Friday, 13th December 2024

Bigg Boss Marathi 5: ಸೂರಜ್ ಚವಾಣ್ ಬಿಗ್ ಬಾಸ್ ಮರಾಠಿ 5 ವಿಜೇತ

bigg boss marathi

ಮುಂಬಯಿ: ಸೂರಜ್ ಚವಾಣ್ ಬಿಗ್ ಬಾಸ್ ಮರಾಠಿ 5ರಲ್ಲಿ (Bigg Boss Marathi 5) ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಭಾನುವಾರ ಅಕ್ಟೋಬರ್ 6ರಂದು ಇದರ ಗ್ರ್ಯಾಂಡ್ ಫಿನಾಲೆ ನಡೆಯಿತು. ವಿಜೇತ ಸೂರಜ್‌ ಟ್ರೋಫಿ ಮತ್ತು 14.6 ಲಕ್ಷ ರೂಪಾಯಿ ಬಹುಮಾನವನ್ನು ಪಡೆದರು.

ಅಭಿಜೀತ್ ಸಾವಂತ್ ಜೊತೆಗಿನ ತೀವ್ರ ಸ್ಪರ್ಧೆಯ ನಂತರ ಸೂರಜ್ ಗೆಲುವು ಸಾಧಿಸಿದ್ದಾರೆ. ಅಭಿಜೀತ್‌ ರನ್ನರ್‌ ಅಪ್‌ ಆದರು. ಮೂರನೇ ಸ್ಥಾನವನ್ನು ನಿಕ್ಕಿ ತಾಂಬೋಲಿ ಪಡೆದರು. ಫಿನಾಲೆಯಲ್ಲಿ ಮುಂಬರುವ ಬಾಲಿವುಡ್ ಚಲನಚಿತ್ರ ಜಿಗ್ರಾದ ಪಾತ್ರವರ್ಗ ವಿಶೇಷ ಅತಿಥಿಗಳಾಗಿದ್ದರು. ನಟಿ ಆಲಿಯಾ ಭಟ್, ವೇದಾಂಗ್ ರೈನಾ ಮತ್ತು ನಿರ್ದೇಶಕ ವಾಸನ್ ಬಾಲಾ ಮುಂತಾದವರು ಭಾಗವಹಿಸಿದರು. ಇವರ ಉಪಸ್ಥಿತಿ ಈವೆಂಟ್‌ಗೆ ಹೆಚ್ಚಿನ ಗ್ಲಾಮರ್‌ ಸೇರಿಸಿತು.

ಕಾರ್ಯಕ್ರಮವನ್ನು ರಿತೇಶ್ ದೇಶಮುಖ್ (Riteish Deshmukh) ನಡೆಸಿಕೊಟ್ಟರು. ಈ ಸೀಸನ್‌ನ ಹರಿವು ಮತ್ತು ಟ್ವಿಸ್ಟ್‌ಗಳು ವೀಕ್ಷಕರ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಿವೆ ಎಂದು ಶ್ಲಾಘಿಸಿದರು. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಅವರು ಸೂರಜ್ ಅವರೊಂದಿಗಿನ ಫೋಟೋ ಹಂಚಿಕೊಂಡರು.

ಅಂತಿಮ ಹಣಾಹಣಿಗೆ ಮುನ್ನ ಸ್ಪರ್ಧೆಯಲ್ಲಿದ್ದ ಧನಂಜಯ್ ಪೊವಾರ್, ಜಾನ್ಹವಿ ಕಿಲ್ಲೇಕರ್ ಮತ್ತು ಅಂಕಿತಾ ವಾಲಾವಲ್ಕರ್ ಎಲಿಮಿನೇಟ್ ಆದರು. ಇವರು TRP ತಂದುಕೊಟ್ಟ ಸ್ಪರ್ಧಿಗಳಾಗಿದ್ದರು. ಸರಣಿಯುದ್ದಕ್ಕೂ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

“ಬಿಗ್ ಬಾಸ್ ಮರಾಠಿಯ ಈ ಸೀಸನ್ ಅಚ್ಚರಿಗಳು ಮತ್ತು ತಿರುವುಗಳಿಂದ ತುಂಬಿತ್ತು. ಪ್ರತಿ ವಾರದ ಟ್ವಿಸ್ಟ್‌ಗಳು TRPಗಳನ್ನು ಹೆಚ್ಚಿಸಿದವು. ಸ್ಪರ್ಧಿಗಳ ನಡುವಿನ ತಿಕ್ಕಾಟ, ಸಂಘರ್ಷಗಳು ಮತ್ತು ಸಂಬಂಧ ಯಾವಾಗಲೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿರಿಸಿದ್ದವು” ಎಂದು ರಿತೇಶ್‌ ಹೇಳಿದರು. ಸೂರಜ್ ಚವಾಣ್ ಅವರ ವಿಜಯೋತ್ಸವದೊಂದಿಗೆ, ಬಿಗ್ ಬಾಸ್ ಮರಾಠಿ 5 ಯಶಸ್ವಿ ಅಧ್ಯಾಯವನ್ನು ಮುಕ್ತಾಯಗೊಳಿಸಿದೆ.

ಇದನ್ನೂ ಓದಿ: Bigg Boss kannada 11: ಬಿಗ್‌ ಬಾಸ್‌ ಮನೆಯಿಂದ ಯಮುನಾ ಶ್ರೀನಿಧಿ ಔಟ್!