Saturday, 14th December 2024

ದೆಹಲಿಯಲ್ಲಿ ಜನವರಿ 28 ರಂದು ಅಖಿಲ ಭಾರತ ವಿಶ್ವಕರ್ಮ ರಾಷ್ಟ್ರೀಯ ಸಮಾವೇಶ

ಅಧಿಕಾರಿಗಳು, ಜನಪ್ರತಿನಿಧಿಗಳು, ಉದ್ಯಮ ವಲಯದ ಪ್ರಮುಖರು ಭಾಗಿ

ಸಮುದಾಯದ ಸಬಲೀಕರಣ ಗುರಿ ಸಾಧನೆಗೆ ನೀಲನಕ್ಷೆ. ರೂಪಿಸುವ ಗುರಿ

ಬೆಂಗಳೂರು: ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯಳ್ಳ ಹಾಗೂ ದೇಶಾದ್ಯಂತ 9.5 ಕೋಟಿ ಜನಸಂಖ್ಯೆ ಹೊಂದಿರುವ ಪ್ರಮುಖ ಸಮುದಾಯವಾಗಿದ್ದರೂ ಸಮಾಜದ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ ವಿಶ್ವಕರ್ಮ ಸಮುದಾಯ. ಈ ಸಮುದಾಯ ಅಭ್ಯುದಯದ ನೀಲನಕ್ಷೆ ರೂಪಿಸುವ ಹೆಗ್ಗುರಿಯೊಂದಗೆ ಅಖಿಲ ಭಾರತ ವಿಶ್ವಕರ್ಮ ಸಮಾವೇಶ ನವದೆಹಲಿಯಲ್ಲಿ ಜನವರಿ 28ರಂದು ನಡೆಯಲಿದೆ.

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ವಿವಿಧ ರಾಜ್ಯಗಳ ಸಚಿವರು, ರಾಜಕಾರಣಿಗಳು, ಉನ್ನತ ಅಧಿಕಾರಿ ಗಳು, ಉದ್ಯಮಿಗಳು, ಸಾಹಿತ್ಯ, ಸಂಗೀತ, ಸಿನಿಮಾ ಕ್ಷೇತ್ರದ ಗಣ್ಯರು, ಚಿಂತಕರು ಸೇರಿದಂತೆ ವಿಶ್ವಕರ್ಮ ಸಮಾಜದ ಕೆನೆಪದರವೇ ಆಗಮಿಸಲಿದೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನೆಲೆಸಿರುವ ಸುಮಾರು 9.5 ಕೋಟಿ ಅರ್ಥಾತ್ ದೇಶದ ಜನಸಂಖ್ಯೆಯ ಶೇ. 9ರಷ್ಟು ಜನಸಂಖ್ಯೆಯುಳ್ಳ ವಿಶ್ವಕರ್ಮ ಸಮುದಾಯದ ಸಬಲೀಕರಣ, ಏಕತೆ, ಹಿತಚಿಂತನೆ ಹಾಗೂ ಮುಂದಿನ ಜನಾಂಗವನ್ನು ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಹೇಗೆ ಸಶಕ್ತಗೊಳಿಸ ಬೇಕು ಎಂಬ ಬಗ್ಗೆ ಇಡೀ ಸಮುದಾಯದ ಮುಂಚೂಣಿ ನಾಯಕರು ವಿಸ್ತೃತ ಚರ್ಚೆ ನಡೆಸಲಿದ್ದಾರೆ.

ಜತೆಗೆ, ವಿಶ್ವಕರ್ಮ ಸಮುದಾಯವನ್ನು ರಾಷ್ಟ್ರಮಟ್ಟದಲ್ಲಿ ಸಂಘಟಿಸುವ ಮಾರ್ಗಸೂಚಿಯನ್ನು ಸಿದ್ದಪಡಿಸಲಿದ್ದಾರೆ.

