ಬೇಟೆ
ಜಯವೀರ ವಿಕ್ರಮ ಸಂಪತ್ ಗೌಡ
ಕಳೆದ ಒಂದು ತಿಂಗಳಿನಿಂದ ಮನಸು ಹುಳಿಚಿಟ್ಟು ತಿಂದಂತಾಗಿದೆ. ಪತ್ರಿಕೆ, ಟಿವಿಗಳ ಅದೇ ಅದೇ ಸುದ್ದಿ. ಮೀಸಲಾತಿ ಬಗ್ಗೆಯೇ ಚರ್ಚೆ. ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂತೆ. ಪಂಚಮಸಾಲಿಗಳನು 2ಎ ಪ್ರವರ್ಗಕ್ಕೆ ಸೇರಿಸಬೇಕಂತೆ.
ಒಕ್ಕಲಿಗರಿಗೆ ಅಭಿವೃದ್ಧಿ ನಿಗಮ ಬೇಕಂತೆ. ಇದನ್ನು ಅನುಸರಿಸಿ ಇತರ ಜಾತಿಗಳು ಸಹ ತಮ್ಮನ್ನು ಇನ್ನಷ್ಟು ಹಿಂದಕ್ಕೆ ತಳ್ಳಿ ಎನ್ನುತ್ತಿವೆ ಮತ್ತು ತಮಗೂ ಮೀಸಲಾತಿ ನೀಡಬೇಕು ಎಂದು ಒಂದೇ ಸಮನೆ ವರಾತಕ್ಕೆ ಬಿದ್ದಿವೆ. ಈ ಎಲ್ಲಾ ಹಕ್ಕೊತ್ತಾಯಗಳನ್ನು ಮಂಡಿಸುತ್ತಿರುವವರು ಆಯಾ ಸಮುದಾಯಗಳ ಸ್ವಾಮೀಜಿಗಳು ಎಂಬುದು ಗಮನಾರ್ಹ. ಎಲ್ಲಾ ಸ್ವಾಮೀಜಿಗಳಿಗೂ ತಮ್ಮ
ತಮ್ಮ ಜಾತಿಗಳ ಹಿತರಕ್ಷಣೆ ಕಾಪಾಡುವುದಷ್ಟೇ ಜರೂರು ಇದ್ದಂತಿದೆ.
ಈ ಸ್ವಾಮೀಜಿಗಳೆ ನಿಜಕ್ಕೂ ದೇವಮಾನತ್ವ ಪಡೆದವರಾಗಿದ್ದರೆ, ಜಗತ್ತಿನಲ್ಲಿ ತಮ್ಮ ತಮ್ಮ ಜಾತಿ ಮಾತ್ರ ಇರಲಿ, ಉಳಿದವರೆ ಹಾಳಾಗಿ ಹೋಗಲಿ ಎಂದು ಅಂದುಕೊಳ್ಳುತ್ತಿದ್ದರೋ ಏನೋ? ಕಾರಣ ಈ ಎಲ್ಲಾ ಸ್ವಾಮೀಜಿಗಳಿಗೆ ತಮ್ಮ ಜಾತಿಯ ಹಿತ ಕಾಯುವುದಷ್ಟೇ ಮುಖ್ಯ. ಯಾರಿಗೂ ಸಮಗ್ರ ಅಥವಾ ಸಮಷ್ಠಿ ಪ್ರಜ್ಞೆಯೇ ಇಲ್ಲವ ಎಂದು ನನ್ನಂಥ ಹುಲುಮಾನವನಿಗೇ
ಅನಿಸುತ್ತಿದೆ.
ಸ್ವಾಮೀಜಿ ಎಂದು ಕರೆಯಿಸಿಕೊಳ್ಳುವವರು ನಮಗೆ ಹಾಕಿಕೊಡುವ ಸನ್ಮಾರ್ಗವಾ ಇದು? ಸ್ವಾಮೀಜಿಗಳಾದವರು ಇಡೀ ಜಗತ್ತನ್ನು ತಮ್ಮ ಮುಂದೆ ವಿಸ್ತರಿಸಿಕೊಳ್ಳಬೇಕು, ಅವರ ನೋಟ ಅಷ್ಟು ವಿಶಾಲವಾಗಿರಬೇಕು. ಅದಕ್ಕಾಗಿಯೇ ಅವರನ್ನು ‘ಜಗದ್ಗುರುಗಳು’
ಎಂದು ಕರೆಯುವುದು. ಅವರು ಕೇವಲ ತಮ್ಮ ಜಾತಿಗಷ್ಟೇ ಸ್ವಾಮೀಜಿಗಳಲ್ಲ. ಅವರು ಇಡೀ ಜಗತ್ತಿಗೆ ಸ್ವಾಮೀಜಿಗಳು. ಆದರೆ ಕೆಲವು ಸ್ವಾಮೀಜಿಗಳನ್ನು ನೋಡಿದರೆ, ಅವರು ತಮ್ಮ ಜಾತಿಯನ್ನೇ ಜಗತ್ತು ಎಂದು ಭಾವಿಸಿದಂತಿದೆ.
ಬೇರೆ ಜಾತಿಯವರು ಏನಾದರೂ ಆಗಲಿ, ನಮ್ಮ ಜಾತಿಯವರು ಮಾತ್ರ ಉದ್ಧಾರವಾಗಬೇಕು ಎಂಬುದು ಅವರ ಧೋರಣೆ
ಇದ್ದಂತಿದೆ. ಎಲ್ಲಾ ಜಾತಿಗಳ ಸ್ವಾಮೀಜಿಗಳು ತಮ್ಮ ತಮ್ಮ ಜಾತಿಗಳಿಗೆ ಬೇಲಿ ಹಾಕಿಕೊಂಡು ಅದೇ ತಮ್ಮ ಜಹಗೀರು ಎಂದು ಭಾವಿಸಿದಂತಿದೆ. ಅವರಿಗೆ ಮನುಷ್ಯ, ಮನುಷ್ಯತ್ವ, ಮಾನವ ಜನಾಂಗ, ಸಮಷ್ಠಿ ..ಇವ್ಯಾವವೂ ಮುಖ್ಯವಲ್ಲ. ಅವರಿಗೆ ತಮ್ಮ ಜಾತಿಯ ಜನರಷ್ಟೇ ಮುಖ್ಯ. ಅವರ ಅಸ್ತಿತ್ವ ಅವರು ಮನುಷ್ಯರು ಎಂಬ ಕಾರಣಕ್ಕಾಗಿ ಅಲ್ಲ. ಅವರು ಆಯಾ ಜಾತಿಯವರು ಎಂಬ ಕಾರಣಕ್ಕಾಗಿ.
ಹೀಗಾಗಿ ಇವರಿಗೆ ಮನುಷ್ಯರಿಗಿಂತ ಅವರ ಜಾತಿಯೇ ಮುಖ್ಯ. ಈ ಕಾರಣದಿಂದ ಇವರೆಲ್ಲ ತಮ್ಮ ಜಾತಿಯನ್ನು ಇನ್ನಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿ, ತಮ್ಮ ಜಾತಿಗೆ ಇನ್ನಷ್ಟು ಮೀಸಲಾತಿ ಕೊಡಿ ಎಂದು ಬೀದಿಗೆ ಬಿದ್ದು ಹೋರಾಡುತ್ತಿದ್ದಾರೆ. ಇಲ್ಲಿಯ ತನಕ ಮೀಸಲಾತಿಗಾಗಿ ರಾಜಕಾರಣಿಗಳು, ಆಯಾ ಸಮಾಜದ ಮುಖಂಡರು ಹೋರಾಡುತ್ತಿದ್ದರು. ಸ್ವಾಮೀಜಿಗಳು ಇಂಥ ಹೋರಾಟಗಳಿಂದ ದೂರವೇ ಉಳಿಯುತ್ತಿದ್ದರು. ಈಗ ಸ್ವಾಮೀಜಿಗಳೇ ಅದರ ನೇತೃತ್ವ ವಹಿಸಿರುವುದು, ರಾಜಕಾರಣಿಗಳನ್ನು ಸಹ ಮೂಕವಿಸ್ಮಿತಗೊಳಿಸಿದೆ. ಜಾತಿಯೇ ಪ್ರಧಾನ ಮತ್ತು ಬಂಡವಾಳವಾಗುವ ಸಮಾಜದಲ್ಲಿ ಮನುಷ್ಯತ್ವಕ್ಕಿಂತ ಜಾತಿ ಯತ್ವವೇ ವಿಜೃಂಭಿಸುತ್ತದೆ. ಆಗ ನಮ್ಮ ಪಕ್ಕದಲ್ಲಿದ್ದವನು ಮನುಷ್ಯನಾ, ಅಂತಃಕರಣ ಹೊಂದಿರುವವನಾ ಎಂಬುದಕ್ಕಿಂತ, ಆತ ಯಾವ ಜಾತಿಯವನು ಎಂಬುದಷ್ಟೇ ಮುಖ್ಯವಾಗುತ್ತದೆ.
ಆಗ ನಾವು ಮನುಷ್ಯರನ್ನು ಪ್ರೀತಿಸುವುದಿಲ್ಲ. ಅವನ ಜಾತಿಯನ್ನು ಪ್ರೀತಿಸಲಾರಂಭಿಸುತ್ತೇವೆ. ಬೇರೆಯವರಿಗೇನಾದರೇನು, ನನ್ನ ಜಾತಿಯವನು ಮಾತ್ರ ಕ್ಷೇಮವಾಗಿರಲಿ ಎಂಬ ರಾಕ್ಷಸ ಭಾವ ಹೆಡೆಯಾಡುತ್ತಿರುತ್ತದೆ. ಈಗ ಆಗುತ್ತಿರುವುದು ಅದೇ ಅಲ್ಲವೇ? ಅಲ್ಲ ಎಂದು ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿರುವ ಸ್ವಾಮೀಜಿಗಳು ಹೇಳಲಿ ನೋಡೋಣ. ಈ ಸ್ವಾಮೀಜಿಗಳಿಗೆ ಗೊತ್ತಿಲ್ಲದ
ಒಂದು ಸಂಗತಿಯೇನೆಂದರೆ, ಇಡೀ ರಾಜ್ಯ ಇವರನ್ನು ನೋಡಿ ನಗುತ್ತಿದೆಯೆಂದು, ಲೇವಡಿ ಮಾಡುತ್ತಿದೆಯೆಂದು.
ಇವರ ಜಾತಿಯ ಕೆಲವರು ಅವರನ್ನು ಮೆಚ್ಚಿಕೊಳ್ಳಬಹುದು. ಆದರೆ ಅವರ ಜಾತಿಯಲ್ಲಿರುವ ಹೆಚ್ಚಿನವರೇ ಈ ಹೋರಾಟವನ್ನು
ಇಷ್ಟಪಟ್ಟಿಲ್ಲ. ಈ ಜಾತಿ ಮತ್ತು ಮೀಸಲಾತಿ, ಜನಸಾಮಾನ್ಯನಿಗಿಂತ ಸ್ವಾಮೀಜಿಗಳಿಗೇ ಹೆಚ್ಚು ಅನಿವಾರ್ಯ ಅಗತ್ಯವಾಗಿದೆ. ಅವರಿಗೆ ತಮ್ಮ ಜಾತಿಯ ಜನರನ್ನು ಉದ್ಧಾರ ಮಾಡುತ್ತಿರುವವರು ತಾವೇ, ತಮ್ಮಿಂದಾಗಿಯೇ ನೀವು (ಜಾತಿಯವರು) ಉದ್ಧಾರ ವಾಗುತ್ತಿದ್ದೀರಿ ಎಂದು ಬಿಂಬಿಸಿಕೊಳ್ಳುವ ಅಗತ್ಯ ಹೆಚ್ಚಿರುತ್ತದೆ. ಹೀಗಾಗಿ ಈ ಸ್ವಾಮೀಜಿಗಳು ರಾಜಕಾರಣಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಜಾತಿಯವರ ಸುತ್ತ ಗೋಡೆ ಕಟ್ಟಿ, ಜಾತಿ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರೆ.
ನನಗೆ ತೀರಾ ಅಚ್ಚರಿ ಅನಿಸಿದ್ದು ಏನು ಗೊತ್ತಾ, ಇಡೀ ರಾಜ್ಯದಲ್ಲಿ ಕೆಲವೇ ಕೆಲವು ಸ್ವಾಮೀಜಿಗಳು ಸೇರಿಕೊಂಡು ನಮಗೆ ಮೀಸಲಾತಿ ಕೊಡಿ ಎಂದು ಆಗ್ರಹಿಸುತ್ತಿರುವುದು. ಇದನ್ನು ನೋಡಿ ಬೇರೆಯವರು ಏನೆಂದುಕೊಳ್ಳಬಹುದು ಎಂಬುದನ್ನು ಸಹ ಇವರು ಯೋಚಿಸಲಿಲ್ಲವ. ಸ್ವಾಮೀಜಿಗಳೇ ಬೀದಿಗಿಳಿದು ತಮ್ಮ ಜಾತಿಯನ್ನು ಆ ಪಂಗಡಕ್ಕೆ ಸೇರಿಸಿ, ಈ ಪಂಗಡಕ್ಕೆ ಸೇರಿಸಿ ಎಂದು
ಒತ್ತಾಯಿಸುವುದು ಅಥವಾ ಮೀಸಲಾತಿ ಕೊಡಿ ಎಂದು ಆಗ್ರಹಿಸುವುದರಿಂದ, ಬೇರೆ ಜಾತಿಯ ಸ್ವಾಮೀಜಿಗಳಿಗೂ ಕುಮ್ಮಕ್ಕು ನೀಡಿದಂತಾಗಲಿಲ್ಲವೇ? ಈಗ ಅವರೂ ಸುಮ್ಮನಿರಬಾರದು.
ಕಾರಣ, ಅವರು ಸುಮ್ಮನಿದ್ದರೆ, ಅವರ ಜಾತಿ ಬಾಂಧವರು ತಮ್ಮ ಸ್ವಾಮೀಜಿ ತಮ್ಮ ಜಾತಿಗಾಗಿ ಏನೂ ಮಾಡುತ್ತಿಲ್ಲ ಎಂಬ ಭಾವನೆ ಮೂಡದೇ ಇರದು. ಇದು ಮುಂದುವರಿದು ಎಲ್ಲಾ ಜಾತಿಯವರೂ ನಮಗೆ ಮೀಸಲಾತಿ ಕೊಡಿ, ಮೀಸಲಾತಿ ಪ್ರಮಾಣ ಜಾಸ್ತಿ ಮಾಡಿ ಎಂದು ಒತ್ತಾಯ ಮಾಡಲು ಶುರು ಇಟ್ಟುಕೊಂಡರೆ, ಈ ರಗಳೆ ಎಲ್ಲಿಗೆ ಹೋಗಬಹುದು? ಇದಕ್ಕೆ ಒಂದು ಅಂತ್ಯ ಎಂಬುದೇ ಇಲ್ಲ.
ಇದರಿಂದ ಯಾರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಎಲ್ಲರಿಗೂ ಮೀಸಲಾತಿ ಕೊಡಬೇಕು ಅಂದ್ರೆ ಅದು ಅಸಲಿ
ಮೀಸಲಾತಿ ಆಶಯಕ್ಕೆ ಕೊಡಲಿಯೇಟು ಕೊಟ್ಟಂತೆ. ಈಗ ಆಗುತ್ತಿರುವುದೇ ಅದು. ಅಂಬೇಡ್ಕರ್ ಅವರು ಆರಂಭದಲ್ಲಿಯೇ ಹೇಳಿದ್ದರು. ಯಾವ ಕಾರಣಕ್ಕೂ ಮೀಸಲಾತಿ ಸೌಲಭ್ಯವನ್ನು ಹದಿನೈದು ವರ್ಷಗಳಿಗಿಂತ ಹೆಚ್ಚು ವರ್ಷ ಅವಧಿಗೆ ವಿಸ್ತರಿಸ ಬಾರದು ಎಂದು. ಆದರೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದವು.
ಮೀಸಲಾತಿ ಪ್ರಮಾಣ ಜಾಸ್ತಿಯಾಗುತ್ತಲೇ ಇದೆ. ಈಗಿನ ಮನಸ್ಥಿತಿಯನ್ನು ನೋಡಿದರೆ, ಇನ್ನು ನೂರು ವರ್ಷ ಬಂದರೂ ಮೀಸಲಾತಿಯಂತೂ ತೊಲಗುವುದಿಲ್ಲ. ಮೀಸಲಾತಿ ತಮ್ಮ ಜನ್ಮಸಿದ್ಧ ಹಕ್ಕು ಎಂಬುದೇ ಎಲ್ಲರ ಅಭಿಪ್ರಾಯವಾಗಿದೆ. ಇದರಿಂದ ಯಾರು ನಿಜಕ್ಕೂ ಮೀಸಲಾತಿಗೆ ಅರ್ಹರೋ, ಅವರಿಗೆ ಅನ್ಯಾಯ ಮಾಡಿದಂತೆ. ಸಮಾಜದ ಎಲ್ಲರಿಗೂ ಕೊಡುವುದಾದರೆ ಅದಕ್ಕೆ ಮೀಸಲಾತಿ ಎನ್ನುವುದಿಲ್ಲ. ಅದು ಜಾತಿ ಭಕ್ಷೀಸು!
ಎಲ್ಲಾ ಜಾತಿಗಳು ತಮಗೂ ಕೊಡಿ ಎಂದು ಹಠ ಹಿಡಿದರೆ, ಇಡೀ ಸಮಾಜವನ್ನು ಜಾತಿಯ ಆಧಾರದ ಮೇಲೆ ಚೂರು ಚೂರು ಮಾಡಿದಂತೆ. ಮೀಸಲಾತಿ ಆಧಾರದ ಮೇಲೆ ಕಟ್ಟಿದ ಸಮಾಜ ಸದೃಢವಾಗಲು ಸಾಧ್ಯವಿಲ್ಲ. ಯಾವ ಸಮಾಜದಲ್ಲಿ ಜಾತಿಯೇ ಮುಖ್ಯ ಪರಿಗಣನೆ ಆಗುವುದಾದರೆ, ಅಲ್ಲಿ ಅರ್ಹತೆ, ಯೋಗ್ಯತೆ ಅಥವಾ ಸಾಮರ್ಥ್ಯಕ್ಕೆ ಏನು ಬೆಲೆ ಕೊಟ್ಟಂತಾಯಿತು? ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಜಾತಿ ಆಧಾರಿತ ಮೀಸಲಾತಿ ಪಡೆದವರು ವ್ಯಾಪಿಸಿಕೊಂಡರೆ, ಆ ಸಮಾಜ ಶಿಥಿಲವಾಗಲು ಹೆಚ್ಚು ಸಮಯ ಬೇಕಾಗಿಲ್ಲ.
ಒಂದು ಕಟ್ಟಡ, ಅಣೆಕಟ್ಟನ್ನು ಅರ್ಹತೆ ಇದ್ದವನು ಕಟ್ಟುವುದಕ್ಕೂ, ಜಾತಿಯ ಪರಿಗಣನೆಯಿಂದ ಆಯ್ಕೆಯಾದವನು ಕಟ್ಟುವು ದಕ್ಕೂ ತುಂಬಾ ವ್ಯತ್ಯಾಸವಿದೆ. ದಿನದಿಂದ ದಿನಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡುತ್ತಾ ಹೋದರೆ, ಅರ್ಹತೆಯಿರು ವವರು ಮೂಲೆಗುಂಪಾಗುತ್ತಾರೆ. ಜಾತಿಬಲದಿಂದ ಅರ್ಹತೆ ಗಿಟ್ಟಿಸಿಕೊಂಡವರು ವಿಜೃಂಭಿಸುತ್ತಾರೆ. ಇದು ಯಾವ ಸಮಾಜಕ್ಕೂ ಭೂಷಣವಲ್ಲ. ಪ್ರಾಯಶಃ ಜಗತ್ತಿನ ಯಾವ ದೇಶವನ್ನೂ ಜಾತಿಯ ಆಧಾರದಿಂದ ಕಟ್ಟಿದ ನಿದರ್ಶನಗಳಿಲ್ಲ. ಎಲ್ಲಾ ಜಾತಿ ಗಳಲ್ಲೂ ಅರ್ಹರಾದವರು ಇದ್ದಾರೆ.
ಅಂಥವರನ್ನು ಆಯ್ಕೆ ಮಾಡಲಿ. ಆದರೆ ಜಾತಿಯೇ ಅರ್ಹತೆಯಾಗುವುದು ಅಪಾಯಕಾರಿ. ಇದರಿಂದ ನಿಜವಾದ talentನ್ನು ಧಿಕ್ಕರಿಸಿದಂತೆ. ಕೆಳಗಿದ್ದವರನ್ನು ಎತ್ತಲೇಬೇಕು. ಅವರನ್ನು ಮುಖ್ಯವಾಹಿನಿಗೆ ತರಲೇಬೇಕು. ಆದರೆ ಅವರನ್ನು ಮೇಲೆಕ್ಕೆತ್ತುವ ಭರದಲ್ಲಿ ಉಳಿದವರನ್ನು ಚೆಂಡು ಹಿಡಿದು ನೂಕಬಾರದು. ಈಗ ಅದೇ ಆಗುತ್ತಿದೆ. ಇದರಿಂದ ಕೆಲವು ಜಾತಿಗಳಿಗೆ ಅನುಕೂಲ
ವಾಗಬಹುದು. ಆದರೆ ಒಟ್ಟಾರೆ ದೇಶಕ್ಕೆ ಮಾತ್ರ ಮಾರಕ.
ಸ್ವಾಮೀಜಿಗಳಾದವರು ಮನುಷ್ಯರನ್ನು ಪ್ರೀತಿಸುವುದನ್ನು ಹೇಳಿಕೊಡಬೇಕೆ ಹೊರತು, ಜಾತಿಯನ್ನು ಪ್ರೀತಿಸಿ ಎಂದು
ಹೇಳುವುದಲ್ಲ. ಹೇಳಲೂಬಾರದು. ಹಾಗೆ ಹೇಳುವ ಅನಿವಾರ್ಯ ಬಂದರೆ, ಅವರು ಕಾವಿ ಬಟ್ಟೆಯನ್ನು ಕಳಚಿಟ್ಟು, ಖಾದಿ ಯನ್ನು ಧರಿಸುವುದು ಲೇಸು. ಸರ್ವಸಂಗ ಪರಿತ್ಯಾಗಿಗಳಾದ ಸನ್ಯಾಸಿಗಳು ಅಥವಾ ಸ್ವಾಮೀಜಿಗಳು ಜಾತಿಯ ಗಂಟನ್ನೇಕೆ ಹೊತ್ತು ತಿರುಗಬೇಕು? ಜಾತಿಯನ್ನು ಬಿಡಲಾಗದಷ್ಟು ದುರ್ಬಲರಾದರೆ, ಅವರು ಸರ್ವಸಂಗ ಪರಿತ್ಯಾಗಿಗಳಲ್ಲ ಎಂದಂತಾಯಿತು.
