Thursday, 12th December 2024

ಕ್ವಾರ್ಟರ್ ಫೈನಲ್: ಅರ್ಜೆಂಟೀನಾಗೆ ಗೆಲುವು

ನವದೆಹಲಿ: ಫುಟ್ಬಾಲ್ ಪ್ರೇಮಿಗಳನ್ನು ತುದಿಗಾಗಲ್ಲಿ ನಿಲ್ಲಿಸಿದ ಅರ್ಜೆಂಟೀನಾ- ನೆದರ್ಲೆಂಡ್ಸ್ ನಡುವಿನ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ನೇತೃತ್ವದ ತಂಡ ಪೆನಾಲ್ಟಿ ಶೂಟೌಟ್‍ನಲ್ಲಿ 4-3ರಿಂದ ನೆದರ್ಲೆಂಡ್ಸ್ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿದೆ.

ಈ ಮೂಲಕ ಅರ್ಜೆಂಟೀನಾ ಹಾಗೂ ಮೆಸ್ಸಿ ವಿಶ್ವಕಪ್ ಕನಸು ಜೀವಂತವಾಗಿ ಉಳಿದಿದೆ.

ಕಳೆದ ಬಾರಿಯ ರನ್ನರ್ ಅಪ್ ಕ್ರೊವೇಶಿಯಾ ವಿರುದ್ಧ ಬುಧವಾರ ನಡೆಯುವ ಸೆಮಿ ಫೈನಲ್‍ನಲ್ಲಿ ಅರ್ಜೆಂಟೀನಾ ಸೆಣೆಸಲಿದೆ. ಮತ್ತೊಂದು ಪೆನಾಲ್ಟಿ ಶೂಟೌಟ್ ಗೆಲುವಿನಲ್ಲಿ ಬ್ರೆಝಿಲ್ ತಂಡವನ್ನು ಮಣಿಸಿದ ಕ್ರೊವೇಶಿಯಾ ಸೆಮಿಫೈನಲ್ ತಲುಪಿತ್ತು.

ಲೂಸಿಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ತಂಡ ಪಂದ್ಯದ ಉತ್ತರಾರ್ಧದಲ್ಲಿ 2-0 ಗೋಲುಗಳಿಂದ ಮುಂದಿತ್ತು ಹಾಗೂ ಸೆಮಿ ಫೈನಲ್‍ಗೆ ಸುಲಭವಾಗಿ ಪ್ರವೇಶ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಬದಲಿ ಆಟಗಾರ ವೂಟ್ ವೆಗೋಸ್ಟ್ ಕೊನೆಕ್ಷಣದಲ್ಲಿ ಎರಡು ಗೋಲು ಗಳಿಸುವ ಮೂಲಕ ಪಂದ್ಯ ವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸುವಂತೆ ಮಾಡಿದರು. 30 ನಿಮಿಷಗಳ ಹೆಚ್ಚಿನ ಅವಧಿಯ ಬಳಿಕವೂ 2-2 ಸಮಬಲ ಮುಂದುವರಿಯಿತು. ಇದರಿಂದಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.

ಅರ್ಜೆಂಟೀನಾ ಗೋಲುಕೀಪರ್ ಎಮಿ ಮಾರ್ಟಿನ್ಸ್ ಅವರು ನೆದರ್ಲೆಂಡ್ಸ್‌ನ ಮೊದಲ ಎರಡು ಪೆನಾಲ್ಟಿಗಳನ್ನು ತಡೆದು ಅರ್ಜೆಂಟೀನಾಗೆ 2-0 ಮುನ್ನಡೆಯನ್ನು ಉಳಿಸಿಕೊಳ್ಳಲು ಕಾರಣರಾದರು. ಅದರೆ ನಾಲ್ಕು ಪೆನಾಲ್ಟಿಗಳನ್ನು ಪಡೆದ ಎನ್ಝೋ ಫೆರ್ನಾಂಡಿಸ್ ಅವರು ಅರ್ಜೆಂಟೀನಾ ಪರ ಸ್ಪಾಟ್ ಕಿಕ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.