ಲಕ್ನೋ: ಲಕ್ನೋದ ಏಕಾನಾ ಕ್ರಿಕೆಟ್ ಮೈದಾನದಲ್ಲಿಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್ ಗೆದ್ದ ಶ್ರೀಲಂಕಾ ೪೪ ಓವರುಗಳಲ್ಲಿ ೨೦೯ ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದು ಕೊಂಡಿತು. ಈ ಮೂಲಕ ಎದುರಾಳಿ ಆಸೀಸ್ ತಂಡಕ್ಕೆ ಸಾಧಾರಣ ಗುರಿ ನೀಡಿದೆ.
ಆರಂಭಿಕರಿಬ್ಬರ ಉತ್ತಮ ಜತೆಯಾಟದ ಹೊರತಾಗಿಯೂ ಸ್ಪಿನ್ನರ್ ಜಂಪಾ ದಾಳಿಗೆ ಕುಸಿಯಿತು. ಜಂಪಾ ನಾಲ್ಕು ವಿಕೆಟ್ ಕಿತ್ತರೆ, ವೇಗಿಗಳಾದ ಸ್ಟಾರ್ಕ್ ಹಾಗೂ ಕಮ್ಮಿನ್ಸ್ ತಲಾ ಎರಡು ಹಾಗೂ ಮ್ಯಾಕ್ಸ ವೆನ್ ಒಂದು ವಿಕೆಟ್ ಕಿತ್ತು, ಲಂಕೆಯ ಕುಸಿತಕ್ಕೆ ಮುಹೂರ್ತವಿಟ್ಟರು.
ಶ್ರೀಲಂಕಾ ಮೊದಲ ವಿಕೆಟ್ ಗೆ ೧೨೫ ರನ್ ಜತೆಯಾಟ ನೀಡಿತ್ತು. ಆದರೆ, ಮಧ್ಯಮ ಕ್ರಮಾಂಕದ ಆಟಗಾರರು ಈ ಭದ್ರ ಬುನಾದಿಯ ಸದುಪಯೋಗ ಪಡಿಸಿಕೊಳ್ಳಲಿಲ್ಲ. ಆರಂಭಿಕರಿಬ್ಬರನ್ನು ನಾಯಕ ಕಮ್ಮಿನ್ಸ್ ಪೆವಿಲಿಯನ್ ದಾರಿ ತೋರಿಸಿದರು.
ಉಭಯ ತಂಡಗಳು ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿವೆ. ಹಾಗಾಗಿ ಎರಡರಲ್ಲಿ ಒಂದು ತಂಡ ಇಂದಿನ ಪಂದ್ಯವನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಗೆಲುವಿನ ಖಾತೆ ತೆರೆಯಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ತಂಡ ತನ್ನ ಎರುಡು ಪಂದ್ಯಗಳನ್ನು ಸೋತರೆ, ಶ್ರೀಲಂಕಾ ತಂಡವು ದಕ್ಷಿಣ ಅಫ್ರಿಕಾ ಮತ್ತು ಪಾಕಿಸ್ತಾನದ ವಿರುದ್ಧ ಶರಣಾಗುವ ಮೂಲಕ ಅಂಕ ಪಟ್ಟಿಯಲ್ಲಿ ಹಿಂದಿದೆ. ಆಸ್ಟ್ರೇಲಿಯಾದ ಕಳಪೆ ಪ್ರದರ್ಶನ ತಂಡಕ್ಕೆ ಮುಳುವಾದರೆ, ಶ್ರೀಲಂಕಾ ಕಳೆದ ಪಂದ್ಯದಲ್ಲಿ 345 ರನ್ ಗಳಿಸಿಯೂ ಸೋತಿದೆ.