ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ 2023 ರ ಒಂಬತ್ತನೇ ದಿನ ಭಾರತೀಯ ರೋಲರ್ ಸ್ಕೇಟರ್ಗಳ ಪುರುಷ ಮತ್ತು ಮಹಿಳೆಯರ 3000 ಮೀಟರ್ ತಂಡ ರಿಲೇ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿ ಕೊಂಡಿದೆ.
ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ಗಳಾದ ಆರತಿ ಕಸ್ತೂರಿರಾಜ್, ಹೀರಾಲ್, ಸಂಜನಾ ಬತುಲಾ ಮತ್ತು ಕಾರ್ತಿಕಾ ಜಗದೀಶ್ವರನ್ ಅವರ ಮಹಿಳಾ ತಂಡವು ಕಂಚಿನ ಪದಕ ಗಳಿಸಿತು. 4:34.861 ಸೆಕೆಂಡ್ಗಳೊಂದಿಗೆ ಆಟ ಪೂರ್ಣಗೊಳಿಸಿ ಭಾರತ ಇಂದಿನ ಖಾತೆ ತೆರೆಯಿತು. ಹಾಗೆಯೇ, ಚೈನೀಸ್ ತೈಪೆ (4:19.447) ಮತ್ತು ದಕ್ಷಿಣ ಕೊರಿಯಾ 4:21.146 ಸೆಕೆಂಡ್ನಲ್ಲಿ ಆಟ ಮುಕ್ತಾಯಗೊಳಿಸಿ ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದುಕೊಂಡಿತು.
ಆರ್ಯನ್ಪಾಲ್ ಸಿಂಗ್ ಘುಮಾನ್, ಆನಂದಕುಮಾರ್ ವೆಲ್ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಳೆ ಅವರು ಪುರುಷರ ತಂಡ ರಿಲೇಯಲ್ಲಿ 4:10.128 ಸೆಕೆಂಡ್ಗಳೊಂದಿಗೆ ಎರಡನೇ ಕಂಚಿನ ಪದಕ ಗೆದ್ದರು.
ಭಾರತ ತನ್ನ ಕಬಡ್ಡಿ ಪಂದ್ಯವನ್ನು ಆರಂಭಿಸಲಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರರು ಕೂಡ ಇಂದು ತಮ್ಮ ಸವಾಲನ್ನು ಎದುರಿಸಲು ಸಿದ್ಧ ರಾಗಿದ್ದಾರೆ. ಭಾರತ ಒಟ್ಟಾರೆ 55 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ.