ಮೆಲ್ಬರ್ನ್: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ದ ಮೊದಲ ದಿನದ ಊಟದ ವಿರಾಮದ ವೇಳೆಗೆ ಆಸೀಸ್ ತಂಡ ಮೂರು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟಿಮ್ ಪೇನ್ ಪಡೆಯ ಲೆಕ್ಕಾಚಾರವನ್ನು ಭಾರತೀಯ ಬೌಲರ್ ಗಳು ಅಡಿಮೇಲು ಮಾಡಿದರು. ಬುಮ್ರಾ ಆರಂಭದಲ್ಲೇ ಭಾರತಕ್ಕೆ ಮುನ್ನಡೆ ಒದಗಿಸಿದರು. ಖಾತೆ ತೆರೆಯದ ಜೋ ಬರ್ನ್ಸ್ ಕೀಪರ್ ಪಂತ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಮ್ಯಾಥ್ಯೂ ವೇಡ್ 30 ರನ್ ಗಳಿಸಿದ್ದಾಗ ಅಶ್ವಿನ್ ಎಸೆತದಲ್ಲಿ ಜಡೇಜಾಗೆ ಕ್ಯಾಚಿತ್ತರು. ಆಸೀಸ್ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಖಾತೆ ತೆರೆಯದೆ ಅಶ್ವಿನ್ ಗೆ ಬಲಿಯಾದರು. ಸದ್ಯ ಮಾರ್ನಸ್ ಲಬುಶೇನ್ (26 ರನ್ ) ಮತ್ತು ಟ್ರಾವಿಸ್ ಹೆಡ್ (4 ರನ್) ಆಡುತ್ತಿದ್ದಾರೆ.
ಅಡಿಲೇಡ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡು, ಭಾರೀ ಟೀಕೆ ಎದುರಿಸಿದ ಆರಂಭಕಾರ ಪೃಥ್ವಿ ಶಾ (0 ಮತ್ತು 4ರನ್) ಅವರನ್ನು ಹೊರಗಿರಿಸಲಾಗಿದೆ. ಬದಲು ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪಂಜಾಬಿನ ಬಲಗೈ ಬ್ಯಾಟ್ಸ್‌ಮನ್ ಪಾಲಿಗೆ ಇದು ಪದಾರ್ಪಣ ಟೆಸ್ಟ್. ಟೆಸ್ಟ್ ಕ್ಯಾಪ್ ಧರಿಸಿದ ಮತ್ತೂಬ್ಬ ಆಟಗಾರ ಮೊಹಮ್ಮದ್ ಸಿರಾಜ್. ಸಿರಾಜ್ ಏಕೈಕ ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಷ್ಟೇ ಭಾರತವನ್ನು ಪ್ರತಿನಿಧಿಸಿದ್ದಾರೆ.
ಗಾಯಾಳಾಗಿ ಮೊದಲ ಟೆಸ್ಟ್ ಪಂದ್ಯ ವನ್ನು ತಪ್ಪಿಸಿಕೊಂಡಿದ್ದ ರವೀಂದ್ರ ಜಡೇಜ ಅವರ ಪುನರಾಗಮನವಾಗಿದೆ. ಅನುಭವಿ ವೃದ್ಧಿಮಾನ್ ಸಾಹಾ ಜಾಗದಲ್ಲಿ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ.