ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ಮೀಸಲಾತಿಯ ಕೂಗು. ಮಠಾಧೀಶರೆಲ್ಲ ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸ ಬೇಕೆಂದು ಮೀಸಲು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದೆಡೆ ಕಾಗಿನೆಲೆಯಿಂದ ಬೆಂಗಳೂರಿಗೆ ಕುರುಬ ಸಮುದಾಯದ ಪ್ರಮುಖ ಮಠಾಧೀಶರು ಪಾದಯಾತ್ರೆ ಮಾಡಿದರೆ, ಇನ್ನೊಂದೆಡೆ ಕೂಡಲ ಸಂಗಮದಿಂದ ಬಸವಜಯಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿಗೆ 2ಎ ಮಾನ್ಯತೆ ನೀಡಬೇಕು ಎನ್ನುವ ಹೋರಾಟ ನಡೆಯುತ್ತಿದೆ.
ಆದರೆ ಈ ಎಲ್ಲ ಬೇಡಿಕೆಗಳು ಈಡೇರಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಬಹುತೇಕರಲ್ಲಿಲ್ಲ. ತಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆ ಸಮುದಾಯದ ಸ್ವಾಮೀಜಿಗಳು, ಅನುಯಾಯಿಗಳು, ರಾಜಕೀಯ ಮುಖಂಡರು ಕೇಳುವುದು ಅವರವರ ನೇರಕ್ಕೆ ಸರಿಯಾಗಿಯೇ ಕಾಣಿಸುತ್ತದೆ. ಆದರೆ ಹೀಗೆ ಎಲ್ಲರಿಗೂ ಮೀಸಲಾತಿ ನೀಡುತ್ತಾ ಹೋದರೆ, ಸಮಗ್ರ ರಾಜ್ಯಕ್ಕಾಗುವ ಲಾಭ-ನಷ್ಟದ ಬಗ್ಗೆ ಬಹುತೇಕರು ಚಿಂತಿಸುತ್ತಿಲ್ಲ.
ಕೆಲ ತಿಂಗಳಿನಿಂದ ಪ್ರಮುಖವಾಗಿ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ, ಪಂಚಮಸಾಲಿಗಳನ್ನು 2ಎಗೆ ಸೇರಿಸಬೇಕು ಎನ್ನುವ ಒತ್ತಡ ಕೇಳಿಬಂದಿದೆ. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2008ರಲ್ಲಿ ಈ ಸ್ಥಾನದಲ್ಲಿ ಕೂತಿದ್ದಾಗಲೂ, ಲಿಂಗಾಯತ ಸಮುದಾಯದಿಂದ ಮೀಸಲಾತಿಯ ಕೂಗು ಕೇಳಿಬಂದಿತ್ತು. ಈ ಅವಧಿಯಲ್ಲಿ ಕುಲಶಾಸ್ತ್ರ ಸೇರಿದಂತೆ ಮೀಸಲು ಜಾರಿಗೆ ಅಗತ್ಯವಿರುವ ಎಲ್ಲ ತಯಾರಿಯನ್ನು ಯಡಿಯೂರಪ್ಪ ಮಾಡಿಕೊಂಡಿದ್ದರು.
