Tuesday, 17th December 2024

AUS vs IND: ಫಾಲೋಆನ್‌ ತಪ್ಪಿಸಿಕೊಂಡ ಭಾರತ

ಬ್ರಿಸ್ಬೇನ್‌: ಕೆ.ಎಲ್‌ ರಾಹುಲ್‌(84) ಮತ್ತು ರವೀಂದ್ರ ಜಡೇಜಾ(77) ಬಾರಿಸಿದ ಅರ್ಧಶತಕ ಹಾಗೂ ಕೆಳ ಕ್ರಮಾಂಕದಲ್ಲಿ ಬಾಲಂಗೋಚಿಗಳು ನಡೆಸಿದ ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಫಾಲೋಆನ್‌ ಭೀತಿಯಿಂದ ಪಾರಾಗಿದೆ. ಹಲವು ಬಾರಿ ಮಳೆಯಿಂದ ಸ್ಥಗಿತಗೊಂಡು ನಡೆದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 9 ವಿಕೆಟ್‌ಗೆ 252 ರನ್‌ ಬಾರಿಸಿದೆ. ಇನ್ನೂ 193 ರನ್‌ ಹಿನ್ನಡೆಯಲ್ಲಿದೆ. ನಾಳೆ ಅಂತಿಮ ದಿನವಾಗಿದೆ.

4 ವಿಕೆಟ್‌ಗೆ 51 ರನ್‌ ಗಳಿಸಿದ್ದಲ್ಲಿಂದ ಮಂಗಳವಾರ ನಾಲ್ಕನೇ ದಿನದಾಟ ಆರಂಭಿಸಿದ ಭಾರತಕ್ಕೆ ಆರಂಭದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಆಸರೆಯಾದರೆ ಆ ಬಳಿಕ ಆಲ್‌ರೌಂಡರ್‌ ರವೀಂದ್ರ ಜಡೇಜಾ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾದರು. ಉಭಯ ಆಟಗಾರರು ಕೂಡ ಅರ್ಧಶತಕ ಬಾರಿಸಿದರು. ಈ ಜೋಡಿ 6ನೇ ವಿಕೆಟ್‌ಗೆ 67 ರನ್‌ಗಳ ಅತ್ಯಮೂಲ್ಯ ಜತೆಯಾಟ ನಡೆಸಿತು.

33 ರನ್‌ ಗಳಿಸಿದ್ದ ರಾಹುಲ್‌ ಇಂದು 51 ರನ್‌ ಬಾರಿಸಿ ಒಟ್ಟು 84 ರನ್‌ಗಳಿಸಿದರು. ಸ್ಲಿಪ್‌ನಲ್ಲಿ ನಿಂತಿದ್ದ ಸ್ಟೀವನ್‌ ಸ್ಮಿತ್‌ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ನಾಯಕ ರೋಹಿತ್‌ ಶರ್ಮ ಈ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಕಂಡರು. ಕೇವಲ 2 ಬೌಂಡರಿಗೆ ಸೀಮಿತರಾಗಿ 10 ರನ್‌ ಗಳಿಸಿದರು.

ಇದನ್ನೂ ಓದಿ Vijay Hazare Trophy: ಯುಪಿ ತಂಡಕ್ಕೆ ರಿಂಕು ಸಿಂಗ್ ನಾಯಕ

ರಾಹುಲ್‌ ವಿಕೆಟ್‌ ಪತನದ ಬಳಿಕ ರವೀಂದ್ರ ಜಡೇಜಾ ಮತ್ತು ನಿತೀಶ್‌ ರಾಣಾ 8ನೇ ವಿಕೆಟ್‌ಗೆ 53 ರನ್‌ ಒಟ್ಟುಗೂಡಿಸಿ ತಂಡಕ್ಕೆ ಆಸರೆಯಾದರು. ಈ ವೇಳೆ ಹಲವು ಬಾರಿ ಮಳೆಯಿಂದ ಅಡಚಣೆಯಾಯಿತು. ಜಡೇಜಾ 123 ಎಸೆತ ಎದುರಿಸಿ 77 ರನ್‌ ಬಾರಿಸಿದರೆ ನಿತೀಶ್‌ ರೆಡ್ಡಿ 16 ರನ್‌ಗೆ ವಿಕೆಟ್‌ ಕೈಚೆಲ್ಲಿದರು. ಜಡೇಜಾ ಮತ್ತು ನಿತೀಶ್‌ ವಿಕೆಟ್‌ ಬೀಳುತ್ತಿದ್ದಂತೆ ಭಾರತ ಫಾಲೋಆನ್‌ ಭೀತಿಯ ಸಂಕಷ್ಟಕ್ಕೆ ಸಿಲುಕಿತು. ಆದರೆ ವೇಗಿಗಳಾದ ಆಕಾಶ್‌ ದೀಪ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಆಪತ್ಬಾಂಧವರಂತೆ ಅಜೇಯ 39 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಪಾರು ಮಾಡಿದರು.

ಸದ್ಯ ಆಕಾಶ್‌ ದೀಪ್‌ 27*(2 ಬೌಂಡರಿ ಮತ್ತು 1 ಸಿಕ್ಸರ್‌), ಜಸ್‌ಪ್ರೀತ್‌ ಬುಮ್ರಾ 10*(1 ಸಿಕ್ಸರ್‌) ಬಾರಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಆಸೀಸ್‌ ಪರ ನಾಯಕ ಪ್ಯಾಟ್‌ ಕಮಿನ್ಸ್‌ 80 ರನ್‌ಗೆ 4, ಮಿಚೆಲ್‌ ಸ್ಟಾರ್ಕ್‌ 83 ಕ್ಕೆ 3 ವಿಕೆಟ್‌ ಕೆಡವಿದ್ದಾರೆ.