Thursday, 12th December 2024

ಭಾರತವೆಂದರೆ ಭಾವನಾತ್ಮಕತೆ, ಅವಕಾಶಗಳ ಸಾಗರ!

ಕೆಲ ತಿಂಗಳಿನಿಂದ ಬೆಂಗಳೂರಿನಲ್ಲಿ ನೆಲೆಸಿರುವ ಸಿಂಗಾಪುರ ದೇಶದ ಉದ್ಯಮಿಯೊಬ್ಬರು ಭಾರತದ ಬಗ್ಗೆ ಬರೆದ ಥ್ಯಾಂಕ್ಯೂ ನೋಟ್..

ಮೂಲ ಬರಹ: ಡರ‍್ರಿಕ್
ಕನ್ನಡಕ್ಕೆ: ನರೇಶ್ ರೆಡ್ಡಿ

ವಸುದೈವ ಕುಟುಂಭಕಂ ಎಂಬುದು ಭಾರತೀಯರ ಮನ, ಮನೆಗಳಲ್ಲಿಯೂ ಇದೆ ಎಂಬುದನ್ನು ಕೇಳಿ ತಿಳಿದಿದ್ದೆ. ಇಪ್ಪತ್ತೊಂದನೇ ಶತಮಾನದಲ್ಲಿ ಭಾರತವು ಸರ್ವಶಕ್ತವಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ದೂರದಿಂದಲೇ ಗಮನಿಸುತ್ತಿದ್ದೆ. ಇದನ್ನು ಕಳೆದ ಎರಡು ತಿಂಗಳನಿಂದ ನಾನೇ ಕಣ್ಣಾರೆ ಕಂಡು, ಮೆಚ್ಚಿ ನನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯುಸುತ್ತೇನೆ.

ನಾನು ಡರ‍್ರಿಕ್, ಸಿಂಗಾಪುರ ದೇಶದ ಪ್ರಜೆ. ಅಲ್ಲಿ ನನ್ನದೊಂದು ಉದ್ಯಮ ಹೊಂದಿದ್ದೇನೆ. ಹೊಸ ಹೊಸ ಅವಕಾಶಗಳಿಗಾಗಿ ಜಗತ್ತಿನ ಬೇರೆ ದೇಶಗಳತ್ತ ಗಮನ ನೀಡಿದಾಗ ನನಗೆ ಆಕರ್ಷಿಸಿದ್ದು ಭಾರತ. ಎಲ್ಲ ಕ್ಷೇತ್ರಗಳಲ್ಲೂ ಬಲಾಢ್ಯ ರಾಷ್ಟçವಾಗಿ ಬೆಳೆಯುತ್ತಿರುವ ದೇಶದ ಜತೆ ಒಡನಾಟ ಹೊಂದಬೇಕು ಎಂದು ಮನಸ್ಸಿಗೆ ಬಲವಾಗಿ ಅನ್ನಿಸಿತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು, ಭಾರತಕ್ಕೆ ಬಂದು ಬಿಸಿನೆಸ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಬೇಕು. ಇಲ್ಲಿನ ಜನ ಜೀವನದ ಬೆರೆಯಬೇಕು ಎಂಬ ಹಾದಿ.

ಬೆಂಗಳೂರಿನ ಬಂಧ:
ಭಾರತಕ್ಕೆ ಬರುವ ನನ್ನ ನಿರ್ಧಾರವನ್ನು ನನ್ನ ಆತ್ಮೀಯರು, ಕುಟುಂಬದವರ ಜತೆ ಹೇಳಿಕೊಂಡಾಗ ಎಲ್ಲರಿಗೂ ಅಚ್ಚರಿ. ಎಲ್ಲರಿಂದಲೂ ಬೇಡ ಎಂಬರ್ಥದ ಅಭಿಪ್ರಾಯ. ಆದರೂ ನನ್ನೊಳಗೆ ಭಾರತಕ್ಕೆ ಬರಲೇ ಬೇಕೆಂಬ ಅದಮ್ಯ ಕಾತರಿಕೆ. ನನ್ನವರನ್ನು ಹೇಗೋ ಒಪ್ಪಿಸಿ, ಭಾರತದ ಸ್ಟಾರ್ಟಪ್ ಕ್ಯಾಪಿಟಲ್ ಎಂದು ಹೆಸರಾದ ಬೆಂಗಳೂರಿಗೆ ಕಳೆದ ಎರಡು ತಿಂಗಳಿನ ಹಿಂದೆ ಬಂದು ತಲುಪಿದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಅಪರಿಚಿತ ಜನರೊಂದಿಗೆ ನಾನು ಬಂದು ಇದ್ದೇನೆ ಎಂಬ ಭಾವನೆ ಒಂದು ಕ್ಷಣವೂ ನನ್ನನ್ನು ಈ ವರೆಗೂ ಕಾಡಿಲ್ಲ. ನನ್ನ ಸ್ವದೇಶ ಸಿಂಗಾಪುರದಲ್ಲಿ ತುರ್ತು ಕೆಲ¸ವಿರುವ ಕಾರಣ ಕೆಲ ದಿನಗಳ ಮತ್ತೆ ವಾಪಸ್ ಹೋಗಿದ್ದೇನೆ. ಆದರೆ, ಬೆಂಗಳೂರನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ನನ್ನ ಭಾವನೆಗಳನ್ನು ಪದಗಳಾಗಿ ಹಂಚಿಕೊಂಡಿರುವೆ.

ನಿಮ್ಮನ್ನೇಗೆ ಮರೆಯಲಿ?
ಪ್ರಸ್ತುತ ಐಎಸ್‌ಬಿಆರ್ ಸಂಸ್ಥೆಯಲ್ಲಿ ಎಂಬಿಎ ಓದುತ್ತಿದ್ದು, ನನ್ನ ಕೋರ್ಸ್ ಡೈರಕ್ಟರ್ ಆಗಿರುವ ಡಾ. ನೀಲಾ ಚೊಟ್ಟೆö ಅವರ ಸಹಕಾರಕ್ಕೆ ನಾನಂದಿಗೂ ಕೃತಜ್ಞ. ನನ್ನ ಸಹಪಾಠಿಗಳ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಮೊದಲ ದಿನದಿಂದಲೇ ನಮ್ಮೆಲ್ಲರಲ್ಲಿ ಬಾಂಧವ್ಯ, ಗೌರವ ಮನೆ ಮಾಡಿದೆ. ಯಾರಿಗೂ ನಾನು ಅನ್ಯದೇಶದವ ಎಂಬ ಭಾವನೆಯಿಲ್ಲ. ಭಾರತೀಯರಲ್ಲಿ ಎಲ್ಲರನ್ನೂ ಪ್ರೀತಿಸುವ, ಒಪ್ಪಿಕೊಳ್ಳುವ ಗುಣ ನನಗಿಲ್ಲಿ ಅನುಭವವಾಯಿತು.

ಕರ್ತವ್ಯ-ಬಾಂಧವ್ಯ
ಕಳೆದ ಜುಲೈ ೧೨ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನನಗಾಗ ವಿಶೇಷ ಅನುಭವವನ್ನು ನಿಮಗೆಲ್ಲ ಹೇಳಲೇಬೇಕು. ನನ್ನೆಲ್ಲ ವಸ್ತು, ಬ್ಯಾಗ್‌ಗಳ ಚೆಕ್ಕಿಂಗ್ ನಂತರ ಕೊನೆಯಲ್ಲಿ ಅನುರಾಗ್ ಸಿಂಗ್ ಎಂಬ ಕಸ್ಟಮ್ ಅಧಿಕಾರಿ ನನ್ನ ಬ್ಯಾಗಿನಲ್ಲಿದ್ದ ಸ್ಕೂç ಡ್ರೆöÊವರ್ ಹೊರ ತೆಗೆಯಲು ಹೇಳಿದರು. ನಿಯಮಗಳ ಪ್ರಕಾರ ಇದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ಅದು ನನ್ನ ವಾಚಿನೊಂದಿಗೆ ಬಂದಿರುವ ಆಕ್ಸೆಸರಿ ಎಂಬುದನ್ನು ನನ್ನೊಂದಿಗೆ ಇದ್ದ ಬಿಲ್ ತೋರಿಸಿ ಮನವರಿಕೆ ಮಾಡಿಕೊಟ್ಟೆ. ಅದನ್ನು ಸಮಾಧಾನದಿಂದ ಕೇಳಿ, ತನ್ನ ಉನ್ನತ ಅಧಿಕಾರಿಗಳ ಜತೆ ನನ್ನ ಮನವಿ, ವಿಚಾರ ತಿಳಿಸಿದರು. ನಂತರ, ಇದರಿಂದ ಯಾವುದೇ ತೊಂದರೆ ಇಲ್ಲ ಎಂಬುದನ್ನು ನನ್ನ ಪರವಾಗಿ ಖಾತ್ರಿ ಪಡಿಸಿ, ಅದನ್ನು ನನ್ನ ಬ್ಯಾಗಿನಲ್ಲಿ ಕೊಂಡೊಯ್ಯಲು ಅನುಮತಿ ನೀಡಿದರು. ಅಧಿಕಾರಿಯೊಬ್ಬರ ಆ ಸಂಯಮ, ತಾಳ್ಮೆ, ನಗುನಗುತ್ತಲೇ ಮಾಡಿದ ಕರ್ತವ್ಯ ಪ್ರಜ್ಞೆ ನನ್ನನ್ನು ನಿಜಕ್ಕೂ ಪ್ರಭಾವಿಸಿದೆ. ಇಂತಹ ನೂರೆಂಟು ಉದಾಹರಣೆಗಳನ್ನು ಭಾರತೀಯರ ಬಗ್ಗೆ ನಾನು ನೀಡಬಲ್ಲೆ. ಅಂತ ಎಲ್ಲ ಸಪ್ರೇಮ ಮನಸ್ಸುಗಳಿಗೂ ನನ್ನ ಮನದಾಳದ ಧನ್ಯವಾದ.

ಪ್ರಯತ್ನಕ್ಕೆ ಸೋಲಿಲ್ಲ!
ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಭಾರತದಲ್ಲಿ ಅವಕಾಶಗಳ ಸಾಗರವೇ ಕಂಡಿತು. ಸಾಹಸಿಗರಿಗೆ, ಕನಸುಗಾರರಿಗೆ ಇಲ್ಲಿ ಸೋಲೇ ಆಗುವುದೇ ಇಲ್ಲ ಎಂಬ ನಂಬಿಕೆ ನನ್ನಲ್ಲಿ ಮೂಡಿದೆ. ಪ್ರಯತ್ನಿಸಿ ಹಿನ್ನಡೆ ಕಾಣಬಹುದೇ ಹೊರತು ಸೋತು ಸಣ್ಣಗಾಗುವ ಸಂದರ್ಭ ಅತಿ ಕಡಿಮೆ. ಭಾರತ ಸರಕಾರ, ರಾಜ್ಯ ಸರಕಾರಗಳು ಉದ್ಯಮ ಕ್ಷೇತ್ರಗಳಲ್ಲಿ ಹೊಸ ಹೊಸ ಚಿಂತನೆಗಳಿಗೆ, ಹೊಸ ಸಾಧ್ಯತೆಗಳಿಗೆ ತೆರೆದುಕೊಂಡಿರುವ ರೀತಿಯೇ ಅದ್ಭುತ. ಇದರಿಂದ ನಾನೂ ಪ್ರಭಾವಿತನಾಗಿದ್ದೇನೆ.

ಎರಡನೇ ಮನೆ!
ನಾನೊಬ್ಬ ಉದ್ಯಮಿಯಾಗಿಯೂ ಹೇಳುವುದಾದರೆ, ಭಾರತದಲ್ಲಿ ಅವಕಾಶಗಳಿವೆ. ನಿಯತ್ತಿನ ಜನರಿದ್ದಾರೆ. ಅತಿದೊಡ್ಡ ಯುವ ಸಮೂಹವಿದೆ. ಅತ್ಯುತ್ತಮ ಉದ್ಯೋಗಿಗಳಿದ್ದಾರೆ. ಇಲ್ಲಿ ಹೂಡಿಕೆಗೂ ಅವಕಾಶವಿದೆ. ಇದೆಲ್ಲವನ್ನು ಪರಿಗಣಿಸಿ ಹೇಳುವುದಾದರೆ ಭಾರತವು ನಿಜಕ್ಕೂ ಹೂಡಿಕೆದಾರರ ಸ್ವರ್ಗ. ನನ್ನ ಪದವಿ ನಂತರ ಭಾರತದೊಂದಿಗೆ ನನ್ನ ಬಾಂಧವ್ಯವನ್ನು ಮುಂದುವರಿಸುವ ಬಲವಾದ ಆಸೆ, ಬಯಕೆ ನನ್ನಲ್ಲಿ ಮೂಡಿದೆ. ಬರುವ ದಿನಗಳಲ್ಲಿ ಸಿಂಗಾಪುರದಲ್ಲಿರುವ ನನ್ನ ಉದ್ಯಮ ಫಿನ್‌ಟೆಕ್ ಕಂಪನಿಯನ್ನು ಭಾರತಕ್ಕೂ ವಿಸ್ತರಿಸಬಹುದು ಎಂಬ ಆಲೋಚನೆ ನನ್ನಲ್ಲಿ ಮೂಡಿದೆ. ಈ ಮೂಲಕ ಭಾರತದ ಜತೆಗಿನ ನಂಟನ್ನು ನಿರಂತರವಾಗಿ ಇರಿಸಿಕೊಳ್ಳುವ ಇರಾದೆ ನನ್ನದು. ಆಗ ಭಾರತವನ್ನು ನನ್ನ ಎರಡನೇ ಮನೆ, ಕುಟುಂಬ ಎಂದು ಹೆಮ್ಮೆ, ಪ್ರೀತಿಯಿಂದ ಹೇಳಿಕೊಳ್ಳುವ ಆಸೆ ನನ್ನದು.

ಧನ್ಯವಾದ ಕರ್ನಾಟಕ:
ದೇಶ, ಭಾಷೆ ಹೊಸದೆಂದು ಚಿಟಿಕೆ ಅಂಜಿಕೆಯಿಂದ ವಿದೇಶದಿಂದ ಬಂದ ನನಗೆ ಬೆಂಗಳೂರು ನನಗೆ ಅದಮ್ಯ ಪ್ರೀತಿ, ವಿಶ್ವಾಸ, ಭರವಸೆ, ಆತಿಥ್ಯ ನೀಡಿದೆ. ಭಾರತೀಯರ ಆಹಾರ ಪ್ರಿಯರು ಎಂದು ಕೇಳಿ ತಿಳಿದಿದ್ದೆ. ಈಗ ನಾನಂತೂ ಬೆಂಗಳೂರಿನ ಸ್ಟ್ರೀಟ್ ಫುಡ್ ರುಚಿಗೆ ಅಭಿಮಾನಿ ಆಗಿಬಿಟ್ಟಿದ್ದೇನೆ. ಸಿಂಗಾಪುರಕ್ಕೆ ಬಂದಾಗಿನಿAದ ಭಾರತ, ಅಲ್ಲಿನ ಜನ, ಸಂಸ್ಕೃತಿ, ಆಹಾರ, ಆತಿಥ್ಯದ ಬಗ್ಗೆ ನಮ್ಮವರಿಗೆಲ್ಲ ಹೇಳಿ ಅವರಲ್ಲೂ ಭಾರತದ ಬಗ್ಗೆ ಕುತೂಹಲ, ಅಭಿಮಾನ ಮೂಡಿದೆ. ನನ್ನ ಕುಟುಂಬ, ಆತ್ಮೀಯರೂ ಕೂಡ ಭಾರತ ಪ್ರವಾಸಕ್ಕೆ ಬರುವ ಇಂಗಿತ ಹೊಂದಿದ್ದಾರೆ.

ಇದರಲ್ಲಿ ನನ್ನದೇನೂ ಹೆಚ್ಚುಗಾರಿಕೆ ಖಂಡಿತ ಇಲ್ಲ, ಇದೆಲ್ಲವೂ ಭಾರತೀಯರು, ಕನ್ನಡಿಗರು ನೀಡಿರುವ ಪ್ರೀತಿಯ ಫಲವಷ್ಟೇ. ಶೀಘ್ರವೇ ಮತ್ತೆ ಬೆಂಗಳೂರಿಗೆ ಮರಳಿ, ನನ್ನ ಕಾಲೇಜಿಗೆ ಮರಳುವೆ, ಅಲ್ಲಿಯ ತನಕ, ಮಿಸ್ ಯು ಆಲ್.