Sunday, 15th December 2024

13ನೇ ಐಪಿಎಲ್‌ ನಡೆಯವ ವಿಶ್ವಾಸದಲ್ಲಿ ಪಂಜಾಬ್‌ ಕೋಚ್ ಅನಿಲ್‌ ಕುಂಬ್ಳೆ

ನವದೆಹಲಿ,

ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ, ಈ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ನಡೆಯುವ ಆಶಾಭಾವ ಹೊರಹಾಕಿದ್ದು, ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಆಡುವ ಆಲೋಚನೆಗೂ ಸೈ ಎಂದಿದ್ದಾರೆ.

ಮಾರ್ಚ್‌ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಕೋವಿಡ್‌-19 ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಮುಂದಿನ ಆದೇಶದವರೆಗೆ ರದ್ದು ಪಡಿಸಲಾಯಿತು. ಇದೇ ವೇಳೆ ಅಕ್ಟೋಬರ್‌ ಮತ್ತು ನವೆಂಬರ್‌ ಅವಧಿಯಲ್ಲಿ ಟೂರ್ನಿ ಆಯೋಜನೆಗೆ ಬಿಸಿಸಿಐ ಕಸರತ್ತು ನಡೆಸುತ್ತಿದೆಯಾದರೂ ಈವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

“ಐಪಿಎಲ್‌ 2020 ಟೂರ್ನಿ ನಡೆಯುತ್ತಿದೆ ಎಂಬ ಆಶಾಭಾವ ನಮ್ಮಲ್ಲಿದ್ದು, ಈ ವರ್ಷ ಟೂರ್ನಿ ಸಾಧ್ಯವಾಗುತ್ತದೆ ಎಂಬ ವಿಶ್ವಾಸದಲ್ಲಿಯೂ ಇದ್ದೇವೆ,” ಎಂದು ಕುಂಬ್ಳೆ ಸ್ಟಾರ್‌ ಸ್ಪೋರ್ಟ್ಸ್‌ನ ‘ಕ್ರಿಕೆಟ್‌ ಕನೆಕ್ಟೆಡ್‌’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

“ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಇಲ್ಲದೇ ಇದ್ದರೆ, ಬಹುಶಃ 3-4 ಸ್ಥಳಗಳಲ್ಲಿ ಟೂರ್ನಿ ನಡೆಸಲು ಸಾಧ್ಯ. ಹೀಗಾಗಿ ಟೂರ್ನಿ ನಡೆಯುತ್ತದೆ ಎಂಬ ಆಶಾಭಾವ ಹೊಂದಿದ್ದೇವೆ,” ಎಂದು ಐಸಿಸಿ ಕ್ರಿಕೆಟ್‌ ಸಲಹಾ ಸಮಿತಿಯ ಮುಖ್ಯಸ್ಥರೂ ಆಗಿರುವ ಮಾಜಿ ಲೆಗ್‌ ಸ್ಪಿನ್ನರ್‌ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.