ಕರ್ನಾಟಕದ ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್ ಅವರ ಸಾರಥ್ಯದಲ್ಲಿ ಈ ಪ್ರಮುಖ ಸಮಾವೇಶ ನಡೆಯಲಿದ್ದು, ನಿವೃತ್ತ ಡಿಜಿಪಿ ಸಂಗ್ರಾಮ್ ಜಂಗಿಡ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಸಮಾವೇಶದ ಸಂಘಟನೆಯ ಜವಾಬ್ದಾರಿಯನ್ನು ಬಿ. ರಾಜಶೇಖರ್ ಅವರು ವಹಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ 1.5 ಕೋಟಿ ಜನಸಂಖ್ಯೆ, ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ 75 ಲಕ್ಷ, ಗುಜರಾತಿನಲ್ಲಿ 50 ಲಕ್ಷ ಸೇರಿದಂತೆ ದೇಶದಲ್ಲಿ 9.5 ಕೋಟಿ ಜನಸಂಖ್ಯೆ ಅರ್ಥಾತ್ ದೇಶದ ಜನಸಂಖ್ಯೆಯ ಶೇ. 9ರಷ್ಟು ವಿಶ್ವಕರ್ಮ ಸಮುದಾಯವಿದೆ. ಇಷ್ಟುದೊಡ್ಡ ಸಂಖ್ಯೆಯ ಸಮುದಾಯವಾದರೂ ರಾಜಕೀಯ ವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದುವರೆದಿಲ್ಲ. ತನ್ನ ಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ಸಮಾಜದಲ್ಲಿ ಗಳಿಸಿಲ್ಲ.

ಅದನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಜನವರಿ 28 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9.30 ಗಂಟೆವರೆಗೆ ನಡೆಯಲಿರುವ ಸಮಾವೇಶದಲ್ಲಿ ವಿಶ್ವಕರ್ಮ ಸಮುದಾಯದ ಎಲ್ಲಾ ಪಕ್ಷಗಳ ಸಂಸದರು, ಶಾಸಕರು, ಮಾಜಿ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಉದ್ಯಮ ವಲಯದ ಪ್ರಮುಖ ನಾಯಕರು, ಸಮುದಾಯದ ಅಖಿಲ ಭಾರತ ನಾಗರಿಕ ಸೇವಾ ಅಧಿಕಾರಿಗಳು ಸೇರಿ ವಿಸ್ತೃತ ಚರ್ಚೆ ನಡೆಸಲಿದ್ದಾರೆ.

ಮುಂದಿನ ಜನಾಂಗವು ಶಿಕ್ಷಣರಂಗದಲ್ಲಿ ಉನ್ನತವಾದುದನ್ನು ಸಾಧಿಸಬೇಕು. ಉತ್ತಮ ಔದ್ಯೋಗಿಕ ಅವಕಾಶ ಲಭ್ಯವಾಗುವಂತೆ ಮಾಡಬೇಕು. ಸಮುದಾ ಯವು ರಾಷ್ಟ್ರಮಟ್ಟದಲ್ಲಿ ಒಂದು ಶಕ್ತಿಯಾಗಿ ಸಂಘಟಿತವಾಗಬೇಕು. ಒಟ್ಟಾರೆ ವಿಶ್ವಕರ್ಮ ಸಮುದಾಯದ ‍ಶ್ರೇಯೋಭಿವೃದ್ಧಿಗೆ ಏನೇನು ಮಾಡಬೇಕು ಎಂಬ ಬಗ್ಗೆ ಸೂಕ್ತ ನಿರ್ಣಯಗಳನ್ನು ಕೈಗೊಂಡು ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಲಾಗಿದೆ.

ಈ ಸಮಾವೇಶ ವಿಶ್ವಕರ್ಮ ಜನಾಂಗದ ಇತಿಹಾಸದಲ್ಲೇ ಮಹತ್ವದ ಘಟ್ಟವಾಗಲಿದೆ. ಈ ಸಮಾವೇಶದಲ್ಲಿ ಕೈಗೊಳ್ಳುವ ನಿರ್ಣಯಗಳು ಚಾಚೂ ತಪ್ಪದೇ ಪಾಲನೆಯಾಗಲಿದ್ದು, ಮುಂದಿನ ಪೀಳಿಗೆಯ ಸಬಲೀಕರಣದ ಗುರಿಯನ್ನು ಸಾಧಿಸಲಿದೆ ಎಂದು ಸಮಾವೇಶದ ಸಂಘಟಕ ರಘು ಆಚಾರ್ ಹೇಳುತ್ತಾರೆ.