಬೇಕು ಎಂಬ ಯೋಚನಾಶಕ್ತಿಯೂ ಇಲ್ಲದಂತಾಗಿದೆ.

ಈ ವಿಚಾರದಲ್ಲಿ ಬಿಜೆಪಿಯ ಹೋರಾಟವನ್ನು ಮೆಚ್ಚಲೇ ಬೇಕು. ಜನಸಂಘವಾಗಿ ಹುಟ್ಟಿಕೊಂಡು, ಬಿಜೆಪಿಯಾಗಿ ಬೆಳೆದು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿಯಬೇಕು ಎಂದರೆ ಅದು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಹೆಸರು ಉಳಿಸಿಕೊಂಡು ಜನರ ಮನಸ್ಸಿನ ಆಳಕ್ಕೆ ಇಳಿದಿದ್ದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೇರಬೇಕು ಎಂದರೆ ಸಾಕಷ್ಟು ಹೋರಾಟ, ತಾಳ್ಮೆ ಬೇಕು. ಅದನ್ನು ಬಿಜೆಪಿ ಪ್ರದರ್ಶಿಸಿದ ಕಾರಣಕ್ಕೇ ಇಂದು ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ.
ಇದರ ಹಿಂದೆ ಹೋರಾಟದ ದೊಡ್ಡ ಇತಿಹಾಸವೇ ಇದೆ. ತಾಳ್ಮೆಯೂ ಇದೆ.

ಬೆಲೆ ಏರಿಕೆ ಸೇರಿದಂತೆ ಜನರಿಗೆ ಸಮಸ್ಯೆಯಾಗುವಂತಹ ಯಾವುದೇ ತೀರ್ಮಾನವನ್ನು ಸರಕಾರ ತೆಗೆದುಕೊಳ್ಳಲಿ ಪ್ರತಿ ಪಕ್ಷವಾಗಿದ್ದ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿತ್ತು. ಇದರಿಂದ ಜನರಿಗೆ ಆಗುವ ತೊಂದರೆಗಳನ್ನು ಸವಿಸ್ತಾರವಾಗಿ ಜನರ ಮನಮುಟ್ಟುವಂತೆ ಹೇಳುತ್ತಿತ್ತು. ಪ್ರತಿಭಟನೆಯಲ್ಲಿ ಎಷ್ಟು ಜನರಿದ್ದಾರೆ ಎಂಬುದಕ್ಕಿಂತ ಅದರಿಂದ ಎಷ್ಟು ಜನರನ್ನು ಮುಟ್ಟಬಹುದು ಎಂದು ಯೋಚಿಸುತ್ತಿತ್ತು. ತನ್ನ ಹೋರಾಟವನ್ನು ಸರಕಾರದ ನಿರ್ಧಾರಗಳ ವಿರುದ್ಧಕ್ಕಷ್ಟೇ ಸೀಮಿತವಾಗಿಸುತ್ತಿತ್ತು. ಪಕ್ಷದ ನಾಯಕರ ವಿಚಾರಕ್ಕೆ ಬಂದಾಗ ಯಾವತ್ತೂ ಬೀದಿಗೆ ಇಳಿಯುತ್ತಿರಲಿಲ್ಲ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೋದಿ ಅವರನ್ನು ಸಾವಿನ ವ್ಯಾಪಾರಿ ಎಂದಿತು. ವಿಶೇಷ ತನಿಖಾ ತಂಡ ರಚಿಸಿ ಮುಖ್ಯಮಂತ್ರಿಯೊಬ್ಬರನ್ನು ಸತತ ಎಂಟು ಗಂಟೆ ಪೊಲೀಸ್ ಠಾಣೆಗೆ ಕರೆಸಿ
ವಿಚಾರಣೆ ಮಾಡಿತು. ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐ ಮೂಲಕ ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಜೈಲಿಗೆ ಕಳುಹಿಸಿತು. ಆದರೆ, ಯಾವತ್ತೂ ಬಿಜೆಪಿ ಬೀದಿಗೆ ಇಳಿಯಲಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಕಾನೂನು ಹೋರಾಟದಲ್ಲಿ ಗೆದ್ದರು. ಆ ಮೂಲಕ ಯುಪಿಎ ಸರಕಾರ ತಮ್ಮ ವಿರುದ್ಧ ರಾಜಕೀಯ ಸೇಡು ತೀರಿಸಿದೆ ಎಂಬುದನ್ನು ಜನರ ಮುಂದೆ ಸಾಬೀತು ಪಡಿಸಿದರು. ಹೀಗಾಗಿ ಅವರಿಗೆ ಜನಬೆಂಬಲ ಸಿಕ್ಕಿತು.