ಸ್ವಾಮಿಗಳಾದವರು ಎಲ್ಲರನ್ನೂ ಒಂದೇ ಭಾವದಿಂದ ನೋಡಬೇಕು. ಅದು ಸನ್ಯಾಸದ ಮೂಲ ಲಕ್ಷಣ. ಜಾತಿ ನೋಡಿ ತಮ್ಮ
ಧೋರಣೆಗಳನ್ನು ಬದಲಿಸಿಕೊಳ್ಳುವ ಸ್ವಾಮೀಜಿಗಳು ತಮ್ಮ ಪೀಠ, ಸನ್ಯಾಸ ಧರ್ಮ, ಆಶಯದ ವಿರುದ್ಧ ಇದ್ದಂತೆ. ಹೀಗಾಗಿ ನಮಗೆ ಮೀಸಲಾತಿ ಕೊಡಿ ಎಂದು ಬೀದಿಗಿಳಿದು ಹೋರಾಡುವ ಸ್ವಾಮೀಜಿಗಳಿಗಿಂತ, ನಮಗೆ ಮೀಸಲಾತಿ ಬೇಡ ಎಂದು ಹೇಳುವ ಸ್ವಾಮೀಜಿಗಳು ಹೆಚ್ಚು ಆಪ್ತರಾಗುತ್ತಾರೆ. ನಮ್ಮ ಜಾತಿ ನೋಡಿ ಮೀಸಲಾತಿ ಕೊಡಬೇಡಿ, ನಮಗೆ ಅದರ ಹಂಗಿಲ್ಲ ಎಂದು ಹೇಳುವವರು ಹೆಚ್ಚು ಮಾನವಂತರಂತೆ ಕಾಣುತ್ತಾರೆ.
ಜಾತಿಯ ಅರ್ಹತೆಗಿಂತ, ಅರ್ಹತೆಯೇ ಜಾತಿ ಎಂದು ಹೇಳುವವರು ಹೆಚ್ಚು ವಿವೇಕವಂತರಂತೆ ತೋರುತ್ತಾರೆ. ಮೀಸಲಾತಿಗೆ
ಕೊನೆಯೇನೆಂಬುದು ಇಲ್ಲ. ಆ ಸೌಲಭ್ಯವನ್ನು ಎಷ್ಟೇ ವರ್ಷ ನೀಡಿದರೂ, ತೃಪ್ತಿ ಆಯಿತು ಎಂಬುದಿಲ್ಲ. ಅಧಿಕಾರದಲ್ಲಿರುವ ರಾಜಕಾರಣಿಗಳು ವೋಟಿನ ಆಸೆಗಾಗಿ ಆ ಸೌಲಭ್ಯವನ್ನು ಮುಂದುವರಿಸುತ್ತಲೇ ಹೋಗುತ್ತಾರೆ. ಹೀಗಾಗಿ ನಮಗೆ ಎಂಥ ಸ್ವಾಮೀಜಿ ಗಳ ಅವಶ್ಯಕತೆಯಿದೆಯೆಂದರೆ, ಅವರು ತಮಗೆ ಮೀಸಲಾತಿ ಬೇಡ ಎಂದು ಘಂಟಾಘೋಷವಾಗಿ ಹೇಳುವ ಎದೆಗಾರಿಕೆಯನ್ನು ಪ್ರದರ್ಶಿಸಬೇಕಿದೆ.
ಎಲ್ಲರೂ ತಮ್ಮ ಜಾತಿಗೆ ಮೀಸಲಾತಿ ಬೇಕು ಎಂದು ಹೇಳುವವರೇ. ಆದರೆ ನಮಗೆ ಮೀಸಲಾತಿ ಬೇಡ ಎಂದು ಹೇಳುವವರು ಯಾರಿದ್ದಾರೆ? ಇಂದು ಬಸವಣ್ಣನವರೆನಾದರೂ ಬದುಕಿದ್ದಿದ್ದರೆ, ಅವರು ಮೀಸಲಾತಿ ವಿರುದ್ಧ ಸಮರ ಸಾರುತ್ತಿದ್ದರು. ಅಷ್ಟಕ್ಕೂ
ಅವರು ಜಾತಿ, ವರ್ಗ ಆಧಾರಿತ ಸಮಾಜ ರಚನೆಯ ವಿರುದ್ಧ ಹೋರಾಡಿದವರು. ಈ ಸಮಾಜವನ್ನು ವಿಘಟಿಸಲು ಜಾತಿಯಂಥ ವಿಷಕಾರಿ ಜಂತು ಮತ್ತೊಂದಿಲ್ಲ ಎಂದು ಅವರು ನಂಬಿದ್ದರು. ತಮ್ಮ ವಚನಗಳ ಮೂಲಕ ವರ್ಗರಹಿತ, ಜಾತಿರಹಿತ ಸಮಾಜ ಕಟ್ಟಲು ಅವರು ಅಹರ್ನಿಶಿ ಶ್ರಮಿಸಿದರು.
ಜಾತಿ ನಿರ್ಮೂಲನೆಗೆ ಬಸವಣ್ಣನವರ ಸೂತ್ರಕ್ಕಿಂತ ಪರಿಣಾಮಕಾರಿಯಾದ ಮಾರ್ಗ ಮತ್ತೊಂದಿಲ್ಲ. ಈಗ ನಡೆಯುತ್ತಿರುವ ಮೀಸಲು ಹೋರಾಟ ನೋಡಿ ಅವರು ಮಮ್ಮಲ ಮರುಗುತ್ತಿದ್ದರು. ಹಾಗಾದರೆ ನನ್ನ ಸಿದ್ಧಾಂತ, ವಿಚಾರ, ತತ್ತ್ವಗಳಿಂದ ಯಾರೂ ಪ್ರಭಾವಿತರಾಗಲಿಲ್ಲವ ಎಂದು ಹಣೆ ಹಣೆ ಚಚ್ಚಿಕೊಳುತ್ತಿದ್ದರು. ಜಾತಿ ಆಧಾರಿತ ಮೀಸಲಾತಿ ಎನ್ನುವುದು ಬಸವ ತತ್ತ್ವಕ್ಕೇ
ವಿರುದ್ಧವಾದುದು. ನಮ್ಮ ಸಮಾಜದ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನಾವು ಮೀಸಲಾತಿ ಕೇಳುತ್ತಿದ್ದೇವೆ ಎಂದು ಸ್ವಾಮೀಜಿಗಳು ಹೇಳುತ್ತಿರುವುದು ಶುದ್ಧ ಹಾಸ್ಯಾಸ್ಪದ.
ಹಾಗಾದರೆ ಇವರು ತಮ್ಮ ಜಾತಿಯ ಮುಂದಿನ ಮಕ್ಕಳಿಗೆ ಬಸವತತ್ವ ಪಾಲಿಸಬೇಡಿ ಎಂದು ಪರೋಕ್ಷವಾಗಿ ಹೇಳಿದಂತೆ
ಆಗ ಲಿಲ್ಲವೇ? ನಮಗೆ ಮೀಸಲು ಕೊಡಿ ಎಂದು ಆಗ್ರಹಿಸುತ್ತಾ ಘೋಷಣೆ ಕೂಗುವಾಗ, ನಾನು ಅರ್ಹತೆಯಿರುವ ಬೇರೊಬ್ಬನ ಅನ್ನಕ್ಕೆ ಕಲ್ಲು ಹಾಕುತ್ತಿದ್ದೇನೆ ಎಂದು ನಮ್ಮ ಒಳ ಅಂತರಂಗ ಚೀರದೇ ಹೋಗುವುದಿಲ್ಲ. ಹೀಗಾಗಿ ನಮಗೆ ಮೀಸಲಾತಿ ಬೇಡ ಎಂದು ತಮ್ಮ ಜಾತಿ, ಸಮುದಾಯಕ್ಕೆ ಧೈರ್ಯ ಹೇಳುವ, ಸ್ವಾಭಿಮಾನ ಬೋಧಿಸುವ, ಸಮಾನತೆ ಸಾರುವ ಸ್ವಾಮೀಜಿ ನಮಗೆ ಬೇಕಾಗಿದ್ದಾರೆ. ಅಂಥ ಸ್ವಾಮೀಜಿಗಳು ಇದ್ದರೆ ದಯವಿಟ್ಟು ಅವರು ಕೈಯೆತ್ತುವ ಕೃಪೆ ಮಾಡಬೇಕು !