Friday, 22nd November 2024

Alzarri Joseph: ದುರ್ವರ್ತನೆ ತೋರಿದ ಜೋಸೆಫ್‌ಗೆ 2 ಪಂದ್ಯ ಅಮಾನತು ಶಿಕ್ಷೆ

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ನಾಯಕ ಶಾಯ್ ಹೋಪ್(Shai Hope) ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪಂದ್ಯದ ನಡುವೆಯೇ ಮೈದಾನ ತೊರೆದಿದ್ದ ವೇಗಿ ಅಲ್ಜಾರಿ ಜೋಸೆಫ್‌ಗೆ(Alzarri Joseph) ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಅಮಾನತು(Alzarri Joseph suspended) ಶಿಕ್ಷೆ ವಿಧಿಸಿದೆ.

‘ಅಲ್ಜಾರಿ ಜೋಸೆಫ್‌ ಅವರ ನಡವಳಿಕೆಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ​ ಗಂಭೀರವಾಗಿ ಪರಿಗಣಿಸಿದೆ. ಅವರ ವರ್ತನೆ ತಪ್ಪು. ಈ ರೀತಿಯ ನಡವಳಿಕೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಮತ್ತು ಅದಕ್ಕೆ ಸೂಕ್ತ ಕ್ರಮವನ್ನು ನಾವು ಜರುಗಿಸಲೇಬೇಕು. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧ ಸರಣಿಯ ಎರಡು ಟಿ20 ಪಂದ್ಯಗಳಿಂದ ಅವರನ್ನು ಅಮಾನತುಗೊಳಿಸಿದ್ದೇವೆʼ ಎಂದು ವೆಸ್ಟ್​ ಇಂಡೀಸ್ ಕ್ರಿಕೆಟ್‌ನ ನಿರ್ದೇಶಕರಾದ ಮೈಲ್ಸ್ ಬಾಸ್ಕೊಂಬೆ ತಿಳಿಸಿದ್ದಾರೆ.

ತಪ್ಪಿನ ಬಗ್ಗೆ ಕ್ಷಮೆಯಾಚಿಸಿರುವ ಜೋಸೆಫ್‌, ತನ್ನ ನಡೆಯಿಂದ ವಿಂಡೀಸ್‌ ತಂಡಕ್ಕೆ ಕೆಟ್ಟ ಹೆಸರು ಬರುವಂತಾಯಿತು ಎಂದು ಬೇಸರ ಹೊರಹಾಕಿದ್ದಾರೆ. ತಂಡದ ಮುಖ್ಯ ಕೋಚ್‌ ಡೇರಾನ್‌ ಶಮಿ ಕೂಡ ಜೋಸೆಫ್‌ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ IND vs SA: ಇಂದು ಮೊದಲ ಟಿ20; ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ

ಗುರುವಾರ ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ನಾಲ್ಕನೇ ಓವರ್‌ನಲ್ಲಿ ಜೋಸೆಫ್‌ ಮಾರಕ ಬೌಲಿಂಗ್‌ ದಾಳಿ ನಡೆಸಿದ್ದರು. ಈ ಓವರ್‌ನ ಮೊದಲನೇ ಎಸೆತದ ಬಳಿಕ ಜೋಸೆಫ್‌, ಫೀಲ್ಡ್‌ ಸೆಟ್‌ ಅಪ್‌ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಜಾರ್ಡನ್‌ ಕಾಕ್ಸ್‌, ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು. ಜಾರ್ಡನ್‌ ಕಾಕ್ಸ್‌ ಅವರನ್ನು ಔಟ್‌ ಮಾಡಿದ ಬಳಿಕ ಜೋಸೆಫ್‌, ನಾಯಕ ಶೇಯ್‌ ಹೋಪ್‌ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಬೇಸರದೊಂದಿಗೆ ಡ್ರೆಸ್ಸಿಂಗ್‌ ರೂಂಗೆ ಹೆಜ್ಜೆ ಹಾಕಿದ್ದರು. ಆ ಬಳಿಕ ಕೋಚ್‌ ಸಮಧಾನ ಪಡಿಸಿದ ಬಳಿಕ ಜೋಸೆಫ್‌ ಮತ್ತೆ ಅಂಗಳಕ್ಕಿಳಿದಿದ್ದರು. 10 ಓವರ್‌ಗಳಿಂದ 45 ರನ್‌ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.

ಆರಂಭಕಾರ ಬ್ರ್ಯಾಂಡನ್‌ ಕಿಂಗ್‌ ಮತ್ತು ವನ್‌ಡೌನ್‌ ಬ್ಯಾಟರ್‌ ಕೇಸಿ ಕಾರ್ಟಿ ಸಿಡಿಸಿದ ಅಮೋಘ ಶತಕಗಳ ನೆರವಿನಿಂದ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ವೆಸ್ಟ್‌ ಇಂಡೀಸ್‌, ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 8 ವಿಕೆಟಿಗೆ 263 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ 43 ಓವರ್‌ಗಳಲ್ಲಿ 2 ವಿಕೆಟಿಗೆ 267 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ವಿಂಡೀಸ್‌ ಪರ ಬ್ರ್ಯಾಂಡನ್‌ ಕಿಂಗ್‌ 117 ಎಸೆತಗಳಿಂದ 102 ರನ್‌ ಬಾರಿಸಿದರೆ (13 ಬೌಂಡರಿ, 1 ಸಿಕ್ಸರ್‌), ಕೇಸಿ ಕಾರ್ಟಿ 114 ಎಸೆತಗಳಿಂದ 124 ರನ್‌ ಹೊಡೆದು ಅಜೇಯರಾಗಿ ಉಳಿದರು (15 ಬೌಂಡರಿ, 2 ಸಿಕ್ಸರ್‌). ಕಾರ್ಟಿ ಅವರ ಚೊಚ್ಚಲ ಶತಕ ಇದಾಗಿತ್ತು. ಇತ್ತಂಡಗಳು ಇನ್ನು ನಾಲ್ಕು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.