ಬ್ರಿಸ್ಬೇನ್: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೊನೆಗೂ ತಮ್ಮ ಸ್ಪೋಟಕ ಫಾರ್ಮ್‌ಗೆ ಮರಳಿದ್ದಾರೆ. ಗುರುವಾರ ಬ್ರಿಸ್ಬೇನ್‌ನಲ್ಲಿ ಪಾಕಿಸ್ತಾನ ವಿರುದ್ಧ (AUS vs PAK) ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 43 ರನ್ ಸಿಡಿಸಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ,
ಮಳೆ ಕಾಟದ ಹೊರತಾಗಿಯೂ ಈ ಪಂದ್ಯವನ್ನು ಕೇವಲ 7 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಕ್ರೀಸ್‌ಗೆ ಬಂದಿದ್ದ ಮ್ಯಾಕ್ಸ್‌ವೆಲ್, ಪಾಕಿಸ್ತಾನದ ಬೌಲರ್‌ಗಳಿಗೆ ಬೆವರಿಳಿಸಿದರು. ಸ್ಪೋಟಕ ಬ್ಯಾಟ್ ಮಾಡಿದ ಅವರು ಐದು ಮನಮೋಹಕ ಬೌಂಡರಿಗಳು ಹಾಗೂ ಮೂರು ಭರ್ಜರಿ ಸಿಕ್ಸರ್‌ಗಳ ಮೂಲಕ 19 ಎಸೆತಗಳಲ್ಲಿ 43 ರನ್ ಸಿಡಿಸಿ ಅಬ್ಬಾಸ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಆದರೂ ತಮ್ಮ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದರು.
IPL 2025: ಮೆಗಾ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅನ್‌ಸೋಲ್ಡ್ ಆಗಲು 3 ಕಾರಣಗಳು!
10000 ರನ್ ಪೂರೈಸಿ ವಿಶೇಷ ದಾಖಲೆ ಬರೆದ ಮ್ಯಾಕ್ಸ್‌ವೆಲ್
ಪಾಕಿಸ್ತಾನದ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಪಂದ್ಯಕ್ಕೂ ಮುನ್ನ 10000 ಟಿ20 ರನ್‌ಗಳನ್ನು ಪೂರ್ಣಗೊಳಿಸಲು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕೇವಲ 12 ರನ್ ಅಗತ್ಯವಿತ್ತು. ಆದರೆ ನಶೀಮ್ ಶಾ ಅವರ ಒಂದೇ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ 10000 ರನ್‌ಗಳನ್ನು ದಾಟಿದರು. ಒಟ್ಟು 421 ಇನಿಂಗ್ಸ್‌ಗಳನ್ನು ತೆಗೆದುಕೊಂಡಿರುವ ಅವರು, 154ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 10,031 ರನ್‌ಗಳನ್ನು ಹೊಂದಿದ್ದಾರೆ. ಇದರಲ್ಲಿ ಏಳು ಶತಕಗಳು ಹಾಗೂ 54 ಅರ್ಧಶತಕಗಳನ್ನು ಪೂರ್ಣಗೊಳಿಸಿದ್ದಾರೆ.
ಇದರೊಂದಿಗೆ ಚುಟುಕು ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಪೂರ್ಣಗೊಳಿಸಿದ ಆಸ್ಟ್ರೇಲಿಯಾದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಹಾಗೂ ಆರೋನ್ ಫಿಂಚ್ ಈ ಸಾಧನೆಗೆ ಭಾಜನರಾಗಿದ್ದರು. ಸ್ವಯಂಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ 463 ಪಂದ್ಯಗಳಿಂದ 14,562 ರನ್ ಗಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಮ್ಯಾಕ್ಸ್‌ವೆಲ್ ಈ ಸಾಧನೆ ಮಾಡಿದ 16ನೇ ಆಟಗಾರರಾಗಿದ್ದಾರೆ.
'This is why people pay a lot of money to watch this guy bat' #AUSvPAK pic.twitter.com/Zwab5Pnw3j
— cricket.com.au (@cricketcomau) November 14, 2024
ಆಸ್ಟ್ರೇಲಿಯಾ ಪರ 10,000ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಆಟಗಾರರು
- 12,411 ರನ್- ಡೇವಿಡ್ ವಾರ್ನರ್
- 11,458 ರನ್- ಆರೋನ್ ಫಿಂಚ್
- 10,031 ರನ್- ಗ್ಲೆನ್ ಮ್ಯಾಕ್ಸ್‌ವೆಲ್
ಮಿಂಚು ಹರಿಸಿದ ಮ್ಯಾಕ್ಸ್ ವೆಲ್
ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆಸ್ಟ್ರೇಲಿಯಾ, 35 ರನ್‌ಗಳಿಗೆ ಆರಂಭಿಕ ಆಟಗಾರರಾದ ಮ್ಯಾಥ್ಯೂ ಶಾರ್ಟ್ ಹಾಗೂ ಜಾಕ್ ಫ್ರೆಸರ್‌ಗರ್ಕ್ ಅವರ ವಿಕೆಟ್ ಕಳೆದುಕೊಂಡಿತ್ತು. ಟಿಮ್ ಡೇವಿಡ್ ಕೂಡ 8 ರನ್‌ಗೆ ತಮ್ಮ ವಿಕೆಟ್ ಒಪ್ಪಿಸಿದ್ದರು. ಆದರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಗ್ಲೆನ್ ಮ್ಯಾಕ್ಸ್‌ವೆಲ್, ಪಾಕಿಸ್ತಾನ ಬೌಲರ್‌ಗಳ ಮೇಲೆ ಸವಾರಿ ಮಾಡಿ 19 ಎಸೆತಗಳಲ್ಲೇ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 43 ರನ್ ಸಿಡಿಸಿ ಗಮನ ಸೆಳೆದರೆ, ಮತ್ತೊಬ್ಬ ಸ್ಫೋಟಕ ಆಟಗಾರ ಮಾರ್ಕಸ್ ಸ್ಟೋಯ್ನಿಸ್ 7 ಎಸೆತಗಳಲ್ಲಿ 2 ಬೌಂಡರಿ ಒಂದು ಸಿಕ್ಸರ್ ಸಹಿತ ಅಜೇಯ 22 ರನ್ ಬಾರಿಸಿ ತಂಡದ ಮೊತ್ತವನ್ನು 7 ಓವರ್‌ಗಳಲ್ಲಿ 4ವಿಕೆಟ್ ನಷ್ಟಕ್ಕೆ 93 ರನ್‌ಗಳಿಗೆ ಏರಿಸಿದರು.
ಪಾಕಿಸ್ತಾನ ತಂಡಕ್ಕೆ 29 ರನ್‌ಗಳ ಸೋಲು
ಬಳಿಕ 94 ರನ್‌ಗಳ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ 24 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಅಬ್ಬಾಸ್ ಅಫ್ರಿದಿ (20* ರನ್, 2X4,1X6), ಶಾಹೀನ್ ಶಾ ಅಫ್ರಿದಿ (11* ರನ್,1×6) ಹೋರಾಟ ನಡೆಸಿದ ಹೊರತಾಗಿಯೂ 7 ಓವರ್‌ಗಳ ಅಂತ್ಯಕ್ಕೆ 64 ಗಳಿಸಲಷ್ಟೇ ಶಕ್ತವಾಯಿತು ಹಾಗೂ 29 ರನ್‌ಗಳ ಸೋಲು ಕಂಡಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.