ಟ್ಲಾಕ್ಸ್ಕಲಾ (ಮೆಕ್ಸಿಕೊ): ಒಲಿಂಪಿಯನ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ(Deepika Kumari) ಅವರು ಇಲ್ಲಿ ನಡೆದ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ(Archery World Cup) ಚೀನಾದ ಲಿ ಜಿಯಾಮನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ನಾಲ್ಕನೇ ಶ್ರೇಯಾಂಕದ ಲಿ ಜಿಯಾಮನ್ ವಿರುದ್ಧ ಚಿನ್ನದ ಪದಕಕ್ಕಾಗಿ ಹೋರಾಟದಲ್ಲಿ 0-6 ಅಂತರದಿಂದ ಸೋತು ನಿರಾಸೆ ಕಂಡರು. ಇದು ಆರ್ಚರಿ ವಿಶ್ವಕಪ್‌ನಲ್ಲಿ ದೀಪಿಕಾಗೆ ಒಲಿದ ಐದನೇ ಬೆಳ್ಳಿ ಪದಕ. ಕಳೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೀಪಿಕಾ ಕುಮಾರಿಸ್ ಅವರು ದಕ್ಷಿಣ ಕೊರಿಯಾದ ನಾಮ್ ಸು-ಹಿಯೋನ್ ವಿರುದ್ಧ ಕ್ವಾರ್ಟರ್‌ಫೈನಲ್ ಸೋಲು ಕಂಡಿದ್ದರು.
ಪುರುಷರ ರಿಕರ್ವ್ ವಿಭಾಗದಲ್ಲಿ, ಧೀರಜ್ ಬೊಮ್ಮದೇವರ ಅವರು 4-2 ರಿಂದ ಮುನ್ನಡೆ ಸಾಧಿಸಿದ್ದರೂ, ಆರಂಭಿಕ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲೀ ವೂ ಸಿಯೋಕ್ ಅವರ ವಿರುದ್ಧ ಸೋತು ನಿರ್ಗಮನ ಕಂಡರು.
ಬೆಂಗಳೂರು ಓಪನ್ ಎಟಿಎಫ್: ತನಿಶಾ ಕಶ್ಯಪ್ ಚಾಂಪಿಯನ್
ಬೆಂಗಳೂರು: ಬೆಂಗಳೂರು ಓಪನ್ ಎಟಿಎಫ್ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಭಾರತ ತನಿಶಾ ಕಶ್ಯಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆದಿದ್ದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ 22 ವರ್ಷ ತನಿಶಾ ಅವರು ಆಕಾಂಕ್ಷಾ ವಿರುದ್ಧ 6-7(5/7), 6-1, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್ ಕಳೆದುಕೊಂಡ ಹೊರತಾಗಿಯೂ ಬಳಿಕ 2 ಸೆಟ್‌ಗಳಲ್ಲಿ ತನಿಶಾ ಅಭೂತಪೂರ್ವ ಪ್ರದರ್ಶನ ನೀಡಿದರು.
ಆಕಾಂಕ್ಷಾ ಮಹಿಳಾ ಡಬಲ್ಸ್‌ನಲ್ಲೂ ಪ್ರಶಸ್ತಿ ತಪ್ಪಿಸಿಕೊಂಡರು. ಹುಮೇರಾ ಬಹಾರ್‌ಮಸ್ ಹಾಗೂ ಪೂಜಾ ಜೋಡಿ ಭಾನುವಾರ ನಡೆದ ಫೈನಲ್‌ನಲ್ಲಿ ಆಕಾಂಕ್ಷಾ-ಕರ್ನಾಟಕದ ಸೋಹಾ ಸಾದಿಕ್ ವಿರುದ್ಧ 6-3, 0-6, 6-10 ಅಂತರದಲ್ಲಿ ಜಯಭೇರಿ ಮೊಳಗಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು.