ದೇಶದ ಅಗ್ರಮಾನ್ಯ ಓಟಗಾರ್ತಿಯರಲ್ಲಿ ಒಬ್ಬರಾಗಿರುವ ಹಿಮಾ ದಾಸ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿಗೆ ಅಸ್ಸಾಂ ರಾಜ್ಯ ಸರಕಾರ ಶಿಫಾರಸು ಮಾಡಿದೆ.
ಕಳೆದ ಜೂನ್ 5ರಂದೇ ಶಿಫಾರಸು ಪತ್ರವನ್ನು ಅಸ್ಸಾಂ ಕ್ರೀಡಾ ಕಾರ್ಯದರ್ಶಿ ದುಲಾಲ್ ಚಂದ್ರ ದಾಸ್, ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಅಸ್ಸಾಂನ ಧಿಂಗ್ ಗ್ರಾಮದ 20 ವರ್ಷದ ಹಿಮಾ ದಾಸ್, ಈ ವರ್ಷ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿದ್ದಾರೆ.
2018ರಲ್ಲಿ ಫಿನ್ಲೆಂಡ್ ನ ತಂಪೆರೆಯಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಟ್ರ್ಯಾಕ್ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿರುವ ಹಿಮಾ, ಪ್ರಶಸ್ತಿಗಾಗಿ ಜಾವೆಲಿನ್ ಎಸೆತಗಾರ, ನೀರಜ್ ಚೋಪ್ರಾ, ಕುಸ್ತಿಪಟು ವಿನೇಶ್ ಫೋಗಾಟ್, ಟಿಟಿ ಆಟಗಾರ್ತಿ ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಕ್ರಿಕೆಟಿಗ ರೋಹಿತ್ ಶರ್ಮ ಅವರೊಂದಿಗೆ ಸ್ಪರ್ಧೆಯಲ್ಲಿದ್ದಾರೆ. ಹಿಮಾ ಈಗಾಗಲೇ 2018ರಲ್ಲಿ ಅರ್ಜುನ ಗೌರವಕ್ಕೆ ಪಾತ್ರರಾಗಿದ್ದಾರೆ.