ಹೈದರಾಬಾದ್
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇರೆಗೆ ತಂಡದಿಂದ ಹೊರಬಿದ್ದಿದ್ದ ಮೊಹಮ್ಮದ್ ಅಜರುದ್ದೀನ್, ಇದೀಗ ಅವಕಾಶ ಸಿಕ್ಕರೆ ಭಾರತ ತಂಡಕ್ಕೆ ತರಬೇತಿ ನೀಡಲು ರೆಡಿ ಎಂದು ಹೇಳಿದ್ದಾರೆ.
“ಹೌದು, ಭಾರತ ತಂಡದ ಕೋಚ್ ಆಗಲು ನಾನು ಸಿದ್ಧನಿದ್ದೇನೆ. ಟೀಮ್ ಇಂಡಿಯಾಗೆ ಮಾರ್ಗದರ್ಶನ ನೀಡುವ ಅವಕಾಶ ನನಗೇನಾದರೂ ನೀಡಿದರೆ ಕಣ್ಣು ಮಿಟುಕಿಸುವಲ್ಲಿ ಅದನ್ನು ಒಪ್ಪಿಕೊಳ್ಳುತ್ತೇನೆ,” ಎಂದು ಅಜರುದ್ದೀನ್ ಗಲ್ಫ್ ನ್ಯೂಸ್ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸದ್ಯ ಭಾರತ ತಂಡದ ಮಾಜಿ ಸ್ಟಾರ್ ಆಲ್ರೌಂಡರ್ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದು, 2021ರ ವರೆಗೆ ಒಪ್ಪಂದ ಹೊಂದಿದ್ದಾರೆ. ಜೊತೆಗೆ ಕೊರೊನಾ ವೈರಸ್ ಕಾರಣ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಸ್ತಬ್ಧಗೊಂಡಿದ್ದು ಈ ಸಂದರ್ಭದಲ್ಲಿ ಅಜರುದ್ದೀನ್ ಕೋಚ್ ಆಗುವ ಬಯಕೆ ಹೊರಹಾಕಿದ್ದಾರೆ.
ಭಾರತ ತಂಡದ ಪರ 99 ಟೆಸ್ಟ್ ಪಂದ್ಯಗಳನ್ನು ಆಡಿರುವ ಹೈದರಾಬಾದ್ ಮೂಲದ ಅನುಭವಿ ಬ್ಯಾಟ್ಸ್ಮನ್ ಅಝರ್, ಇತ್ತೀಚಿನ ದಿನಗಳಲ್ಲಿ ತಂಡದ ಜೊತೆಗೆ ಸಹಯಾಕ ಸಿಬ್ಬಂದಿಯ ದೊಡ್ಡ ಬಳಗವೇ ಪ್ರಯಾಣ ಮಾಡುತ್ತಿರುವುದಕ್ಕೆ ಅಚ್ಚರಿ ಹೊರಹಾಕಿದ್ದಾರೆ.
“ಈಗೆಲ್ಲ ತಂಡದ ಜೊತೆಗೆ ಸಹಾಯಕ ಸಿಬ್ಬಂದಿಯ ಬಹುದೊಡ್ಡ ಪಡೆಯೇ ಸಾಗುವುದನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೇನೆ. ನಾನು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಎಕ್ಸ್ಪರ್ಟ್. ಹೀಗಾಗಿ ನಾನೇನಾದರೂ ಕೋಚ್ ಆದರೆ ಅಲ್ಲಿ ಬ್ಯಾಟಿಂಗ್ ಕೋಚ್ನ ಅಗತ್ಯವೇ ಇರುವುದಿಲ್ಲ. ಅಲ್ಲವೆ?,” ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಆಗಿರುವ ಅಜರ್ ಹೇಳಿದ್ದಾರೆ.