ಆದರೆ ಆ ವೇಳೆಗೆ ಅಕ್ರಮ ಗಣಿಗಾರಿಕೆ ಹಾಗೂ ಡಿನೋಟಿಫಿಕೇಷನ್ ಹಗರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದರಿಂದ
ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಬಳಿಕ 2012ರಲ್ಲಿ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್ ಅವರು ವರದಿಯನ್ನು ಸಂಪುಟ ಸಭೆಯಲ್ಲಿ ಕೈಗೆತ್ತಿಕೊಂಡು ಲಿಂಗಾಯತ ಸಮುದಾಯದ ವಿವಿಧ ಉಪ ಪಂಗಡಗಳಿಗೆ 2ಎ ಮೀಸಲು ನೀಡಿದರು. ಆದರೆ ಈ ವೇಳೆ, ಪಂಚಮಸಾಲಿ ಲಿಂಗಾಯತರಿಗೆ ಮೀಸಲನ್ನು ನೀಡಲಿಲ್ಲ. ಇದಾದ ಬಳಿಕ ವಿವಿಧ ಹಂತದಲ್ಲಿ ಮೀಸಲಾತಿಗೆ ಹೋರಾಟಗಳು ನಡೆದರೂ, ಅದ್ಯಾವುದೂ ಈ ಮಟ್ಟಿಗೆ ನಡೆದಿರಲಿಲ್ಲ.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ವಾಲ್ಮೀಕಿ ಸಮುದಾಯ, ಕುರುಬ ಸಮುದಾಯ ಹಾಗೂ ಪಂಚಮಸಾಲಿ 2ಎ ಮೀಸಲಿಗೆ ಒತ್ತಡಗಳು ಬಂದಿದ್ದವು. ಆದರೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಕೂಗು ಕೇಳಿ ಬಂದಿದ್ದ ರಿಂದ, ಈ ವಿಷಯಗಳು ಅಲ್ಲಿಯೇ ನಿಂತಿದ್ದವು. ಪ್ರತ್ಯೇಕ ಲಿಂಗಾಯತ ಹೋರಾಟವನ್ನು ಸಿದ್ದರಾಮಯ್ಯ ಸರಕಾರದ ಕೆಲ ಸಚಿವರೇ ಪರ ವಿರೋಧಿಸಿಕೊಂಡು ಕಿತ್ತಾಡಿಕೊಂಡಿದ್ದರು. ಪ್ರತ್ಯೇಕ ಧರ್ಮದ ಶಿಫಾರಸನ್ನು ಕಾಂಗ್ರೆಸ್ ಸರಕಾರ ಮಾಡಿದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಆದರೆ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಹಿನ್ನಡೆಗೆ ಪ್ರತ್ಯೇಕ ಧರ್ಮದ ವಿಷಯವೂ ಪ್ರಮುಖವಾಯಿತು. ಕೇವಲ
ಪ್ರತ್ಯೇಕ ಲಿಂಗಾಯತ ಧರ್ಮ ಮಾತ್ರವಲ್ಲದೇ, ಎಸ್‌ಸಿ, ಎಸ್ ಟಿಯಲ್ಲಿ ಒಳ ಮೀಸಲಾತಿ ಬಗ್ಗೆಯೂ ನಡೆದ ಬೆಳವಣಿಗೆ ಚುನಾವಣೆ ಯಲ್ಲಿ ಹಿನ್ನಡೆಗೆ ಕಾರಣವಾಗಿತ್ತು. ಹಾಗೆ ನೋಡಿದರೆ, ಮೀಸಲು ಘೋಷಣೆಯಾಗಲಿ, ಪ್ರತ್ಯೇಕ ಧರ್ಮದ ಬಗ್ಗೆ ಕೂಗಾಗಲಿ ಸಾಮಾನ್ಯವಾಗಿ ಏಳುವುದು ಚುನಾವಣಾ ಸಮಯದಲ್ಲಿ. ಒಂದು ಸಮುದಾಯದ ಮತಗಳನ್ನು sweep ಮಾಡುವ ಉದ್ದೇಶ
ದಿಂದ ಈ ರೀತಿಯ ಕೂಗುಗಳು ಕೇಳಿಬರುತ್ತವೆ.
ಆದರೆ ಇದೀಗ ಎದ್ದಿರುವ ಮೀಸಲಾತಿಯ ಕೂಗನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ
ಚುನಾವಣೆ ಬಿಟ್ಟರೆ ಮುಂದಿನ ಎರಡು ವರ್ಷಗಳ ಕಾಲ ಯಾವುದೇ ದೊಡ್ಡ ಪ್ರಮಾಣದ ಚುನಾವಣೆ ರಾಜ್ಯದಲ್ಲಿಲ್ಲ. ಇನ್ನು ಮೂರು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆ ಇದೆಯಾದರೂ, ಆ ಉಪಚುನಾವಣೆಗಳಿಗಾಗಿಯೇ ಈ ಮೀಸಲು ಹೋರಾಟ ಆರಂಭ ವಾಗಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಆರಂಭದಲ್ಲಿ ಯಡಿಯೂರಪ್ಪ ಸಂಪುಟದ ಸಚಿವರಾಗಿರುವ ಶ್ರೀರಾಮುಲು ಅವರು, ವಾಲ್ಮೀಕಿ ಸಮುದಾಯಕ್ಕೆ ಮೀಸಲು ಹೆಚ್ಚಿಸಲೇಬೇಕು ಎನ್ನುವ ಮಾತನ್ನು ಹರಿ ಬಿಟ್ಟರು.
ಇದಾದ ಬಳಿಕ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ಅತ್ಯಗತ್ಯ ಎಂದು ಬಹಿರಂಗವಾಗಿಯೇ ಹೇಳಿ, ಇದಕ್ಕೆ
ಪೂರಕವಾದ ವೇದಿಕೆಯನ್ನು ಸೃಷ್ಟಿಸಿದರು. ಆದರೆ ಈ ಎರಡಕ್ಕಿಂತ ಭಾರಿ ಸದ್ದು ಮಾಡುತ್ತಿರುವ, ಮುಖ್ಯಮಂತ್ರಿಗಳನ್ನು ಅಡಕತ್ತರಿಯಲ್ಲಿ ಸಿಲುಕಿರುವ ಇನ್ನೊಂದು ಹೋರಾಟ ವೆಂದರೆ, ಅದು ಪಂಚಮಸಾಲಿಗೆ 2ಎ ಸ್ಥಾನಮಾನ ನೀಡಬೇಕೆಂದು ಸಮುದಾಯದ ಸ್ವಾಮೀಜಿಗಳು ನಡೆಸುತ್ತಿರುವ ಹೋರಾಟ.
ಈ ಬಗ್ಗೆ ಆರಂಭದಲ್ಲಿ ರಾಜ್ಯ ಸರಕಾರವೂ ಹೆಚ್ಚು ಗಮನವನ್ನು ಏನು ನೀಡಲಿಲ್ಲ. ಈ ಹಿಂದಿನ ಹೋರಾಟಗಳಂತೆ ಈ ಬಾರಿಯ ಮೀಸಲು ಹೋರಾಟು ಕೆಲ ದಿನಗಳ ಅಥವಾ ಕೆಲ ಜನರಿಗೆ ಮಾತ್ರ ಸೀಮಿತವಾಗಿರುವ ಹೋರಾಟ ಎನ್ನುವ ಲೆಕ್ಕಾಚಾರದಲ್ಲಿ ನಿರ್ಲಕ್ಷ್ಯ ಮಾಡಿತ್ತು. ಆದರೆ ಕೂಡಲಸಂಗಮದಿಂದ ಆರಂಭಗೊಂಡ ಪಾದಯಾತ್ರೆ ಹರಿಹರಕ್ಕೆ ಬರುವ ವೇಳೆ, ತನ್ನ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿಕೊಂಡಿತ್ತು.
ಹರಿಹರದಿಂದ ತುಮಕೂರಿಗೆ ಬರುವ ವೇಳೆ, ಕೇವಲ ಇಬ್ಬರು ಮಠಾಧೀಶರ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ 106
ಮಠಾಧೀಶರ ಬೆಂಬಲ ಸಿಕ್ಕಿತ್ತು. ಈ ರೀತಿಯ ಬೆಂಬಲ ಸಿಗುತ್ತಿದ್ದಂತೆ, ಹೋರಾಟ ಸಮಿತಿಯ ಬಲ ಹೆಚ್ಚಾಗಿದ್ದು, ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ಇದೀಗ ಇಕ್ಕಟ್ಟಿಗೆ ಸಿಲುಕಿರುವ ಯಡಿಯೂರಪ್ಪ ಅವರು ಪಂಚಮಸಾಲಿಗೆ 2ಎ ಸ್ಥಾನಮಾನ ಘೋಷಿಸು ವುದು ಕಷ್ಟದ ಮಾತೇನಲ್ಲ. ಏಕೆಂದರೆ ಈಗಾಗಲೇ ಕುಲಶಾಸ್ತ್ರ ಅಧ್ಯಯನ ಪೂರ್ಣಗೊಂಡಿದ್ದು, ವರದಿಯೂ ಸಜ್ಜಾಗಿದೆ.
