Wednesday, 18th December 2024

AUS vs IND: ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯ

ಬ್ರಿಸ್ಬೇನ್‌: ಹಲವು ಬಾರಿ ಮಳೆಯಿಂದ ಅಡಚಣೆಯಾದ ಭಾರತ(AUS vs IND) ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಅಂತಿಮ ದಿನವಾದ ಬುಧವಾರವೂ ಮಳೆಯಿಂದ ಹಲವು ಬಾರಿ ಪಂದ್ಯ ಸ್ಥಗಿತಗೊಂಡ ಬಳಿಕ ಅಂತಿಮವಾಗಿ ಉಭಯ ತಂಡಗಳ ನಾಯಕು ಅಂಪೈರ್‌ ಬಳಿ ಚರ್ಚಿಸಿ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದರು. ನಾಲ್ಕನೇ ಪಂದ್ಯ ಡಿ.26 ರಿಂದ ಮೆಲ್ಬರ್ನ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಆರಂಭಗೊಳ್ಲಿದೆ. ಇದು ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯವಾಗಿದೆ.

4ನೇ ದಿನದ ಕೊನೆಯಲ್ಲಿ 9 ವಿಕೆಟಿಗೆ 252 ರನ್‌ ಗಳಿಸಿದ್ಧ ಭಾರತ ಬುಧವಾರ 260 ರನ್‌ಗೆ ಆಲೌಟ್‌ ಆಯಿತು. ಫಾಲೋಆನ್‌ ತೂಗುಗತ್ತಿಯಿಂದ ತಂಡೌನ್ನು ಪಾರು ಮಾಡಿದ್ದ ವೇಗಿಗಳಾದ ಆಕಾಶ್‌ದೀಪ್‌ ಅತ್ಯಮೂಲ್ಯ 31 ರನ್‌ ಕೊಡುಗೆ ನೀಡಿದರು. ಜಸ್‌ಪ್ರೀತ್‌ ಬುಮ್ರಾ 10 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಆಸೀಸ್‌ ಪರ ಪ್ಯಾಟ್‌ ಕಮಿನ್ಸ್‌ 4, ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌ ಕಿತ್ತು ಮಿಂಚಿದರು.

ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ 7 ವಿಕೆಟ್‌ಗೆ 89 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿ ಭಾರತಕ್ಕೆ 275 ರನ್‌ಗಳ ಗೆಲುವಿನ ಗುರಿ ನೀಡಿತು. ಗುರಿ ಬೆನ್ನಟ್ಟಿದ ಭಾರತ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿದ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿತು. ಭೋಜನ ವಿರಾಮದ ತನಕ ಕಾದರೂ ಮಳೆ ನಿಲ್ಲು ಸೂಚನೆ ಕಂಡು ಬಾರದ ಕಾರಣ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಜೈಸ್ವಾಲ್‌(4) ಮತ್ತು ಕೆ.ಎಲ್‌ ರಾಹುಲ್‌(4) ರನ್‌ ಬಾರಿಸಿದ್ದರು.

185 ರನ್‌ ಲೀಡ್‌ನೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ಬಿರುಸಿನ ಬ್ಯಾಟಿಂಗ್‌ ನಡೆಸಲು ಮುಂದಾಗಿ ಸತತವಾಗಿ ವಿಕೆಟ್‌ ಕಳೆದುಕೊಂಡಿತು. ನಾಯಕ ಪ್ಯಾಟ್‌ ಕಮಿನ್ಸ್‌(22)‌ ಮತ್ತು ಅಲೆಕ್ಸ್‌ ಕ್ಯಾರಿ(20*) ರನ್‌ ಗಳಿಸಿದರು. ಇವರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಮೊದಲ ಇನಿಂಗ್ಸ್‌ ಶತಕ ವೀರ ಟ್ರಾವಿಸ್‌ ಹೆಡ್‌ 17 ರನ್‌ ಗಳಿಸಿದರು. ಭಾರತ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 18 ರನ್‌ಗೆ 3 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌ ಮತ್ತು ಆಕಾಶ್‌ ದೀಪ್‌ ತಲಾ 2 ವಿಕೆಟ್‌ ಕಿತ್ತರು.

ಡ್ರಾಗೊಂಡರೂ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 2 ಅಂಕಗಳ ನಷ್ಟ ಎದುರಿಸಿದೆ. ಪಂದ್ಯಕ್ಕೂ ಮುನ್ನಗೆಲುವಿನ ಪ್ರತಿಶತ ಅಂಕ ಶೇ. 57 ಇತ್ತು. ಇದೀಗ 55ಕ್ಕೆ ಕುಸಿದೆ. ಆದರೆ ಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಸದ್ಯ ಮೂರನೇ ಸ್ಥಾನದಲ್ಲೇ ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ಮತ್ತು ಆಸೀಸ್‌ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದೆ. ಭಾರತ ಉಳಿದಿರುವ 2 ಟೆಸ್ಟ್‌ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೇ ಮಾತ್ರ ಫೈನಲ್‌ ತಲುಪಬಹುದು. ಗೆಲುವಿನ ಜತೆಗೆ ಇತರ ತಂಡಗಳ ಫಲಿತಾಂಶ ಕೂಡ ಮಹತ್ವವಾಗಿದೆ.