Thursday, 12th December 2024

Bigg Boss kannada 11: ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ವೀಕ್ಷಕರ ಕಣ್ಮಣಿ! ಅತಿ ಹೆಚ್ಚು ಮತ ಪಡೆದವಳು ಕಿಚ್ಚನ ಮುಂದೆ ಕಣ್ಣೀರಿಟ್ಟದ್ದೇಕೆ?

Bigg Boss Kannada 11

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ (Bigg Boss kannada 11) ಮನೆಗೆ ವಿವಾದಿತ ಹಿಂದೂಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಕಾಲಿಟ್ಟಿದ್ದಾರೆ. ವಿಶೇಷ ಅಂದರೆ ಬಿಗ್‌ ಬಾಸ್‌ ಸ್ಪರ್ಧಿಗಳಲ್ಲಿ (Bigg Boss kannada season 11 contestants) ಈಕೆ ವೀಕ್ಷಕರಿಂದ ಅತಿ ಹೆಚ್ಚು ಮತ ಪಡೆದವರು. ಮತ ನೀಡಿದ ಜನ ಆಕೆಯನ್ನು ʼನರಕʼಕ್ಕೆ ಕಳಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುವ ಮುನ್ನವೇ ಅತಿಹೆಚ್ಚು ಮತಗಳನ್ನು ಜನ ಚೈತ್ರಾ ಕುಂದಾಪುರಗೆ ನೀಡಿದ್ದಾರೆ. ಚೈತ್ರಾ ಕುಂದಾಪುರ ಅವರಿಗೆ ಮತ ಹಾಕಲು ವೀಕ್ಷಕರಿಗೆ ಅವಕಾಶ ನೀಡಲಾಗಿತ್ತು. ವೀಕ್ಷಕರು ಕೇವಲ 15 ನಿಮಿಷಗಳಲ್ಲಿ 2,85,000 ಮತ ಹಾಕಿದ್ದಾರೆ. ನಾಲ್ಕು ಸ್ಪರ್ಧಿಗಳಲ್ಲಿ ಅತಿಹೆಚ್ಚು ಮತಗಳನ್ನು ಪಡೆದಿದ್ದಾರೆ ಚೈತ್ರಾ ಕುಂದಾಪುರ. ಅದರಲ್ಲಿ ಎಷ್ಟು ಮತಗಳು ಸ್ವರ್ಗ ಹಾಗೂ ನರಕಕ್ಕೆ ಸಿಕ್ಕಿವೆ ಎಂಬುದು ಗೊತ್ತಿಲ್ಲ ಎಂದು ಕಿಚ್ಚ ಸುದೀಪ ಹೇಳಿದ್ದಾರೆ. ಆದರೆ ನರಕಕ್ಕೆ ಹೆಚ್ಚು ಮತಗಳು ಬಿದ್ದಿರುವುದು ಖಚಿತ. ಯಾಕೆಂದರೆ ಬಿಗ್ ಬಾಸ್ ಮನೆಯೊಳಗೆ ಹೋದ ಚೈತ್ರಾ ಕುಂದಾಪುರ ಸೀದಾ ನರಕಕ್ಕೆ ಹೋಗಿದ್ದಾರೆ.

ಈ ನಡುವೆ ವೇದಿಕೆಯಲ್ಲಿ ಚೈತ್ರಾ, ಕಿಚ್ಚ ಸುದೀಪ್‌ (Kichcha Sudeep) ಮುಂದೆ ತಮ್ಮ ಮೇಲೆ ಬಂದ ಆರೋಪ ಹಾಗೂ ಜೈಲು ಶಿಕ್ಷೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. ನನ್ನ ಸೌಂಡ್ ಜಾಸ್ತಿ ಆಗಿದೆ ಎನ್ನುವ ಕಾರಣಕ್ಕೆ ಜನ ಕಾಂಟ್ರವರ್ಸಿ ಎಂಬ ಪದವನ್ನು ನನ್ನೊಂದಿಗೆ ಸೇರಿಸಿರಬಹುದು. ಅರ್ಧ ಗಂಟೆ ಒಂದು ಗಂಟೆ ಭಾಷಣ ಮಾಡುವ ಚೈತ್ರ ಮಾತ್ರ ನಾನಲ್ಲ. ಅದನ್ನು ಬಿಟ್ಟು ಇನ್ನೊಬ್ಬ ಚೈತ್ರ ಏನಿದ್ದಾಳೆ ಎಂಬುದನ್ನು ತೋರಿಸಲು ಈ ಬಿಗ್ ಬಾಸ್ ವೇದಿಕೆ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ನಂಬಿದ್ದೇನೆ ಎಂದರು ಚೈತ್ರಾ.

ನಾನು ಕಲಿಯುತ್ತಾ ಹೋಗುತ್ತಿದ್ದೇನೆ. ನಾನು ನಂಬಿದ್ದ ಸತ್ಯವನ್ನು ಇನ್ನಷ್ಟು ಗಟ್ಟಿಯಾಗಿ ಹೇಳುತ್ತೇನೆ. ಬೆಂಗಳೂರು ನೋಡದ ನಮ್ಮಮ್ಮ ಇದೇ ಮೊದಲ ಬಾರಿಗೆ ಬಿಗ್‌ ಬಾಸ್‌ ನಿಮಿತ್ತದಲ್ಲಿ ಬೆಂಗಳೂರನ್ನು ನೋಡಿದ್ದಾರೆ. ನನ್ನಮ್ಮ ಬಿಗ್ ಬಾಸ್ ಪ್ರತಿ ಸೀಸನ್‌ನ ಫೈನಲ್ ಅನ್ನು 12 ಗಂಟೆವರೆಗೆ ಎಚ್ಚರವಾಗಿದ್ದು ನೋಡಿದ್ದಾರೆ. ನನ್ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ಯಾರು ಏನೇ ಮಾತನಾಡಿದರೂ ನನ್ನ ಮನೆಯವರು ನನ್ನನ್ನು ನಂಬಿದ್ದಾರೆ. ಅಷ್ಟೇ ನನಗೆ ಧೈರ್ಯ. ಕುವೆಂಪು ಅವರ ಮಾತಿನಂತೆ ಟೀಕೆಗಳು ಸಾಯುತ್ತವೆ, ಕೆಲಸಗಳು ಎಂದಿಗೂ ಮುಂದುವರೆಯುತ್ತವೆ. ನನ್ನ ಮೇಲೆ ಏನೇ ಆರೋಪ ಬಂದರೂ ನಾನು ಕುವೆಂಪು ಅವರ ಮಾತನ್ನು ನಂಬಿ ಮುಂದೆ ಹೋಗುತ್ತೇನೆ ಎಂದು ಹೇಳಿದರು.

ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂದು ಹೇಳುತ್ತಾರೆ. ಆದರೆ, ಬಿಗ್ ಬಾಸ್ ಪೂರ್ತಿ ಸೀಸನ್ ನೋಡಿದಾಗ ಅದು ಸ್ಕ್ರಿಪ್ಟೆಡ್ ಅಲ್ಲವೆಂದು ತಿಳಿಯುತ್ತದೆ. ಪ್ರತಿಯೊಂದು ಘಟನೆಗೂ ಒಂದಕ್ಕೊಂದು ಸಂಬಂಧ ಇದ್ದಾಗ ಮಾತ್ರ ಅಂತಹ ಮಾತುಗಳು ಬರಲು, ದೃಶ್ಯಾವಳಿಗಳು ನಡೆಯಲು ಸಾಧ್ಯ. ನಾನು ಜೈಲಲ್ಲಿ ಇದ್ದಾಗಲೇ ವರ್ತೂರು ಸಂತೋಷ್ ಅವರು ಕೂಡ ಜೈಲಿಗೆ ಬಂದು ಹೋಗಿದ್ದರು. ಅಂದಿನಿಂದ ಬಿಗ್ ಬಾಸ್ ಸೀಸನ್ ಅನ್ನು ನಾನು ನೋಡಿದ್ದೇನೆ. ಎಲ್ಲ ವಯೋಮಾನದವರೂ ಸೇರಿಕೊಂಡು ರಿಮೋಟ್ ಕಿತ್ತಾಡಿಕೊಂಡು ಬಿಗ್ ಬಾಸ್ ಸೀಸನ್ ನೋಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Bigg Boss kannada 11 : ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ವಿವರ ಇಲ್ಲಿದೆ