ಒಬಿಸಿ ಸ್ಥಾನಮಾನವಾಗಿರುವುದರಿಂದ, ಇದನ್ನು ಕೇಂದ್ರಕ್ಕೂ ಶಿಫಾರಸು ಮಾಡಬೇಕಾದ ಅನಿವಾರ್ಯತೆ ಸರಕಾರಕ್ಕಿಲ್ಲ. ಆದ್ದರಿಂದ ಲಿಂಗಾಯತರನ್ನು ಸಂತೈಸಲು 2ಎ ಮೀಸಲನ್ನು ನೀಡಬಹುದು. ಆದರೆ ಇದೀಗ ಸರಕಾರ, ಮುಖ್ಯಮಂತ್ರಿ
ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ಮುಂದಿರುವ ಏಕೈಕ ಪ್ರಶ್ನೆಯೆಂದರೆ, ‘ಕೇವಲ ಪಂಚಮಸಾಲಿಗೆ ಮಾತ್ರ
ಮೀಸಲು ನೀಡಿದರೆ, ಇನ್ನುಳಿದ ಸಮುದಾಯಗಳು ಸುಮ್ಮನೆ ಇರುತ್ತಾರೆಯೇ?‘ ಎನ್ನುವುದು. ಪಂಚಮಸಾಲಿಗರು ಪಾದ
ಯಾತ್ರೆ ಆರಂಭಿಸುವ ಮೊದಲೇ, ಕುರುಬ ಸಮುದಾಯ ಎಸ್‌ಟಿಗೆ ಸೇರಿಸುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸಿ ಬೃಹತ್ ಸಮಾವೇಶವನ್ನು ಪೂರ್ಣಗೊಳಿಸಿದೆ.
ಇದರ ಜತೆಜತೆಗೆ ವಾಲ್ಮೀಕಿ ಸಮುದಾಯವರಿಗೂ ಹೆಚ್ಚುವರಿ ಮೀಸಲು ನೀಡಬೇಕು ಎಂದು ದಾವಣಗೆರೆಯಲ್ಲಿ ನಡೆದ ವಾಲ್ಮೀಕಿ ಸಮಾವೇಶದಲ್ಲಿ ಆಗ್ರಹಿಸಿದೆ. ಲಿಂಗಾಯತರಿಗೆ ಮೀಸಲು ನೀಡುವುದಾದರೆ, ನಮಗೂ ನೀಡುವಂತೆ ಈಗಾಗಲೇ ಹಲವು ಜಾತಿಗಳ ನಾಯಕರು ಹಾಗೂ ಮಠಾಧೀಶರು ಮುಖ್ಯಮಂತ್ರಿಗಳ ಮುಂದೆ ಪರೇಡ್ ನಡೆಸಿದ್ದು, ಇನ್ನು ಕೆಲ ಸಮುದಾಯವರು, ಈಗಿರುವ ಮೀಸಲಿಗೆ ಹೆಚ್ಚುವರಿಯಾಗಿ ಸೇರಿಸಿ ಮೀಸಲು ಒದಗಿ ಸುವಂತೆ ಆಗ್ರಹವನ್ನು ಮಂಡಿಸಿದ್ದಾರೆ. ಇದರೊಂದಿಗೆ ಹತ್ತು ಹಲವು ಸಮುದಾಯಗಳು ನಿಗಮ ಮಂಡಳಿ, ಅಭಿವೃದ್ಧಿ ಪ್ರಾಧಿಕಾರಗಳನ್ನು ನೀಡುವಂತೆ ಆಗ್ರಹವನ್ನು ಮಂಡಿಸಿವೆ.
ಹೀಗೆ ಎಲ್ಲ ಜಾತಿಗಳು ಮೀಸಲು, ಪ್ರಾಧಿಕಾರ ಎನ್ನುತ್ತಾ ಸಾಗಿದರೆ, ಸರಕಾರ ಯಾರಿಗೆ ಏನು ಕೊಡಬೇಕು? ಎಷ್ಟು ಕೊಡಬೇಕು? ಎನ್ನುವ ಪ್ರಶ್ನೆಗಳು ಉದ್ಭವಿಸುವುದು ಸಹಜ. ದಿನದಿಂದ ದಿನಕ್ಕೆ ಈ ರೀತಿ ಮೀಸಲಿಗೆ ಹೋರಾಟ ಹೆಚ್ಚಾಗುತ್ತಿರುವ ಅವಧಿಯಲ್ಲಿ, ನಾವು ನೋಡಬೇಕಿರುವುದು ಅಷ್ಟಕ್ಕೂ ಈ ಮೀಸಲಾತಿಯ ಪರಿಕಲ್ಪನೆ ಏಕೆ ಬಂತೆಂದು. ಅನಾದಿಕಾಲದಿಂದಲೂ ವರ್ಣಾಶ್ರಮ ಪದ್ಧತಿಯಲ್ಲಿ ಬ್ರಾಹ್ಮಣ, ವೈಶ್ಯ ಹಾಗೂ ಕ್ಷತ್ರಿಯರನ್ನು ಹೊರತು, ಶೂದ್ರ ಎನಿಸಿಕೊಂಡವರೂ ಸರಿಸಮಾನ ಜೀವನ ಸಾಗಿಸು ವಂತೆ ಮಾಡಲು ಮೀಸಲು ನೀಡಬೇಕು ಎಂದು. ಆದರೆ ಈಗಿನ ಕರ್ನಾಟಕವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಲಿಂಗಾಯತರು, ಒಕ್ಕಲಿಗರು ರಾಜಕೀಯವಾಗಿ ಹಾಗೂ ಕೃಷಿಯಲ್ಲಿ ಬಲಿಷ್ಠರಾಗಿದ್ದಾರೆ ಎಂದು ಗಮನಿಸಿ, ದೇವರಾಜ ಅರಸರು ರಚಿಸಿದ್ದ ಹಾವನೂರು ಆಯೋಗ ಲಿಂಗಾಯತರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಿಲ್ಲ.
