Friday, 20th September 2024

Afghanistan cricket: ಆಫ್ಘನ್‌ನಲ್ಲಿ ಕ್ರಿಕೆಟ್‌ ಬ್ಯಾನ್‌ ಮಾಡಲು ಮುಂದಾದ ತಾಲಿಬಾನ್!

Afghanistan cricket

ಕಾಬುಲ್: ಅಫಫ್ಘಾನಿಸ್ತಾನ, ಮಧ್ಯ ಪ್ರಾಚ್ಯದ ಈ ದೇಶ ಕ್ರೀಡೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ತೀರಾ ಹಿಂದುಳಿದ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಇಲ್ಲಿನ ಕ್ರೀಡಾ ವಿಭಾಗದ ಅಲ್ಪ ಮಟ್ಟದಲ್ಲಿ ಸುಧಾರಿಸಿತ್ತು. ಅದರಲ್ಲೂ ಕಳೆದ 5 ವರ್ಷದಲ್ಲಿ ಆಫ್ಘನ್ ಕ್ರಿಕೆಟ್​ ಮುಟ್ಟಿದ ಎತ್ತರ ಭಾರೀ ದೊಡ್ಡದು. ಇತ್ತೀಚಿಗೆ ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಸಂಚಲನ ಮೂಡಿಸಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ಅಫಘಾನಿಸ್ತಾನ(Afghanistan cricket) ತಂಡ ಪ್ರಗತಿಯತ್ತ ಸಾಗುತ್ತಿರುವಾಗಲೇ ತಾಲಿಬಾನ್(Taliban) ಸರ್ಕಾರ ತನ್ನ ದೇಶದಲ್ಲಿ ಕ್ರಿಕೆಟ್‌ ಬ್ಯಾನ್‌ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಕ್ರಿಕೆಟ್‌ ಸಂಪೂರ್ಣ ಅತಂತ್ರಗೊಂಡಿತ್ತು. ಪುರುಷರ ಕ್ರಿಕೆಟ್‌ ಅಲ್ಪಸ್ವಲ್ಪ ಜೀವ ಹಿಡಿದುಕೊಂಡಿದ್ದರೂ, ಮಹಿಳಾ ಕ್ರಿಕೆಟ್‌ ಮುಗಿಯಿತೆಂದೇ ಎಲ್ಲರೂ ಭಾವಿಸಿದ್ದರು. ಮಹಿಳೆಯರು ಮನೆಬಿಟ್ಟು ಹೊರಬಂದು ಕೆಲಸ ಮಾಡುವುದು ಇಸ್ಲಾಮ್‌ನ ಕಟ್ಟಾ ಅನುಯಾಯಿಗಳಾಗಿರುವ ತಾಲಿಬಾನಿಗಳಿಗೆ ಸಮ್ಮತವಿರಲಿಲ್ಲ. ಆದ್ದರಿಂದ ಮಹಿಳೆಯರು ಕ್ರೀಡಾಕ್ಷೇತ್ರಕ್ಕೆ ಪ್ರವೇಶಿಸುವುದಕ್ಕೆ ಕೂಡಲೇ ತಡೆಯೊಡ್ಡಿದ್ದರು. ಈ ಕುರಿತು ಐಸಿಸಿ ಒಂದು ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು. ತಾಲಿಬಾನ್‌ ಸರ್ಕಾರ, ಐಸಿಸಿ ಸಮಿತಿ ನಡುವೆ ಮಾತುಕತೆ ನಡೆದ ಬಳಿಕ ಮಹಿಳಾ ಕ್ರಿಕೆಟ್‌ಗೆ ಅನುಮತಿ ನೀಡಲಾಗಿತ್ತು.

ಇದೀಗ ಮತ್ತೆ ಅಫಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ ನಿಷೇಧದ ಮಾತುಗಳು ಕೇಳಿ ಬಂದಿವೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿದೆ. ಆದರೆ, ಈ ಬಗ್ಗೆ ತಾಲಿಬಾನ್ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಇಟಲಿಯ ಮೊನ್ಫಾಲ್ಕೋನ್ ನಗರದಲ್ಲಿ ಈಗಾಗಲೇ ಕ್ರಿಕೆಟ್ ನಿಷೇಧಿಸಲಾಗಿದೆ. ಅಲ್ಲದೇ ಕ್ರಿಕೆಟ್ ಆಡಿದ್ದೇ ಆದಲ್ಲಿ 10,000ರೂ. ದಂಡವನ್ನು ವಿಧಿಸುವದಾಗಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ Virat Kohli: 3 ತಿಂಗಳ ಬಳಿಕ ಭಾರತಕ್ಕೆ ಬಂದ ವಿರಾಟ್‌ ಕೊಹ್ಲಿ

ಒಂದೊಮ್ಮೆ ತಾಲಿಬಾನ್‌ ಕ್ರಿಕೆಟ್‌ ಬ್ಯಾನ್‌ ಮಾಡಿದ್ದೇ ಆದಲ್ಲಿ ರಶೀದ್ ಖಾನ್, ಮೊಹಮ್ಮದ್ ನಬಿ, ನವೀನ್‌ ಉಲ್‌ ಹಕ್‌ ಸೇರಿ ಹಲವು ಕ್ರಿಕೆಟಿಗರ ಭವಿಷ್ಯ ಅತಂತ್ರಗೊಳ್ಳಲಿದೆ. ಈಗಾಗಲೇ ಆಫ್ಘನ್‌ ಆಟಗಾರರು ವಿಶ್ವ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಗುರಿತಿಸಿಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಮಣಿಸುವ ಮಟ್ಟಿಗೆ ಬೆಳೆದ ಆಫ್ಘನ್‌ ತಂಡ ಇದೀಗ ತಾಲಿಬಾನ್‌ ಕೈಯಲ್ಲಿ ಸಿಲುಕಿದಂತಾಗಿದೆ.