Saturday, 23rd November 2024

ಕ್ರಿಕೆಟರ್‌ ಶ್ರೀಶಾಂತ್‌ ನಿಷೇಧ ಅವಧಿ ಇಂದಿಗೆ ಪೂರ್ಣ

 ನವದೆಹಲಿ: ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವೇಗಿ ಎಸ್‌.ಶ್ರೀಶಾಂತ್‌ ಅವರ ಶಿಕ್ಷೆಯ ಅವಧಿ ಇಂದಿಗೆ ಕೊನೆಗೊಂಡಿದೆ.‌

ಏಳು ವರ್ಷಗಳ ನಿಷೇಧ ಅವಧಿ ಭಾನುವಾರ ಪೂರ್ಣಗೊಂಡಿದೆ. 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಸಿಕ್ಕಿಬಿದ್ದು, ಬಿಸಿಸಿಐನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಫಿಟ್‌ನೆಸ್‌ ಸಾಬೀತುಪಡಿಸಿದರೆ ಪಂದ್ಯಗಳಿಗೆ ಪರಿಗಣಿಸುವುದಾಗಿ ಶ್ರೀಶಾಂತ್‌ ಅವರಿಗೆ ರಾಜ್ಯ ಕೇರಳ ಕ್ರಿಕೆಟ್‌ ಸಂಸ್ಥೆಯು ಭರವಸೆ ನೀಡಿದೆ.

‘ನಾನು ಈಗ ಎಲ್ಲ ಪ್ರಕರಣಗಳಿಂದ ಮುಕ್ತನಾಗಿದ್ದೇನೆ. ನಾನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ಕ್ರಿಕೆಟ್‌ ಮುಂದುವರಿಸಲು ಬಯಸಿ ರುವೆ ಎಂದು ನಿಷೇಧ ಕೊನೆಗೊಳ್ಳುವ ಎರಡು ದಿನಗಳ ಮೊದಲು ಅವರು ಟ್ವೀಟ್ ಮಾಡಿದ್ದರು. 2013ರಲ್ಲಿ ಬಿಸಿಸಿಐನ ಶಿಸ್ತು ಸಮಿತಿಯು, ಶ್ರೀಶಾಂತ್ ಅವರೊಂದಿಗೆ ರಾಜಸ್ಥಾನ ತಂಡದ ಸಹ ಆಟಗಾರರಾದ ಅಜಿತ್‌ ಚಾಂಡಿಲಾ ಹಾಗೂ ಅಂಕಿತ್‌ ಚೌಹಾನ್‌ ಅವರ ಮೇಲೂ ನಿಷೇಧ ಹೇರಿತ್ತು.

ಭಾರತ ತಂಡದ ಪರ ಶ್ರೀಶಾಂತ್ ಅವರು 27 ಟೆಸ್ಟ್‌ ಹಾಗೂ 53 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 87 ಹಾಗೂ 75 ವಿಕೆಟ್‌ಗಳನ್ನು ಗಳಿಸಿದ್ದಾರೆ. 10 ಟ್ವೆಂಟಿ-20 ಪಂದ್ಯಗಳ ಮೂಲಕ ಏಳು ವಿಕೆಟ್‌ ಸಂಪಾದಿಸಿದ್ದಾರೆ.