ಆದರೆ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ವೆಂಕಟಸ್ವಾಮಿ ಆಯೋಗ, ಈ ಸಮುದಾಯವನ್ನು ಒಬಿಸಿಗೆ ಸೇರಿಸಿತು. ಆದರೆ ಒಕ್ಕಲಿಗರನ್ನು ಜನರಲ್‌ಗೆ ಸೇರಿಸಿತ್ತು. ಇದೀಗ ಒಂದು ವೇಳೆ ಲಿಂಗಾಯತರಿಗೆ ಪುನಃ 2ಎ ಸ್ಥಾನಮಾನ ನೀಡಲು ಸರಕಾರ ನಿರ್ಧರಿಸಿದರೆ, ಇದನ್ನೇ ಆಧಾರವಾಗಿಟ್ಟುಕೊಂಡು ಒಕ್ಕಲಿಗರೂ ತಮಗೂ ಮೀಸಲಾತಿ ಇರಲಿ ಎಂದು ಕೇಳುವುದರಲ್ಲಿ
ಅನುಮಾನವಿಲ್ಲ.
ಹಾಗೆ ನೋಡಿದರೆ ಕರ್ನಾಟಕದಲ್ಲಿ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ, ಧರಣಿ, ಪಾದಯಾತ್ರೆಗಳು ಇದೇ ಮೊದಲ್ಲ. ಈ ಹಿಂದೆ ದೇವರಾಜ ಅರಸು ಅವರ ಕಾಲದಿಂದಲೂ ಹಲವಾರು ಸಮುದಾಯಗಳು ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿವೆ. ಈ ಹಿಂದೆ ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಯಾಗಿದ್ದಾಗಲೇ ಲಿಂಗಾಯತ ಸಮುದಾಯ ಕೆಲ ಉಪಪಂಗಡಗಳಿಗೆ 3ಬಿ, 2ಎ ಸ್ಥಾನಮಾನವನ್ನು ನೀಡಿದ್ದು. ಇನ್ನು ಸಿದ್ದರಾ ಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, ಎಸ್‌ಟಿ-ಎಸ್‌ಸಿ ಸಮುದಾಯಗಳು ಮೀಸಲು ಹೆಚ್ಚಿಸುವುದರೊಂದಿಗೆ,
ಒಳಪಂಗಡಗಳಿಗೆ ಮೀಸಲು ನೀಡಬೇಕು ಎನ್ನುವ ಮಾತುಗಳು ಕೇಳಿಬಂದಾಗಲೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಇಕ್ಕಟ್ಟಿಗೆ ಸಿಲುಕಿದ್ದರು.
ಒಂದು ಕಡೆ ಸಂವಿಧಾನದಲ್ಲಿ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ನೀಡುವಂತಿಲ್ಲ ಎನ್ನುವ ಸ್ಪಷ್ಟ ಮಾತಿದ್ದರೆ, ಇನ್ನೊಂದೆಡೆ ಮೀಸಲು ನೀಡದಿದ್ದರೆ ಮತ ನೀಡುವುದಿಲ್ಲ ಎನ್ನುವ ಎಚ್ಚರಿಕೆ ಇನ್ನೊಂದೆಡೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆಡಳಿತ ನಡೆಸುವುದು ಸುಲಭವಲ್ಲ. ಸಿದ್ದರಾಮಯ್ಯ ಅವರು, ಈ ಮೀಸಲು ಹೋರಾಟ ಹೆಚ್ಚಾಗುತ್ತಿದ್ದಂತೆ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ, ಕೈತೊಳೆದುಕೊಂಡಿದ್ದರು. ಆದರೆ ಯಡಿಯೂರಪ್ಪನವರಿಗೆ ಇದನ್ನು ಮಾಡುವು ದಕ್ಕೂ ಅವಕಾಶವಿಲ್ಲ.
ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಅವರು, ಮೀಸಲಿಗೆ ಸಂಬಂಧಿಸಿದಂತೆ ಯಾವುದೇ ಶಿಫಾರಸು ಗಳನ್ನು ಮಾಡುವಂತಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಪರಿಸ್ಥಿತಿಯಲ್ಲಿಯೂ ಯಡಿಯೂರಪ್ಪ ಅವರಿಲ್ಲ. ಇದರೊಂದಿಗೆ ಪಂಚಮಸಾಲಿಗೆ ಬೇಕಿರುವ ಮೀಸಲು ನೀಡುವುದಕ್ಕೆ ಕೇಂದ್ರದ ಅನುಮತಿ ಬೇಕಿಲ್ಲ. ಆದರೆ, ಆ ಒಂದು ಸಮುದಾಯದ ಬೇಡಿಕೆಯನ್ನು ಈಡೇರಿಸಿದರೆ,
ಇನ್ನುಳಿದ ಸಮುದಾಯಗಳು ಇದೇ ರೀತಿ ಮೀಸಲಿಗೆ ಪಾದಯಾತ್ರೆ ಆರಂಭಿಸಿದರೆ ಗತಿಯೇನು ಎನ್ನುವ ಆತಂಕದಲ್ಲಿ ಮುಖ್ಯ ಮಂತ್ರಿ ಸೇರಿದಂತೆ ಅನೇಕರಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಶುರುವಾಗಿರುವ ಮೀಸಲಾತಿ ಹೋರಾಟದ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ, ಕೇವಲ ರಾಜಕಾರಣಿಗಳು ಮಾತ್ರವಲ್ಲದೇ ಸ್ವಾಮೀಜಿಗಳು ಸೇರಿಕೊಂಡಿದ್ದಾರೆ. ಕುರುಬ ಹೋರಾಟ, ವಾಲ್ಮೀಕಿ ಹೋರಾಟವಾಗಲಿ ಅಥವಾ ಪಂಚಮಸಾಲಿ ಹೋರಾಟವನ್ನು ನೋಡಿದರೆ, ಪ್ರತಿಪಕ್ಷದ ವರಿಗಿಂತ ಬಿಜೆಪಿಯ ನಾಯಕರು ಹಾಗೂ ಸಮುದಾಯದ ಸ್ವಾಮೀಜಿಗಳೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ಅದರಲ್ಲಿಯೂ ಸಂಪುಟ ಸಚಿವರೇ ಸ್ವತಃ ಹೋಗಿ ಹೋರಾಟದಲ್ಲಿ ಭಾಗಿಯಾಗುತ್ತಿರುವುದು ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಒಂದೆಡೆ ಮೀಸಲಿಗೆ ಸಂಬಂಧಿಸಿದಂತೆ ಹೋರಾಟಗಾರರು ನಮ್ಮ ಹಕ್ಕು ಎಂದರೆ, ಇನ್ನೊಂದೆಡೆ 1992ರಲ್ಲಿ ಸುಪ್ರೀಂ ಕೋರ್ಟ್, ‘ಯಾರಿಗಾದರೂ ಮೀಸಲು ನೀಡಿ. ಆದರೆ ಅದು ಶೇ.50 ಮೀರುವಂತಿಲ್ಲ’ ಎನ್ನುವ ಸ್ಪಷ್ಟ ಆದೇಶವನ್ನು ಇಂದಿರಾ ಸಾಹನಿ ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ತೀರ್ಪಿನ ಆಧಾರದಲ್ಲಿಯೇ ಮಹಾರಾಷ್ಟ್ರದಲ್ಲಿ ಮರಾಠರಿಗೆ ಶೇ.12ರಷ್ಟು, ತೆಲಂಗಾಣದಲ್ಲಿ ಮುಸ್ಲಿಮರಿಗೆ 12ರಷ್ಟು,ಹರಿಯಾಣದಲ್ಲಿ ಜಾಟ್ ಸಮುದಾಯಕ್ಕೆ ಶೇ.10ರಷ್ಟು ಮೀಸಲು ನೀಡಲಾಗಿದೆ.
ಈ ರಾಜ್ಯಗಳಲ್ಲಿರುವ ಮೀಸಲನ್ನೇ ನೆಪವಾಗಿಟ್ಟುಕೊಂಡು ಪಂಚಮಸಾಲಿಗಳು 2ಬಿ ಬದಲು 3ಎ ಮೀಸಲಿನಲ್ಲಿ ಅವಕಾಶ ನೀಡಿದೆ ಎಂದು ಹಠ ಹಿಡಿದಿದ್ದರೆ, ಕುರುಬರು ಪಶುಪಾಲಕರು ಎನ್ನುವುದನ್ನು ಮುಂದಿಟ್ಟುಕೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಸರಕಾರ ಇಂದಿನ ಹೋರಾಟವನ್ನು ತಣಿಸಲು ಮೀಸಲಾತಿ ಹೆಚ್ಚಿಸಲು ಮುಂದಾದರೆ ಭವಿಷ್ಯದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸಮುದಾಯದವರು ತಮಗೂ ಮೀಸಲು ಬೇಕೆಂದು ಕೇಳಿದರೂ ಅಚ್ಚರಿಯಿಲ್ಲ.
ಒಂದು ಸಮುದಾಯವನ್ನು ಸಂತೈಸಲು ಆ ಸಮುದಾಯ ಕೇಳುತ್ತಿರುವ ಮೀಸಲನ್ನು ನೀಡಿದರೆ, ಇದ್ದನೇ ಊರುಗೋಲಾಗಿಟ್ಟು ಕೊಂಡು ಇನ್ನು ಹತ್ತು ಸಮುದಾಯಗಳು ಮೀಸಲಾತಿಯ ಒಳಗೆ ತೂರಿಕೊಳ್ಳುವುದಕ್ಕೆ ಇದೇ ಹಾದಿಯನ್ನು ಹಿಡಿಯುವುದರಲ್ಲಿ ಅನುಮಾನವಿಲ್ಲ. ‘ಅತ್ತ ದರಿ, ಇತ್ತ ಪುಲಿ’ ಎನ್ನುವ ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಯಡಿಯೂರಪ್ಪ ಅವರು, ಇದೀಗ
ಸಮುದಾಯಕ್ಕೆ ನೀಡಬೇಕೇ ಬೇಡ ಎನ್ನುವ ಜಿಜ್ಞಾಸೆಗೆ ಬಿದ್ದಿದ್ದಾರೆ.
ಬಿಜೆಪಿ ಎನ್ನುವುದಕ್ಕಿಂತ ಯಡಿಯೂರಪ್ಪ ಎನ್ನುವ ಕಾರಣಕ್ಕೆ, ಲಿಂಗಾಯತ ಸಮುದಾಯ ಮತಬ್ಯಾಂಕ್ ಆಗಿ ನಿಂತಿದೆ. ಇದೀಗ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ, ಇದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮತಬ್ಯಾಂಕ್ ಒಡೆಯುವುದಕ್ಕೆ ಪ್ರಯತ್ನಿಸುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ನೀಡಿದರೆ, ಲಿಂಗಾಯತ ಮತಬ್ಯಾಂಕ್ ಉಳಿಯಬಹು ದಾದರೂ, ಇತರ ಸಮುದಾಯಗಳು ಎದ್ದು ಕೂರುವುದರಲ್ಲಿ ಎರಡನೇ ಮಾತಿಲ್ಲ.
ಆದ್ದರಿಂದ ಮೀಸಲಾತಿ ಎನ್ನುವ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವ ಯಡಿಯೂರಪ್ಪನವರಿಗೆ, ಹೊರ ಬರುವುದು ಸುಲಭ ವಂತೂ ಅಲ್ಲ. ಒಂದಂತೂ ನಿಜ ಮೀಸಲಾತಿಯ ಹೋರಾಟಗಳು ಇದೇ ರೀತಿ ಮುಂದುವರಿದರೆ ಮುಂದೊಂದು ಎಲ್ಲರೂ ಮೀಸಲಾತಿಯ ಒಳಗೆ ಬಂದು, ‘ಸಾಮಾನ್ಯ’ ಎನ್ನುವ ಕೆಟಗರಿಯಲ್ಲಿ ಉಳಿಯುವವರೇ ಇಲ್ಲವಾಗುತ್ತಾರೆ.