Thursday, 19th September 2024

Afro-Asia Cup: ಒಂದೇ ತಂಡದಲ್ಲಿ ಆಡಲಿದ್ದಾರೆ ಭಾರತ-ಪಾಕ್‌ ಆಟಗಾರರು!

Afro-Asia Cup

ಮುಂಬಯಿ: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಕ್ರಿಕೆಟ್‌ ಪಂದ್ಯವೆಂದರೆ ಉಭಯ ದೇಶದ ಅಭಿಮಾನಿಗಳ ಪಾಲಿಗೆ ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಇದೀಗ ಇತ್ತಂಡಗಳ ಆಟಗಾರರು ಒಂದೇ ತಂಡದಲ್ಲಿ ಆಡುತ್ತಾರೆ ಎಂದರೆ ಅಭಿಮಾನಿಗಳ ಕಾತರ ಹೇಗಿರಲಿದೆ ಎನ್ನುವುದು ಊಹಿಸಲು ಸಾಧ್ಯವಿಲ್ಲ.ಹೌದು, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಸೇರಿ ಹಲವು ಆಟಗಾರರು ಒಂದೇ ತಂಡದಲ್ಲಿ ಆಡುವ ಅವಕಾಶವೊಂದು ಕಂಡುಬಂದಿದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಆಫ್ರೋ-ಏಷ್ಯಾ ಕಪ್ ಟೂರ್ನಿಯನ್ನು ಮತ್ತೆ ನಡೆಸಲು ಆಫ್ರಿಕಾ ಕ್ರಿಕೆಟ್ ಸಂಸ್ಥೆ ಉದ್ದೇಶಿಸಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಟೂರ್ನಿ ಆರಂಭಗೊಂಡರೆ ಭಾರತ ಮತ್ತು ಪಾಕ್‌ ಆಟಗಾರರು ಜತೆಯಾಗಿ ಒಂದೇ ತಂಡದಲ್ಲಿ ಆಡಲಿದ್ದಾರೆ.

2005 ಮತ್ತು 2007ರಲ್ಲಿಆಫ್ರೋ-ಏಷ್ಯಾ ಕಪ್ ಟೂರ್ನಿಯನ್ನು ನಡೆಸಲಾಗಿತ್ತು. ಈ ವೇಳೆ ಭಾರತ-ಪಾಕಿಸ್ತಾನ ಆಟಗಾರರು ಒಂದೇ ತಂಡದ ಪರ ಆಡಿದ್ದರು. ಆದರೆ ಕೆಲ ಅನಿವಾರ್ಯ ಕಾರಣಗಳಿಂದ ಈ ಟೂರ್ನಿ ಸ್ಥಗಿತಗೊಂಡಿತ್ತು. ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಏಷ್ಯಾದ ದೇಶಗಳ ಕ್ರಿಕೆಟಿಗರು ಒಂದು ತಂಡವನ್ನು ಮತ್ತು ಆಫ್ರಿಕನ್ ಆಟಗಾರರು ಮತ್ತೊಂದು ತಂಡವನ್ನು ರಚಿಸುತ್ತಾರೆ. ಈ ಹಿಂದೆ ಭಾರತ ಮತ್ತು ಪಾಕಿಸ್ತಾನದ ಹಲವು ಖ್ಯಾತ ಆಟಗಾರರು ಈ ಟೂರ್ನಿಯಲ್ಲಿ ಮಿಂಚಿದ್ದರು. ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್‌ ಧೋನಿ ಇರ್ಫಾನ್ ಪಠಾಣ್, ಜಹೀರ್ ಖಾನ್, ಅನಿಲ್ ಕುಂಬ್ಳೆ, ಇಂಜಮಾಮ್-ಉಲ್-ಹಕ್, ಶೋಯೆಬ್ ಅಖ್ತರ್ ಮತ್ತು ಶಾಹಿದ್ ಅಫ್ರಿದಿ ಏಷ್ಯನ್ ತಂಡದಲ್ಲಿ ಒಟ್ಟಿಗೆ ಆಡಿದ್ದರು. ಶಾನ್ ಪೊಲಾಕ್, ಟಟೆಂಡಾ ತೈಬು ಮತ್ತು ಜಾಕ್ವೆಸ್ ಕಾಲಿಸ್ ಅವರಂತಹ ಆಟಗಾರರು ಆಫ್ರಿಕನ್ ತಂಡದಲ್ಲಿ ಆಡಿದರು.

ಇದನ್ನೂ ಓದಿ Virat Kohli: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆಯಲು ಸಜ್ಜಾದ ಕಿಂಗ್‌ ಕೊಹ್ಲಿ

2008ರ ಆವೃತ್ತಿಯ ಐಪಿಎಲ್‌ನಲ್ಲಿ ಪಾಕ್‌ ಆಟಗಾರರು ಜತೆಯಾಗಿ ಆಡಿದ್ದರು. ಅದೇ ವರ್ಷ ಮುಂಬೈ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಆಟಗಾರರನ್ನು ಐಪಿಎಲ್​ನಿಂದ ನಿಷೇಧಿಸಲಾಗಿತ್ತು. ಹೀಗಾಗಿ ಭಾರತ ಮತ್ತು ಪಾಕ್‌ ಆಟಗಾರರು ಒಂದೇ ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡರು. ಇದೀಗ ಆಫ್ರೋ-ಏಷ್ಯಾ ಕಪ್ ಟೂರ್ನಿಯಲ್ಲಿ ಜತೆಯಾಗಿ ಆಡುವ ಸಾಧ್ಯತೆ ಇದೆ.

2022ರಲ್ಲಿ ಈ ಪಂದ್ಯಾವಳಿಯನ್ನು ಮತ್ತೆ ಪ್ರಾರಂಭಿಸಲು, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದ ಜಯ ಶಾ ಅವರು ಆಫ್ರಿಕಾದ ಕ್ರಿಕೆಟ್ ಸಂಸ್ಥೆಯ (ಎಸಿಸಿ) ಅಧ್ಯಕ್ಷರಾಗಿದ್ದ ಸುಮೋದ್ ದಾಮೋದರ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅಲ್ಲದೆ, ಎಸಿಸಿ ಅಭಿವೃದ್ಧಿ ಮುಖ್ಯಸ್ಥ ಮಹಿಂದ ವಲ್ಲಿಪುರಂ ಅವರೊಂದಿಗೆ ಸಮಾಲೋಚಿಸಿದ್ದರು. ಇದೀಗ ಮಹಿಂದ ಅವರು ಐಸಿಸಿ ಮಂಡಳಿಯ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಜಯ ಶಾ ಐಸಿಸಿ ಅಧ್ಯಕ್ಷರಾಗಿದ ಕಾರಣ ಆಫ್ರೋ-ಏಷ್ಯಾ ಕಪ್ ಕೂಟದ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದಾರೆ.