Tuesday, 17th December 2024

Ankit Rajpoot: ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಅಂಕಿತ್ ರಜಪೂತ್

ನವದೆಹಲಿ: ಉತ್ತರಪ್ರದೇಶದ ವೇಗಿ ಅಂಕಿತ್ ರಜಪೂತ್(Ankit Rajpoot) ಅವರು ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 31 ವರ್ಷದ ಅಂಕಿತ್ ದೇಶೀಯ ಮತ್ತು ಐಪಿಎಲ್‌ ಟೂರ್ನಿಯಲ್ಲಿ ಬೌಲಿಂಗ್‌ ಮೂಲಕ ಗಮನಸೆಳೆದಿದ್ದರು. ಮುಂದಿನ ಆವೃತ್ತಿಗಾಗಿ ನಡೆದ ಐಪಿಎಲ್‌ ಹರಾಜಿನಲ್ಲಿ ರಜಪೂತ್ ಅನ್‌ಸೋಲ್ಡ್‌ ಆಗಿದ್ದರು. ಇತ್ತೀಚೆಗೆ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡದಲ್ಲಿ ಆಡಿದ್ದರು. ಮುಂದೆ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಮಾತ್ರ ಆಡುವುದಾಗಿ ತಿಳಿಸಿದ್ದಾರೆ.

ಕ್ರಿಕೆಟಿಗನಾಗಿ ನನ್ನ ಮುಂದಿನ ಹೆಜ್ಜೆಯನ್ನು ಇಡಲು ಹೊರಟಿರುವೆ. ಆದ್ದರಿಂದ ನಿವೃತ್ತಿ ಘೋಷಿಸಿರುವೆ. ನನ್ನ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಇದುವರೆಗೆ ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಋಣಿಯಾಗಿರುವೆ ಎಂದು ಹೇಳಿರುವ ಅಂಕಿತ್, ರಾಜ್ಯ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬೌನ್ಸ್ ಹಾಗೂ ಸ್ವಿಂಗ್ ಬೌಲಿಂಗ್‌ ಸಾಮರ್ಥ್ಯ ಹೊಂದಿರುವ ರಜಪೂತ್ ಐಪಿಎಲ್ ತಂಡಗಳಾದ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಲಕ್ನೊ ಸೂಪರ್ ಜೈಂಟ್ಸ್ ಪರ ಆಡಿದ್ದರು. 2012-13ರ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿದ್ದ 80 ಪ್ರಥಮ ದರ್ಜೆ ಪಂದ್ಯಗಳು, 50 ಲಿಸ್ಟ್ ಎ ಮತ್ತು 87 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಕ್ರಮವಾಗಿ 248, 71 ಮತ್ತು 105 ವಿಕೆಟ್‌ಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ 29 ಪಂದ್ಯಗಳನ್ನು ಆಡಿ 24 ವಿಕೆಟ್‌ ಕಿತ್ತಿದ್ದಾರೆ. 14 ರನ್‌ಗೆ 4 ವಿಕೆಟ್‌ ಪಡೆದದ್ದು ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಟಿಮ್‌ ಸೌಥಿಗೆ ಗೆಲುವಿನ ವಿದಾಯ

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ತಂಡದ ಹಿರಿಯ ವೇಗಿ ಟಿಮ್‌ ಸೌಥಿ(Tim Southee) ಅವರು ಗೆಲುವಿನೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್‌(3rd Test NZ vs ENG) ವಿರುದ್ಧದ ತವರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಬರೋಬ್ಬರಿ 423 ರನ್‌ಗಳ ಜಯ ಸಾಧಿಸಿ ಮೆರೆದಾಡಿತು. ಈ ಗೆಲುವಿನೊಂದಿಗೆ ಸೌಥಿ ತಮ್ಮ ಟೆಸ್ಟ್‌ ಕ್ರಿಕೆಟ್‌ ಬಾಳ್ವೆಯನ್ನು ಸ್ಮರಣೀಯಗೊಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 347 ರನ್‌ ಬಾರಿಸಿದ್ದ ನ್ಯೂಜಿಲ್ಯಾಂಡ್‌ ದ್ವಿತೀಯ ಇನಿಂಗ್ಸ್‌ನಲ್ಲಿ 453 ರನ್‌ ಬಾರಿಸಿ 657 ರನ್‌ ಮುನ್ನಡೆ ಸಾಧಿಸಿತ್ತು. ಗೆಲುವಿಗೆ 658 ರನ್‌ ಬೆನ್ನಟ್ಟಿದ ಇಂಗ್ಲೆಂಡ್‌ 234 ರನ್‌ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಅಂತಿಮ ಪಂದ್ಯ ಸೋತರೂ ಮೊದಲೆರಡು ಪಂದ್ಯದಲ್ಲಿ ಗೆಲುವು ಸಾಧಿಸಿದ ಕಾರಣ ಸರಣಿ ಇಂಗ್ಲೆಂಡ್‌ ಪಾಲಾಯಿತು.