ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ ವಾಲಿಬಾಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡವು ಹಾಲಿ ರನ್ನರ್‌ಅಪ್ ದಕ್ಷಿಣ ಕೊರಿಯಾವನ್ನು ಮಣಿಸಿ ನಾಕೌಟ್ ಹಂತ ಪ್ರವೇಶಿಸಿತು.
2 ಗಂಟೆ 38 ನಿಮಿಷಗಳ ಕಾಲ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ 3-2 ಅಂತರದಿಂದ ಎದುರಾಳಿ ತಂಡವನ್ನು ಸೋಲಿಸಿತು.
ವಾಲಿಬಾಲ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 73ನೇ ಸ್ಥಾನದಲ್ಲಿರುವ ಭಾರತ, 27ನೇ ಶ್ರೇಯಾಂಕದಲ್ಲಿರುವ ಬಲಾಢ್ಯ ದಕ್ಷಿಣ ಕೋರಿಯಾ ವಿರುದ್ಧ 25-27, 29-27, 25-22, 20-25, 17-15 ಅಂತರಗಳಿಂದ ಗೆಲುವಿನ ಕೇಕೆ ಹಾಕಿತು. ಭಾರತದ ಪರ ಅಮಿತ್ ಗುಲಿಯಾ ಮತ್ತು ಅಶ್ವಲ್ ರೈ ಅದ್ಭುತ ಪ್ರದರ್ಶನ ತೋರಿ ಉತ್ತಮ ಅಂಕಗಳನ್ನು ಕಲೆಹಾಕುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ದಕ್ಷಿಣ ಕೊರಿಯಾ 1966 ರಿಂದ 2018ರ ವರೆಗಿನ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದುಕೊಂಡಿದೆ. 1978, 2002 ಮತ್ತು 2006ರಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದ ಕೊರಿಯಾ, ಏಳು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದೆ.
ಮಂಗಳವಾರ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ಎದುರಾಳಿ ಕಾಂಬೋಡಿಯಾವನ್ನು 3-0 ಅಂತರದಿಂದ ಸೋಲಿಸಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕೊನೆಯದಾಗಿ 1986ರಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.