ಬಿಜೆಪಿ ಯನ್ನು ಗುಜರಾತ್‌ನಲ್ಲಿ ಮಾತ್ರವಲ್ಲ, ದೇಶದಲ್ಲೂ ಅಧಿಕಾರಕ್ಕೆ ತಂದರು. ಅನೇಕ ರಾಜ್ಯಗಳನ್ನು ಗೆದ್ದುಕೊಂಡರು. ಬಿಜೆಪಿ ಹಿಂದುತ್ವದ ಮೂಲಕ ಅಧಿಕಾರಕ್ಕೆ ಬಂತು ಎಂದು ಹೇಳುತ್ತಾರೆ. ಅದು ನಿಜವಾದರೂ ರಾತ್ರೋರಾತ್ರಿ ಅಧಿಕಾರಕ್ಕೆ ಬರಲಿಲ್ಲ. ಹಿಂದೂಗಳ ವಿಶ್ವಾಸ ಗಳಿಸಲು ಸಾಕಷ್ಟು ವರ್ಷಗಳ ಹೋರಾಟ ಮಾಡಿದರು. ಅವರಲ್ಲಿ ವಿಶ್ವಾಸ ತುಂಬಿದರು. ಬಿಜೆಪಿಯನ್ನು ಬೆಂಬಲಿಸಿದರೆ ನಮಗೆ ಅನುಕೂಲ ಆಗುತ್ತದೆ ಎಂಬ ನಂಬಿಕೆ ಬರುವಂತೆ ಮಾಡಿದರು. ಅಧಿಕಾರಕ್ಕೆ ಬರಲು ಮೂರು ದಶಕಕ್ಕೂ ಹೆಚ್ಚು ಕಾಲ ತಾಳ್ಮೆಯಿಂದಲೇ ಹೋರಾಟ ನಡೆಸಿದರು. ಕಾಂಗ್ರೆಸ್ ಮತ್ತಿತರ ಪಕ್ಷಗಳಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಜನಾಭಿಪ್ರಾಯ ಮೂಡಿಸಿ
ದರೇ ವಿನಃ ಜನರಿಗೆ ತೊಂದರೆಯಾಗುವಂತಹ ಪ್ರತಿಭಟನೆಗಳನ್ನು ನಡೆಸಲಿಲ್ಲ. ಇದರ ಪರಿಣಾಮ ಹಿಂದೂಗಳು ಒಟ್ಟಾಗಿ ಬಿಜೆಪಿಯನ್ನು ಬೆಂಬಲಿಸಿದರು.

ಆದರೆ, ಕಾಂಗ್ರೆಸ್ ಮಾಡುತ್ತಿರುವುದೇನು? ಮಾತೆತ್ತಿದರೆ ಬೀದಿಗಿಳಿದು ಹೋರಾಟ, ಪ್ರತಿಭಟನೆ. ಆದರೆ, ಹೋರಾಟವನ್ನು ಗುರಿ ಮುಟ್ಟಿಸುವ ಯೋಚನೆ ಅವರಲ್ಲಿಲ್ಲ. ಉದಾಹರಣೆಗೆ ಹಿಜಾಬ್ ವಿವಾದ, ಹಲಾಲ್ ವಿವಾದ, ದೇವಸ್ಥಾನಗಳ ಆವರಣದಲ್ಲಿ ಅಲ್ಪ ಸಂಖ್ಯಾತರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಮುಂತಾದ ಸಂದರ್ಭದಲ್ಲಿ ಆರಂಭದಲ್ಲಿ ಕಾಂಗ್ರೆಸಿಗರು ರೊಚ್ಚಿಗೆದ್ದು ಹೋರಾಟ ಆರಂಭಿಸಿದರು. ಹೇಳಿಕೆಗಳನ್ನು ನೀಡಿದರು. ಆದರೆ, ಯಾವಾಗ ಬಹುಸಂಖ್ಯಾತ ಹಿಂದೂಗಳು ತಮ್ಮಿಂದ ದೂರವಾಗಬಹುದು ಎಂಬ ಆತಂಕ ಶುರುವಾಯಿತೋ ಅಲ್ಲಿಗೆ ಹೋರಾಟ ಕೈಬಿಟ್ಟರು.

ಇದರಿಂದ ಆಗಿದ್ದೇನು ಎಂದರೆ, ಅಲ್ಪಸಂಖ್ಯಾತರು ಕಾಂಗ್ರೆಸ್ ಬಗ್ಗೆ ಅನುಮಾನಪಡುವಂತಾಯಿತು. ಕಾಂಗ್ರೆಸಿಗರನ್ನು ನಂಬಿದರೆ
ಅವರು ಯಾವುದೇ ಸಂದರ್ಭದಲ್ಲೂ ನಮಗೆ ಕೈಕೊಡಬಹುದು ಎಂಬ ಸಂಶಯ ಹುಟ್ಟುಹಾಕಿದರು. ಇತರೆ ಹೋರಾಟಗಳ ವಿಚಾರಕ್ಕೆ ಬಂದಾಗಲೂ ಅಷ್ಟೆ. ಜನ ಪರ ಹೋರಾಟಕ್ಕಿಂತಲೂ ಜಾತಿ, ಧರ್ಮದ ವಿಚಾರ ಬಂದಾಗಲಷ್ಟೇ ಕಾಂಗ್ರೆಸ್ ಮುಂಚೂಣಿಗೆ ಬರುತ್ತದೆ. ಜಾತ್ಯತೀತವಾಗಿ, ಧರ್ಮಾತೀತವಾಗಿ ಹೋರಾಡಿದ ಉದಾಹರಣೆಗಳೇ ಕಡಿಮೆ.

ಕಳೆದ ನಾಲ್ಕಾರು ತಿಂಗಳಲ್ಲಿ ೪೦ ಪರ್ಸೆಂಟ್ ಕಮಿಷನ್ ಹೋರಾಟ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಹೋರಾಟಗಳು ಒಂದು ಧರ್ಮದ ಪರವಾಗಿತ್ತು. ಅದರಲ್ಲೂ ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ. ಇನ್ನು ಸರಕಾರದ ನೀತಿ, ಕಾರ್ಯಕ್ರಮಗಳ ವಿರುದ್ಧ ಕಾಂಗ್ರೆಸ್ ನಾಯಕರಿಂದ ಹೇಳಿಕೆಗಳು ಬಂತೇ ಹೊರತು ಯಾವೊಂದು ಹೋರಾಟವೂ ಸಮರ್ಪಕವಾಗಿ ನಡೆಯಲಿಲ್ಲ. ದೇಶದ
ಜನರನ್ನು ಗಂಭೀರವಾಗಿ ಕಾಡುತ್ತಿರುವ ಬೆಲೆ ಏರಿಕೆ ವಿರುದ್ಧ ಗಟ್ಟಿಯಾಗಿ ಕಾಂಗ್ರೆಸ್ ನಿಲ್ಲಲೇ ಇಲ್ಲ.

ಕಾಂಗ್ರೆಸಿಗರಿಗೆ ತಮ್ಮ ನಾಯಕರ ಮೇಲಿರುವಂತಹ ಪ್ರೀತಿ, ಅಭಿಮಾನ, ಗೌರವ ಜನ ಸಾಮಾನ್ಯರ ಮೇಲೂ ಇದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದಕ್ಕೆ ಹೈಕಮಾಂಡ್ ಸಂಸ್ಕೃತಿಯೂ ಕಾರಣ. ಹೈಕಮಾಂಡ್ ನಾಯಕರನ್ನು ಮೆಚ್ಚಿಸಿದರೆ ಆತ ಪಕ್ಷ ದಲ್ಲಿ ಯಾವ ಉನ್ನತ ಸ್ಥಾನಕ್ಕೆ ಬೇಕಾದರೂ ಏರಬಹುದು ಎಂಬ ಕಾರಣಕ್ಕಾಗಿ ಬಹುತೇಕ ನಾಯಕರು, ಮುಖಂಡರು ಆ ಕೆಲಸಕ್ಕೇ ಆದ್ಯತೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆ ಖಂಡಿಸಿ ದೇಶವ್ಯಾಪಿ ಕಾಂಗ್ರೆಸ್ ನಡೆಸಿದ ಹೋರಾಟದ ಹಿಂದಿನ ಉದ್ದೇಶವೂ ಅದೇ ಆಗಿದೆ.

ಆದರೆ, ಬಿಜೆಪಿಯಲ್ಲಿ ಪರಿಸ್ಥಿತಿ ಹಾಗಿಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿ ಇರುವಂತೆ ಬಿಜೆಪಿಯಲ್ಲಿ ವರಿಷ್ಠ ಸಂಸ್ಕೃತಿ ಇದೆ. ವರಿಷ್ಠರ ಅನುಮತಿ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡುವಂತಿಲ್ಲ ಎಂಬ ಪರಿಸ್ಥಿತಿ ಈಗ ಇದೆ. ಆದರೆ, ಅಲ್ಲಿ ವರಿಷ್ಠರನ್ನು ಮೆಚ್ಚಿಸ ಬೇಕಾದರೆ ಅವರ ಪರ ನಿಲ್ಲಬೇಕಾಗಿಲ್ಲ. ವಿರುದ್ಧ ಹೋಗಬಾರದು ಅಷ್ಟೆ. ಉಳಿದಂತೆ ಆತ ಎಷ್ಟು ಜನಪ್ರಿಯನಾಗಿದ್ದಾನೆ ಎಂಬುದರ ಆಧಾರದ ಮೇಲೆ ವರಿಷ್ಠರು ಮಣೆ ಹಾಕುತ್ತಾರೆ.

ಹೋರಾಟ ಮತ್ತು ಹೈಕಮಾಂಡ್ ವಿಚಾರದಲ್ಲಿ ಕಾಂಗ್ರೆಸಿಗರ ಮನಃಸ್ಥಿತಿಯೇ ಪಕ್ಷದ ಈ ಪರಿಸ್ಥಿತಿಗೆ ಕಾರಣ. ಹೀಗಾಗಿ ರಾಜ್ಯದಲ್ಲಿ ಮತ್ತೆ ಸುಲಭವಾಗಿ ಅಧಿಕಾರಕ್ಕೆ ಬರುವ ಅವಕಾಶ ಇದ್ದರೂ ತಮ್ಮದೇ ಆದ ಕಾರಣಗಳಿಗಾಗಿ ಅಧಿಕಾರದ ಮಾರ್ಗವನ್ನು ಕಠಿಣಗೊಳಿಸಿಕೊಳ್ಳು ತ್ತಿದ್ದಾರೆ.

ಲಾಸ್ಟ್ ಸಿಪ್: ಅಧಿಕಾರ ಹಿಡಿಯಬೇಕೆಂಬ ಗುರಿ ಒಂದಿದ್ದರೆ ಸಾಲದು. ಆ ಗುರಿ ತಲುಪಲು ಸರಿಯಾದ ದಾರಿಯನ್ನೂ ಕಂಡುಕೊಳ್ಳಬೇಕು.