Sunday, 15th December 2024

AUS vs IND: ಸ್ಮಿತ್‌-ಹೆಡ್‌ ಶತಕ ವೈಭವ; ಬೃಹತ್‌ ಮೊತ್ತ ಪೇರಿಸಿದ ಆಸೀಸ್‌

ಬ್ರಿಸ್ಬೇನ್‌: ಟ್ರಾವಿಸ್ ಹೆಡ್(Travis Head) ಮತ್ತು ಸ್ವೀವನ್‌ ಸ್ಮಿತ್(Steven Smith) ಬಾರಿಸಿದ ಅಮೋಘ ಶತಕದ ನೆರೆವಿನಿಂದ ಆಸ್ಟ್ರೇಲಿಯಾ(AUS vs IND) ತಂಡ ಮೂರನೇ ಟೆಸ್ಟ್‌ನಲ್ಲಿ ಬೃಹತ್‌ ಮೊತ್ತದತ್ತ ದಾಪುಗಾಲಿಕ್ಕಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 405 ರನ್‌ ಬಾರಿಸಿದೆ. ಮೊದಲ ದಿನ ಮಳೆಯಿಂದ 13.2 ಒವರ್‌ಗೆ ಸ್ಥಗಿತಗೊಂಡಿದ್ದ ಕಾರಣ ನಷ್ಟವಾದ ಆಟವನ್ನು ದ್ವಿತೀಯ ದಿನದಾಟದಲ್ಲಿ ಹೆಚ್ಚುವರಿ ಆಟವಾಡುವ ಮೂಲಕ101 ಓವರ್‌ ತನಕ ಆಟ ಮುಂದುವರಿಸಲಾಯಿತು.

ಶನಿವಾರ ವಿಕೆಟ್‌ ನಷ್ಟವಿಲ್ಲದೆ 28 ರನ್‌ ಮಾಡಿದ್ದ ಆಸ್ಟ್ರೇಲಿಯಾ ಭಾನುವಾರ ಬ್ಯಾಟಿಂಗ್‌ ಆರಂಭಿಸಿದೊಡೆನೆ ಸತತ ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆದರೆ ಈ ವೇಳೆ ಜತೆಯಾದ ಸ್ವೀವನ್‌ ಸ್ಮಿತ್‌ ಮತ್ತು ಟ್ರಾವಿಸ್‌ ಹೆಡ್‌ ನಾಲ್ಕನೇ ವಿಕೆಟ್‌ಗೆ ಬರೋಬ್ಬರಿ 241 ರನ್‌ ಒಟ್ಟುಗೂಡಿಸಿದರು. ಉಭಯ ಆಟಗಾರರು ಶತಕ ಬಾರಿಸಿ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಇದು ಸ್ಮಿತ್‌ ಮತ್ತು ಹೆಡ್‌ ಭಾರತ ವಿರುದ್ಧ 200 ಪ್ಲಸ್‌ ಜತೆಯಾಟ ನಡೆಸಿದ 2ನೇ ನಿದರ್ಶನ. ದಾಖಲೆ ರಿಕ್ಕಿ ಪಾಂಟಿಂಗ್‌ ಮತ್ತು ಮೈಕಲ್‌ ಕ್ಲಾರ್ಕ್‌ ಹೆಸರಿನಲ್ಲಿದೆ. ಈ ಜೋಡಿ ಮೂರು ಬಾರಿ 200 ಪ್ಲಸ್‌ ಜತೆಯಾಟ ನಡೆಸಿದ್ದಾರೆ.

ಭಾರತಕ್ಕೆ ಪ್ರತಿ ಬಾರಿಯೂ ತಲೆನೋವು ಉಂಟು ಮಾಡುವ ಟ್ರಾವಿಸ್‌ ಹೆಡ್‌ ಈ ಪಂದ್ಯದಲ್ಲಿ ಶತಕ ಬಾರಿಸಿ ಕಾಡಿದರು. 160 ಎಸೆತ ಎದುರಿಸಿದ ಹೆಡ್‌ 18 ಬೌಂಡರಿ ನೆರವಿನಿಂದ 152 ರನ್‌ ಬಾರಿಸಿ ಜಸ್‌ಪ್ರೀತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಕಳೆದ 18 ತಿಂಗಳಿಂದ ರನ್‌ ಬರಗಾಲ ಎದುರಿಸಿದ್ದ ಅನುಭವಿ ಸ್ಟೀವನ್‌ ಸ್ಮಿತ್‌ ಶತಕ ಬಾರಿಸಿ ಮತ್ತೆ ಹಳೆಯ ಬ್ಯಾಟಿಂಗ್‌ ಲಯಕ್ಕೆ ಮರಳಿದರು. ಅವರು 190 ಎಸೆತ ಎದುರಿಸಿ 101 ರನ್‌ ಬಾರಿಸಿದರು. ಈ ವಿಕೆಟ್‌ ಕೂಡ ಬುಮ್ರಾ ಪಾಲಾಯಿತು. ಸ್ಮಿತ್‌ ಶತಕ ಬಾರಿಸುವ ಮೂಲಕ ಭಾರತ ವಿರುದ್ಧ ಅತ್ಯಧಿಕ ಶತಕ ಬಾರಿಸಿದ ಮೊದಲ ವಿದೇಶಿ ಬ್ಯಾಟರ್‌ ಎನಿಸಿಕೊಂಡರು. ಭಾರತ ವಿರುದ್ಧ 41 ಇನಿಂಗ್ಸ್‌ ಆಡಿರುವ ಸ್ಮಿತ್‌ 10 ಶತಕ ಬಾರಿಸಿದ್ದಾರೆ. ಸದ್ಯ ಅಲೆಕ್ಸ್‌ ಕ್ಯಾರಿ(45) ಮತ್ತು ಮಿಚೆಲ್‌ ಸ್ಟಾರ್ಕ್‌(7) ರನ್‌ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ Shakib Al Hasan: ಶಕೀಬ್‌ಗೆ ಬೌಲಿಂಗ್‌ ನಿಷೇಧ ಹೇರಿದ ಇಸಿಬಿ

ದಾಖಲೆ ಬರೆದ ಬುಮ್ರಾ

ಭಾರತ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 72 ರನ್‌ ವೆಚ್ಚದಲ್ಲಿ 5 ವಿಕೆಟ್‌ ಕಿತ್ತು ಮಿಂಚಿದರು. ಈ ವೇಳೆ ಅವರು ಮಾಜಿ ಆಟಗಾರ ಕಪಿಲ್‌ ದೇವ್‌ ಅವರ ದಾಖಲೆಯೊಂದನ್ನು ಮುರಿದರು. ವಿದೇಶಿ ನೆಲದಲ್ಲಿ ಆಡಿದ್ದ ಟೆಸ್ಟ್‌ ಪಂದ್ಯದಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತದ ವೇಗಿ ಎಂಬ ದಾಖಲೆಯನ್ನು ಬರೆದರು. ಇದಕ್ಕೂ ಮುನ್ನ ಈ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿತ್ತು. ಕಪಿಲ್ ದೇವ್​ 10 ಬಾರಿ 5 ವಿಕೆಟ್​ಗಳ ಗೊಂಚಲು ಪಡೆದಿದ್ದರು. ಇದೀಗ ಬುಮ್ರಾ 11ನೇ ಬಾರಿ 5 ವಿಕೆಟ್ ಕಬಳಿಸುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಇದು ಮಾತ್ರವಲ್ಲದೆ ಸೇನಾ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ) ದೇಶಗಳಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್​ ಎಂಬ ದಾಖಲೆ ಕೂಡ ಬುಮ್ರಾ ಪಾಲಾಗಿದೆ. ಒಟ್ಟು 8 ಬಾರಿ 5 ವಿಕೆಟ್ ಕಬಳಿಸಿದ್ದಾರೆ.