ಪರ್ತ್: ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿದೆ. ಪಾಕಿಸ್ತಾನ(AUS vs PAK) ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 8 ವಿಕೆಟ್ ಅಂತರದ ಸೋಲು ಕಾಣುವ ಮೂಲಕ ಸರಣಿ ಸೋಲಿಗೆ ತುತ್ತಾಗಿದೆ. ಪಾಕಿಸ್ತಾನ ಬರೋಬ್ಬರಿ 22 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.
ಪಾಕಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿ ಗೆದ್ದದ್ದು 2002ರಲ್ಲಿ. ಅದು ಕೂಡ ಮೂರು ಪಂದ್ಯಗಳ ಸರಣಿಯಾಗಿತ್ತು. ಸ್ವಾರಸ್ಯವೆಂದರೆ ಅಂದು ಕೂಡ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಸೋತು ಆ ಬಳಿಕದ ಎರಡು ಪಂದ್ಯಗಳನ್ನು ಗೆದ್ದು 2-1 ಅಂತರದಿಂದ ಸರಣಿ ಗೆದ್ದಿತ್ತು. ಇದೀಗ 22 ವರ್ಷದ ಬಳಿಕವೂ ಇದೇ ರೀತಿ 2-1 ಅಂತರದಿಂದ ಪಾಕ್ ಸರಣಿ ಗೆದ್ದಿದೆ.
ಪರ್ತ್ ಸ್ಟೇಡಿಯಂನಲ್ಲಿ ಇಂದು(ಭಾನುವಾರ) ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪಾಕ್ ವೇಗಿಗಳಾದ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಘಾತಕ ದಾಳಿಗೆ ತತ್ತರಿಸಿ 31.5 ಓವರ್‌ಗಳಲ್ಲಿ 140 ರನ್‌ಗೆ ಸರ್ವಪತನ ಕಂಡಿತು. ಅಫ್ರಿದಿ ಮತ್ತು ನಸೀಮ್ ತಲಾ ಮೂರು ವಿಕೆಟ್ ಕಿತ್ತು ಆಸೀಸ್ ಬ್ಯಾಟರ್‌ಗಳ ಸೊಕ್ಕಡಗಿಸಿದರು. ಉಳಿದಂತೆ ಹ್ಯಾರಿಸ್ ರೌಫ್ 2 ವಿಕೆಟ್ ಪಡೆದರು.
ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭಿಕರಾದ ಸೈಮ್ ಅಯೂಬ್(42) ಮತ್ತು ಅಬ್ದುಲ್ಲಾ ಶಫೀಕ್(37) ಜೋಡಿಯ ಉತ್ತಮ ಆರಂಭದ ನೆರವಿನಿಂದ 26.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 143 ರನ್ ಬಾರಿಸಿದರು. ಮಾಜಿ ನಾಯಕ ಬಾಬರ್ ಅಜಂ(28) ಮತ್ತು ಹಾಲಿ ನಾಯಕ ಮೊಹಮ್ಮದ್ ರಿಜ್ವಾನ್(30) ರನ್ ಬಾರಿಸಿ ಅಜೇಯರಾಗಿ ಉಳಿದರು. ಚೊಚ್ಚಲ ನಾಯಕತ್ವದಲ್ಲೇ ಸರಣಿ ಗೆದ್ದ ಹಿರಿಮೆ ರಿಜ್ವಾನ್ ಅವರದ್ದಾಯಿತು.
ಇದನ್ನೂ ಓದಿ IND vs AUS: ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಬ್ಯಾಟಿಂಗ್ ಮರೆತವರಂತೆ ಆಡಿತು. ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್(22) ಮತ್ತು ಸೀನ್ ಅಬೋಟ್(30) ಹೊರತುಪಡಿಸಿ ಉಳಿದವರೆಲ್ಲರೂ ವಿಫಲರಾದರು. ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸೀಸ್‌ಗೆ ತವರಿನಲ್ಲೇ ಸೋಲು ಎದುರಾಗಿರುವುದು ಇದೀಗ ಚಿಂತೆಗೀಡು ಮಾಡಿದೆ. ಅತ್ತ ಸತತ ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ ನೂತನ ನಾಯಕ ರಿಜ್ವಾನ್ ಸಾರಥ್ಯದಲ್ಲಿ ಗೆದ್ದು ಪಾಕ್ ಕ್ರಿಕೆಟ್ ಮಂಡಳಿಯ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಜತೆಗೆ ನಾಯಕತ್ವದ ಬದಲಾವಣೆ ಕೂಡ ಯಶಸ್ಸು ಕಂಡಂತಾಗಿದೆ.